‘ನಿಷೇಧಿತ ಪದ ಬಳಕೆಗೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ಮೊಕದ್ದಮೆ ದಾಖಲಿಸಿ’
ದಲಿತರ ಕುಂದು ಕೊರತೆ ಸಭೆಯಲ್ಲಿ ನಾಯಕರಿಂದ ಬಲವಾದ ಆಗ್ರಹ

ಉಡುಪಿ: ಸಾರ್ವಜನಿಕ ಕಾಮಗಾರಿಗೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ಉಡುಪಿ ಶಾಸಕ ಯಶ್ಪಾಲ್ ಎ.ಸುವರ್ಣ ಅವರು ಬರೆದ ಪತ್ರದಲ್ಲಿ ಫಲಾನುಭವಿಗಳ ಹೆಸರಿನ ಮುಂದೆ ನಿಷೇಧಿತ ಪದ ಬಳಸಿದ್ದು, ದಲಿತ ದೌರ್ಜನ್ಯ ಕಾಯ್ದೆಯಡಿಯಲ್ಲಿ ಅವರ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಿಸಬೇಕು ಎಂದು ಜಿಲ್ಲೆಯ ವಿವಿಧ ದಲಿತ ಮುಖಂಡರು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯನ್ನು ಬಲವಾಗಿ ಆಗ್ರಹಿಸಿದರು.
ಸುಮಾರು ಎರಡು ವರ್ಷಗಳ ಬಳಿಕ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರ ಅಧ್ಯಕ್ಷತೆಯಲ್ಲಿ ಮಣಿಪಾಲ ರಜತಾ ದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಮೊದಲ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಹಿತರಕ್ಷಣೆ ಹಾಗೂ ಕುಂದುಕೊರತೆ ಸಭೆಯಲ್ಲಿ ಅವರು ಒಕ್ಕೊರಳಿನಿಂದ ಈ ಆಗ್ರಹ ಮಾಡಿದರು.
ದಲಿತ ನಾಯಕರಾದ ಜಯನ್ ಮಲ್ಪೆ ಹಾಗೂ ಉದಯಕುಮಾರ್ ತಲ್ಲೂರು, ಗಂಗೊಳ್ಳಿಯ ಪ್ರಕರಣವೊಂದರ ಕುರಿತು ಮಾತನಾಡುತಿದ್ದಾಗ ಈ ವಿಷಯವನ್ನು ಎತ್ತಿದರು. ದೌರ್ಜನ್ಯ ತಡೆ ಕಾಯ್ದೆ 17ರ ಅಡಿಯಲ್ಲಿ ಇಂಥ ವಿಷಯದಲ್ಲಿ ತಕ್ಷಣ ಮೊಕದ್ದಮೆ ದಾಖಲಿಸಬೇಕಾಗಿತ್ತು ಎಂದು ನ್ಯಾಯವಾದಿ ತಲ್ಲೂರು ಒತ್ತಾಯಿಸಿದರು.
ಜಯನ್ ಮಲ್ಪೆ ಮಾತನಾಡಿ, ‘ಹರಿಜನ’ ಪದ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೆ ಶಾಸಕರು ಈ ಪದವನ್ನು ಪತ್ರದಲ್ಲಿ ಹಲವು ಬಾರಿ ಬಳಸಿದ್ದಾರೆ. ಫಲಾನುಭವಿಗಳ ಹೆಸರಿನ ಮುಂದೆ ಅವರು ಈ ನಿಷೇಧಿತ ಪದವನ್ನು ಬಳಸಿದ್ದಲ್ಲದೇ, ಬಬ್ಬುಸ್ವಾಮಿ ದೇವಸ್ಥಾನ ಎಂದು ಹೇಳದೇ ಹರಿಜನ ದೇವಸ್ಥಾನ ಎಂದು ಉದ್ದೇಶಪೂರ್ವಕವಾಗಿ ಉಲ್ಲೇಖಿಸಿದ್ದಾರೆ ಎಂದರು.
ಉಡುಪಿಯ ಈ ಜನಪ್ರತಿನಿಧಿಗೆ ಇದು ಗೊತ್ತಿಲ್ಲದ ವಿಷಯವೇ ಅಲ್ಲ. ಅವರು ಉದ್ದೇಶಪೂರ್ವಕವಾಗಿ ಈ ಪದವನ್ನು ಬಳಸಿ ದ್ದಾರೆ. ಇದು ಪತ್ರಿಕೆಗಳಲ್ಲಿ ಬಂದ ಬಳಿಕವೂ ಅವರು ಸೌಜನ್ಯಕ್ಕಾಗಿಯಾದರೂ ವಿಷಾಧ, ಕ್ಷಮೆಯನ್ನು ಕೋರಿಲ್ಲ. ಆದ್ದರಿಂದ ತಕ್ಷಣ ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಅವರು ಬಲವಾಗಿ ಒತ್ತಾಯಿಸಿದರು.
ಶಾಸಕರು ಪತ್ರ ಬರೆದಿರುವುದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಿಗೆ. ಅವರು ಈ ಪತ್ರವನ್ನು ನೋಡಿದಾ ಕ್ಷಣ ಅವರೇ ಖುದ್ದಾಗಿ ಕೇಸು ದಾಖಲಿಸಬೇಕಿತ್ತು. ಅವರು ಸಹ ಇದನ್ನು ಮಾಡಿಲ್ಲ. ಉಳಿದವರ ಮೇಲೆ ಕೇಸು ದಾಖಲಿಸುವ ಅಧಿಕಾರಿಗಳು ಯಾಕೆ ಶಾಸಕರ ಮೇಲೆ ಪ್ರಕರಣ ದಾಖಲಿಸಿಲ್ಲ ಎಂದು ಪ್ರಶ್ನಿಸಿದರು.
ಈ ಹಂತದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ಈ ಬಗ್ಗೆ ಕಾನೂನು ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಉತ್ತರಿಸಿದಾಗ, ಉದಯಕುಮಾರ್ ತಲ್ಲೂರು ಹಾಗೂ ಎಸ್ಪಿ ನಡುವೆ ಜೋರಾದ ವಾಗ್ವಾದ ನಡೆಯಿತು. ಕೊನೆಗೂ ಮುಂದಿನ ಕ್ರಮ ಕೈಗೊಳ್ಳುವ ಭರವಸೆಯನ್ನು ಜಿಲ್ಲಾಧಿಕಾರಿ ಹಾಗೂ ಎಸ್ಪಿಯವರು ನೀಡಿದ ಬಳಿಕ ವಿವಾದ ತಣ್ಣಗಾಯಿತು.
ಡಿಸಿ ಮನ್ನಾ ಭೂಮಿ ಸಮಸ್ಯೆಗೆ ಸಭೆ: ಸಭೆಯಲ್ಲಿ ಪ್ರಧಾನವಾಗಿ ಪ್ರಸ್ತಾಪವಾದ ಮತ್ತೊಂದು ವಿಷಯ ಜಿಲ್ಲೆಯಲ್ಲಿರುವ ಡಿಸಿ ಮನ್ನಾ ಭೂಮಿಯ ಗುರುತಿಸುವಿಕೆಗೆ ಸಂಬಂಧಿಸಿತ್ತು. ಇದರ ಕುರಿತು ಸಾಕಷ್ಟು ಪ್ರಶ್ನೆಗಳು ಜಿಲ್ಲಾಡಳಿತಕ್ಕೆ ಬಂದಿದ್ದು ಈ ಬಗ್ಗೆಯೂ ದಲಿತ ನಾಯಕರು ಪದೇ ಪದೇ ಜಿಲ್ಲಾಡಳಿತವನ್ನು ತರಾಟೆ ತೆಗೆದುಕೊಂಡರಲ್ಲದೇ, ಈ ವಿಷಯಕ್ಕೆ ಸಂಬಂಧಿಸಿ ದಂತೆ ಅಧಿಕಾರಿಗಳ ಧೋರಣೆ, ನಡೆಯ ಕುರಿತಂತೆ ತೀವ್ರವಾದ ಆಕ್ರೋಶವನ್ನೂ ಹೊರಹಾಕಿದರು.
ಕೊನೆಗೆ ಜಿಲ್ಲೆಯ ಡಿಸಿ ಮನ್ನಾ ಭೂಮಿ ವಿಷಯಕ್ಕೆ ಸಂಬಂಧಿಸಿದಂತೆ ಶೀಘ್ರವೇ ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕ ಸಭೆ ಕರೆಯುವು ದಾಗಿ ಹಾಗೂ ಇನ್ನು ಮುಂದೆ ಆಯಾ ತಾಲೂಕು ಮಟ್ಟದಲ್ಲೇ ಈ ಬಗ್ಗೆ ತಹಶೀಲ್ದಾರ್ ಮೂಲಕ ಸಭೆ ಕರೆದು ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಒಪ್ಪಿಗೆ ಸೂಚಿಸಿದರು.
ಹಿರಿಯ ದಲಿತ ಮುಖಂಡ ಗೋಪಾಲಕೃಷ್ಣ ಕುಂದಾಪುರ ಅವರು ತಾನು 2017ರಿಂದಲೇ ಡಿಸಿ ಮನ್ನಾ ಭೂಮಿ ಬಗ್ಗೆ ಒತ್ತಾಯಿಸುತ್ತಲೇ ಬಂದಿದ್ದೇನೆ. ಕುಂದಾಪುರ ಮತ್ತು ಬೈಂದೂರು ತಾಲೂಕುಗಳಲ್ಲಿರುವ ಡಿಸಿ ಮನ್ನಾ ಭೂಮಿಯ ಸಂಪೂರ್ಣ ವಿವರಗಳನ್ನು ಪಟ್ಟಿ ಮಾಡಿ ನೀಡಿದ್ದೇನೆ. ಕೂಡಲೇ ಅದನ್ನು ಸರ್ವೆ ಮಾಡಿಸಿ ಭೂಮಿಯನ್ನು ಗುರುತಿಸಿ ಎಂದು ಒತ್ತಾಯಿಸುತ್ತಲೇ ಬಂದಿದ್ದೇನೆ. ಆದರೆ ಇಷ್ಟು ವರ್ಷವಾದರೂ ವಿಷಯದಲ್ಲಿ ಯಾವುದೇ ಪ್ರಗತಿ ಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿ ಗ್ರಾಮದಲ್ಲೂ ಡಿಸಿ ಮನ್ನಾ ಭೂಮಿ ಇದ್ದರೂ, ದಲಿತರು ಈಗಲೂ ತಮ್ಮದೇ ಆದ ಒಂದು ತುಂಡು ನೆಲವಿಲ್ಲದೇ ಬದುಕುತಿದ್ದಾರೆ. ಈ ಭೂಮಿಯನ್ನು ಕಂಡಕಂಡವರು, ಬಲಾಢ್ಯರು ಅತಿಕ್ರಮಿಸಿಕೊಂಡು ಬೇಲಿ ಹಾಕಿಕೊಂಡರೆ, ಅಧಿಕಾರಿ ಗಳು ಕಣ್ಮುಚ್ಚಿಕೊಂಡಿರುತ್ತಾರೆ. ಆದರೆ ದಲಿತರು ಕಾನೂನುಬದ್ಧವಾಗಿ ಅರ್ಜಿ ಸಲ್ಲಿಸಿ ಭೂಮಿ ಕೇಳಿದರೆ 5-6 ವರ್ಷಗಳಾ ದರೂ ಅದಕ್ಕೆ ಯಾವುದೇ ಸಕಾರಾತ್ಮಕ ಉತ್ತರ ನೀಡುವುದಿಲ್ಲ ಎಂದು ಹಲವು ದಲಿತ ಮುಖಂಡರು ದೂರಿದರು.
ಸಭೆಯಲ್ಲಿ ಸಾಕಷ್ಟು ಮಂದಿ ದಲಿತ ಮನ್ನಾ ಭೂಮಿಯ ಕುರಿತಂತೆ ಸಾಕಷ್ಟು ಪ್ರಕರಣಗಳನ್ನು ಜಿಲ್ಲಾಡಳಿತದ ಮುಂದೆ ತೆರೆದಿಟ್ಟರು. ಈ ಬಗ್ಗೆ ತಕ್ಷಣ ಗಮನ ಹರಿಸುವ ಹಾಗೂ ತಾಲೂಕು ಮಟ್ಟದಲ್ಲೇ ಸಭೆ ಕರೆಯುವ ಬಗ್ಗೆ ತಹಶೀಲ್ದಾರ್‌ಗಳಿಗೆ ಸೂಚನೆ ನೀಡುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.
3 ತಿಂಗಳಿಗೊಮ್ಮೆ ಸಭೆ ಕರೆಯಿರಿ: ಸಭೆಯ ಪ್ರಾರಂಭದಲ್ಲೇ ಉದಯಕುಮಾರ್ ತಲ್ಲೂರು ಅವರು ದಲಿತ ದೌರ್ಜನ್ಯ ಕಾಯ್ದೆಯ 17ರಡಿಯಲ್ಲಿ ಪ್ರತಿ 3 ತಿಂಗಳಿಗೊಮ್ಮೆ ದಲಿತ ಕುಂದು ಕೊರತೆ ಸಭೆಯನ್ನು ಕಡ್ಡಾಯವಾಗಿ ಕರೆಯಬೇಕಾಗಿತ್ತು. ಆದರೆ ಈಗ ವರ್ಷಗಳಾದರೂ ಸಭೆಯನ್ನು ಕರೆಯುತ್ತಿಲ್ಲ. ಸುಮಾರು ಎರಡು ವರ್ಷಗಳ ಬಳಿಕ ಜಿಲ್ಲಾಮಟ್ಟದಲ್ಲಿ ಈ ಸಭೆ ಕರೆಯಲಾಗಿದೆ ಎಂದರು.
ಜಿಲ್ಲಾಧಿಕಾರಿಗಳು ಮೊದಲು ಬರುವ ಮೇ 23-24ಕ್ಕೆ ಮುಂದಿನ ಸಭೆ ಕರೆಯುವುದಾಗಿ ಈಗಲೇ ಸಭೆಯಲ್ಲಿ ನಿರ್ಣಯ ಪ್ರಕಟಿಸಬೇಕು ಎಂದು ಅವರು ಒತ್ತಾಯಿಸಿದರು. ಸಭೆ ಕರೆಯಿರಿ ಎಂದು ನಾವು ಬೇಡಿಕೊಳ್ಳುವುದಲ್ಲ. ಅದು ನಮ್ಮ ಹಕ್ಕಾಗಿದೆ. ಆದ್ದರಿಂದ ಇನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ಕರೆಯಬೇಕು ಎಂದು ಆಗ್ರಹಿಸಿದರು.
ಅನುದಾನ ಬಳಕೆಗೆ ಸೂಚನೆ: ಸರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಶ್ರೇಯೋಭಿವೃದ್ಧಿಗೆ ಮೀಸಲಿರಿಸಿರುವ ಅನುದಾನವನ್ನು ಪೂರ್ಣ ಪ್ರಮಾಣ ದಲ್ಲಿ ಬಳಕೆ ಮಾಡಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ನಿಗದಿತ ಕಾಲಾವಧಿ ಯಲ್ಲಿ ಕೈಗೊಳ್ಳಬೇಕು. ತಪ್ಪಿದ್ದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ, ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸರಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಅನೇಕ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಇವುಗಳ ಬಗ್ಗೆ ಅವರಿಗೆ ಅರಿವು ಮೂಡಿಸಿ, ಅರ್ಹ ಫಲಾನುಭವಿಗಳು ಈ ಯೋಜನೆ ಗಳ ಲಾಭ ಪಡೆಯು ವಂತೆ ಮಾಡುವುದು ಅಧಿಕಾರಿಗಳ ಆದ್ಯ ಕರ್ತವ್ಯ ಎಂದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕಾಲನಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್‌ಚ್ಛಕ್ತಿ ಸೌಲಭ್ಯ, ರಸ್ತೆ, ಚರಂಡಿ, ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು. ಇಂದಿನ ಕುಂದುಕೊರತೆ ಸಭೆಯಲ್ಲಿ ಬಂದಿರುವ ಅಹವಾಲು ಗಳನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಆದ್ಯತೆಯ ಮೇಲೆ ನಿಯಮಾನುಸಾರ ಕ್ರಮಕೈಗೊಳ್ಳಬೇಕೆಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ, ಡಿವೈಎಸ್‌ಪಿ ಸಿದ್ದಲಿಂಗಪ್ಪ, ಸಹಾಯಕ ಕಮಿಷನರ್ ರಶ್ಮಿ ಎಸ್, ಡಿಎಫ್‌ಓ ಗಣಪತಿ, ತರಬೇತಿ ನಿರತ ಐಪಿಎಸ್ ಅಧಿಕಾರಿ ಹರ್ಷಪ್ರಿಯಂವದ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ತಹಶೀಲ್ದಾರ್‌ಗಳು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾಡಳಿತ ಮುಂದೆ ದೂರುಗಳ ಮೂಟೆ
ಸಭೆಯಲ್ಲಿ ಮಾತನಾಡಿದ ವಿವಿಧ ದಲಿತ ಸಂಘಟನೆಗಳ ಮುಖಂಡರು, ನಾಯಕರು ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಮೀಸಲಿರಿಸಿದ ಅನುದಾನ ದುರ್ಬಳಕೆ ಆಗಿರುವ ಬಗ್ಗೆ, ಡಿಸಿ ಮನ್ನಾ ಜಾಗವನ್ನು ಮಂಜೂರು ಮಾಡಲು, ನಿವೇಶನ ಹಂಚಿಕೆ ಮಾಡಲು, ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ನಿಗದಿತ ಪ್ರಮಾಣದ ಆಹಾರ ಪದಾರ್ಥಗಳು ವಿತರಣೆ ಆಗದಿರುವ ಬಗ್ಗೆ, ಅಂಬೇಡ್ಕರ್ ಭವನಗಳ ದುಸ್ಥಿತಿ, ನಮೂನೆ 50, 53, 57ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಭೂಮಿಯನ್ನು ಹಂಚಿಕೆ ಮಾಡುವಂತೆ, ಬೈಂದೂರಿನಲ್ಲಿ ಪೌರಕಾರ್ಮಿಕರಿಗೆ ವಸತಿ ವ್ಯವಸ್ಥೆ ಮಾಡುವಂತೆ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಯನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೀಡುವಂತೆ, ವಿವಿಧ ಹುದ್ದೆಗಳಲ್ಲಿ ರೋಸ್ಟರ್ ಪದ್ಧತಿಯನ್ನು ಕಡೆಗಣಿಸುವ ಬಗ್ಗೆ ದೂರುಗಳ ಸರಮಾಲೆಯನ್ನೇ ಸಭೆಯ ಮುಂದಿಟ್ಟರು.







