ರಂಗಭೂಮಿ ಮನುಷ್ಯ ಸಂಬಂಧ ಬೆಸೆಯುವ ಮಾಧ್ಯಮ: ಎಚ್.ಜರ್ನಾದನ
ಸುಮನಸಾ ಕೊಡವೂರು ಏಳು ದಿನಗಳ ರಂಗ ಹಬ್ಬಕ್ಕೆ ಚಾಲನೆ

ಉಡುಪಿ: ರಂಗಭೂಮಿ ಮನುಷ್ಯ ಮನುಷ್ಯರ ಮಧ್ಯೆ ಸಂಬಂಧ ಬೆಸೆಯುವ ಮಾಧ್ಯಮ. ಮನುಷ್ಯ ಮನುಷ್ಯರನ್ನು ಮಾನವೀಯತೆಯಿಂದ ನೋಡಬೇಕೆಂಬ ಧರ್ಮಸಾರ ರಂಗಭೂಮಿಯಲ್ಲಿ ಅಡಗಿದೆ ಎಂದು ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಎಚ್.ಜರ್ನಾದನ(ಜನ್ನಿ) ಹೇಳಿದ್ದಾರೆ.
ಉಡುಪಿ ಸುಮನಸಾ ಕೊಡವೂರು ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಾರತ ಸರಕಾರದ ಸಂಸ್ಕೃತಿ ಸಚಿವಾಲಯ, ಉಡುಪಿ ನಗರಸಭೆ ಸಹಕಾರದೊಂದಿಗೆ ಉಡುಪಿ ಅಜ್ಜರಕಾಡು ಭುಜಂಗಪಾರ್ಕ್ ಬಯಲು ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾದ ಏಳು ದಿನಗಳ ರಂಗ ಹಬ್ಬವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ರಂಗಭೂಮಿಯು ಸತ್ಯವನ್ನು ಸ್ಥಾಪಿಸುವ ರಂಗಾವರಣವಾಗಿದೆ. ಇಲ್ಲಿ ಸುಳ್ಳು ಸತ್ಯ, ನೋವು ನಲಿವು, ಸುಖ ದುಃಖ, ಗುಣ ಅವಗುಣಗಳಿರುತ್ತವೆ. ಕೊನೆಯದಾಗಿ ನಾವು ಪ್ರೇಕ್ಷಕರಿಗೆ ಹಾಗೂ ಸಮಾಜಕ್ಕೆ ಸುಖ, ಉಲ್ಲಾಸ, ಸತ್ಯ ಹಾಗೂ ಗುಣವಂತಿಕೆಯನ್ನು ಹಂಚಿಕೆ ಮಾಡುವ ಕಾರ್ಯ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಒಂದೇ ದೇಶ, ಏಕ ಸಂಸ್ಕೃತಿ ಎಂಬುದು ವಿಕೃತ. ಇಡೀ ಜಗತ್ತಿಗೆ ಭಾರತವು ಭವ್ಯ ದೇಶವಾಗಿ ಕಾಣಲು ಇಲ್ಲಿನ ಬೇರೆ ಬೇರೆ ಭಾಷೆಗಳು, ಭಾವಗಳು, ಜನಾಂಗಗಳು ಎಲ್ಲರು ಒಟ್ಟಿಗೆ ಸೇರಿ ಸಂವಿಧಾನ ಪ್ರಜಾಪ್ರಭುತ್ವದ ನೆಲೆಯಲ್ಲಿ ಬದುಕುತ್ತಿರುವುದೇ ಕಾರಣವಾಗಿದೆ. ಕಲಾವಿದರು ಮಾನವೀಯ ಧರ್ಮವನ್ನು ನಾಟಕದ ಮೂಲಕ ಹೆಣೆಯುವ ಕಾರ್ಯ ಮಾಡುತ್ತಿದ್ದಾರೆ. ಇಲ್ಲಿ ನಾನು ಎಂಬುದಿಲ್ಲ. ನಾವು ಎಂಬ ಸಾಮೂಹಿಕ ಭಾವವನ್ನು ಕಟ್ಟುವ ಕ್ರಿಯಾತ್ಮಕ ಮಾಧ್ಯಮವೇ ರಂಗಭೂಮಿ ಆಗಿದೆ ಎಂದರು.
ಅಧ್ಯಕ್ಷತೆಯನ್ನು ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ವಹಿಸಿದ್ದರು. ಈ ಸಂದರ್ಭದಲ್ಲಿ ಕಲಾವಿದೆ ಗೀತಾ ಸುರತ್ಕಲ್ ಅವರಿಗೆ ರಂಗ ಸಾಧಕ ಸನ್ಮಾನ ನೆರವೇರಿಸಲಾಯಿತು. ಉದ್ಯಮಿ ಗಳಾದ ಸಾಧು ಸಾಲ್ಯಾನ್, ನವೀನ್ ಅಮೀನ್ ಶಂಕರಪುರ, ಕೊಡಂಕೂರು ಶ್ರೀಶಿರಿಡಿ ಸಾಯಿಬಾಬಾ ಮಂದಿರದ ಧರ್ಮ ದರ್ಶಿ ದಿವಾಕರ್ ಶೆಟ್ಟಿ, ನೂತನ್ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಮಹಾಪ್ರಬಂಧಕ ಗಣೇಶ್ ಶೇರಿಗಾರ್ ಮುಖ್ಯ ಅತಿಥಿಗಳಾಗಿದ್ದರು.
ವೇದಿಕೆಯಲ್ಲಿ ಸಂಸ್ಥೆಯ ಎಂ.ಎಸ್.ಭಟ್, ಭಾಸ್ಕರ ಪಾಲನ್ ಉಪಸ್ಥಿತರಿದ್ದರು. ಪ್ರಕಾಶ್ ಜಿ.ಕೊಡವೂರು ಸ್ವಾಗತಿಸಿದರು. ಚಂದ್ರಕಾಂತ್ ಕುಂದರ್ ವಂದಿಸಿದರು. ದಯಾನಂದ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಬೆಂಗಳೂರು ಸುಸ್ಥಿರ ಪ್ರತಿಷ್ಠಾನ ತಂಡದಿಂದ ಸರಸ ವಿರಸ ಸಮರಸ ಕನ್ನಡ ನಾಟಕ ಪ್ರದರ್ಶನಗೊಂಡಿತು.







