ಉಡುಪಿಯ ಕಾವಿ ಕಲಾವಿದನಿಗೆ ರಾಷ್ಟ್ರೀಯ ಪುರಸ್ಕಾರ

ಉಡುಪಿ: ಭಾರತ ಸರ್ಕಾರದ ಮಾನ್ಯತೆ ಪಡೆದಿರುವ ತೆಲಂಗಾಣದ ಕ್ರಾಫ್ಟ್ ಕೌನ್ಸಿಲ್ ಸಂಸ್ಥೆಯು ಕೊಡ ಮಾಡುವ ಶ್ರೀಮತಿ ಪಿಂಗಳೆ ಕಮಲಾರೆಡ್ಡಿ ಎಕ್ಸಲೆನ್ಸ್ ಇನ್ ಕ್ರಾಫ್ಟ ರಾಷ್ಟ್ರೀಯ ಪುರಸ್ಕಾರವು ಕೊಂಕಣ ತೀರ ಪ್ರದೇಶದ ಕಾವಿ ಕಲೆಯ ಉಳಿವು ಮತ್ತು ಬೆಳೆಸುವಿಕೆಗೆ ಸುಮಾರು 20 ವರ್ಷಗಳಿಂದಲೂ ಸತತವಾಗಿ ಶ್ರಮಿಸುತ್ತಿರುವ ಡಾ. ಜನಾರ್ದನ ಹಾವಂಜೆಯವರಿಗೆ ಲಭಿಸಿದೆ.
ಮಂಗಳೂರಿನ ಶ್ರೀನಿವಾಸ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಹಾಗೂ ಮಣಿಪಾಲದ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಮತ್ತು ಸೈನ್ಸ್ ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ (ವಿಸಿಟಿಂಗ್) ಹಾವಂಜೆಯವರು ಇಂದಿಗೆ ಅಳಿದು ಹೋಗುತ್ತಿ ರುವ ಈ ದೇಶಿಯ ಕಾವಿ ಕಲೆಯ ಉಳಿವಿಗಾಗಿ ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಾವಿ ಕಲೆಯ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸುವ ಕಾರ್ಯವನ್ನು ನಡೆಸುತ್ತಾ ಹಲವಾರು ಕಾರ್ಯಾಗಾರಗಳು, ಶಿಬಿರ ಗಳು ಕಲಾ ಪ್ರದರ್ಶನಗಳು ಮತ್ತು ಅಧ್ಯಯನ ಪ್ರಬಂಧಗಳನ್ನು ಮಂಡಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಹೈದರಾಬಾದ್ ನಲ್ಲಿ ಸಿಸಿಟಿ ಕಮಲ ಸ್ಪೇಸ್ ನಲ್ಲಿ ಇವರ ಕಾವಿ ಕಲಾ ಕೃತಿಗಳ ಪ್ರದರ್ಶನವೂ ನಡೆಯಲಿದೆ.





