ಬೈಕ್ ಸ್ಕಿಡ್: ಇಂಜಿನಿಯರಿಂಗ್ ವಿದ್ಯಾರ್ಥಿ ಮೃತ್ಯು

ಕಾರ್ಕಳ: ಇಲ್ಲಿಗೆ ಸಮೀಪದ ದೂಪದಕಟ್ಟೆ ಪರ್ಪೆಲೆ ಗುಡ್ಡ ತಿರುವಿನಲ್ಲಿ ಬೈಕೊಂದು ಸ್ಕಿಡ್ ಆಗಿ ಸಂಭವಿಸಿದ ಅಪಘಾತದಲ್ಲಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಯೊಬ್ಬ ಮೃತಪಟ್ಟು, ಮತ್ತೊಬ್ಬರು ಗಾಯಗೊಂಡ ಘಟನೆ ಗುರುವಾರ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಬ್ರಹ್ಮಾವರದ ಆಕಾಶ್ ಕಾಂಚನ್ (18) ಎಂದು ಗುರುತಿಸಲಾಗಿದೆ. ಇವರು ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೊದಲ ವರ್ಷದ ಮೆಕ್ಯಾನಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಸ್ನೇಹಿತರ ಜೊತೆ ಬೈಕ್‌ಗಳಲ್ಲಿ ತೆರಳುತಿದ್ದ ವೇಳೆ ಘಟನೆ ನಡೆದಿದೆ.
ಗುರುವಾರ ಕಾಲೇಜಿನಲ್ಲಿ ವಾರ್ಷಿಕೋತ್ಸವ ನಡೆಯುತಿದ್ದ ಕಾರಣ, ಆಕಾಶ್ ಸ್ನೇಹಿತರೊಂದಿಗೆ ಕಾರ್ಕಳಕ್ಕೆ ತೆರಳಿದ್ದು, ಕಾಲೇಜಿಗೆ ಮರಳುತಿದ್ದಾಗ ಈ ಅಪಘಾತ ನಡೆದಿದೆ. ಬಜಾಜ್ ಪಲ್ಸರ್ ಬೈಕ್‌ನಲ್ಲಿದ್ದ ಅದೀಶ್ ವೇಗವಾಗಿ ಬರುತಿದ್ದಾಗ ತಿರುವಿನಲ್ಲಿ ಸ್ಕಿಡ್ ಆಗಿ ಬಿದ್ದಿದ್ದು, ಹಿಂದಿನಿಂದ ಯಮಹಾ ಎಫ್‌ಝಡ್ ಬೈಕ್‌ನಲ್ಲಿ ಬಂದ ಆಕಾಶ್ ಸಹ ಸ್ಕಿಡ್ ಆಗಿ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದರು.
ತಕ್ಷಣ ಇಬ್ಬರನ್ನೂ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ಆಕಾಶ್ ಮೃತಪಟ್ಟಿದ್ದಾಗಿ ತಿಳಿಸಿದರು. ಗಾಯಗೊಂಡ ಅದೀಶ್‌ರಿಗೆ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







