ರಕ್ತದ ಕೊರತೆ ನೀಗಿಸಲು ರಕ್ತದಾನ ಶಿಬಿರ ಸಹಕಾರಿ: ಉಡುಪಿ ಎಸ್ಪಿ ಡಾ.ಅರುಣ್
ಜಿಲ್ಲಾ ಡಿಎಆರ್ ಘಟಕದಿಂದ ರಕ್ತದಾನ ಶಿಬಿರ

ಉಡುಪಿ: ರಕ್ತ ಸಂಗ್ರಹದ ಕೊರತೆ ನೀಗಿಸುವ ನಿಟ್ಟಿನಲ್ಲಿ ಇಂಥ ರಕ್ತದಾನ ಶಿಬಿರಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಹೇಳಿದ್ದಾರೆ.
ಶುಕ್ರವಾರ ನಗರದ ಚಂದು ಮೈದಾನದಲ್ಲಿ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಘಟಕದ 1999ನೇ ತಂಡದ ಪೊಲೀಸ್ ಸಿಬ್ಬಂದಿ ಹಾಗೂ ಕೆಎಂಸಿ ಮಣಿಪಾಲ ಇವರ ಸಹಯೋಗದೊಂದಿಗೆ ರಜತ ಸಂಭ್ರಮದ ಪ್ರಯುಕ್ತ ಆಯೋಜಿಸ ಲಾದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
25 ವರ್ಷಗಳ ಪೊಲೀಸ್ ಸೇವೆ ಅಭಿನಂದನೀಯವಾಗಿದ್ದು ಸಮಾಜಕ್ಕೆ ನೀಡಿರುವ ಸೇವೆಯೊಂದಿಗೆ ರಕ್ತದಾನದ ಕಾರ್ಯ ದಲ್ಲಿ ಕೈಜೋಡಿಸಿರುವುದು ಶ್ಲಾಘನೀಯ. ರಕ್ತದಾನದಿಂದ ಆರೋಗ್ಯ ವೃದ್ಧಿಯಾಗಲಿದ್ದು ಈ ಮೂಲಕ ಸಮಾಜಕ್ಕೆ ಮಾದರಿ ಯಾಗಿ ಎಂದ ಅವರು ಪ್ರತಿ ಆರು ತಿಂಗಳಿಗೊಮ್ಮೆ ಇಲಾಖೆಯ ವತಿಯಿಂದ ರಕ್ತದಾನ ಶಿಬಿರವನ್ನು ನಡೆಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಟಿ.ಸಿದ್ದಲಿಂಗಪ್ಪ ವಹಿಸಿದ್ದರು. ಕಾರ್ಯ ಕ್ರಮದಲ್ಲಿ ಕೆಎಂಸಿ ಮಣಿಪಾಲ ರಕ್ತನಿಧಿ ವಿಭಾಗದ ಮುಖ್ಯಸ್ಥ ಡಾ.ಶಮ್ಮಿ ಶಾಸ್ತ್ರೀ ಭಾಗವಹಿಸಿ ರಕ್ತದಾನದ ಮಹತ್ವವನ್ನು ವಿವರಿಸಿದರು.ಡಿಎಆರ್ ಡಿವೈಎಸ್ಪಿ ತಿಮ್ಮಪ್ಪ ಗೌಡ ಜಿ ಉಪಸ್ಥಿತರಿದ್ದರು.
ಡಿಎಆರ್ ಆರ್‌ಪಿಐ ಎಸ್. ರವಿಕುಮಾರ್ ಸ್ವಾಗತಿಸಿ, ಡಿಎಆರ್‌ನ ಆರ್‌ಎಸ್‌ಐ ಬಾಲಸುಬ್ರಹ್ಮಣ್ಯ ವಂದಿಸಿದರು. ಯೋಗೇಶ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಡಿಎಆರ್ ಸಿಬಂದಿಗಳು, ಪೊಲೀಸ್ ಸಿಬಂದಿಗಳು ರಕ್ತದಾನ ಮಾಡಿದರು. ಶಿಬಿರದಲ್ಲಿ ಡಿಎಆರ್ ಕೇಂದ್ರ ಕಚೇರಿಯ ಸುಮಾರು 80 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ ರಕ್ತದಾನ ನಡೆಯಿತು.







