ಚೆಕ್‌ಬೌನ್ಸ್ ಪ್ರಕರಣ: ಆರೋಪಿಗೆ ಶಿಕ್ಷೆ

ಕಾರ್ಕಳ, ಫೆ.26: ಚೆಕ್ ಬೌನ್ಸ್ ಪ್ರಕರಣದ ಆರೋಪಿಗೆ ಒಂದು ತಿಂಗಳೊಳಗೆ ಹಣ ಪಾವತಿಸದಿದ್ದರೆ 18 ತಿಂಗಳ ಜೈಲುಶಿಕ್ಷೆ ವಿಧಿಸಿ ಕಾರ್ಕಳದ ನ್ಯಾಯಾ ಲಯವು ಆದೇಶ ನೀಡಿದೆ.
ಮಾಡಾಮಕ್ಕಿ ಗ್ರಾಮದ ಕಾಸನಮಕ್ಕಿ ಕೊಡ್ಸನ್ ಬೈಲು ನಿವಾಸಿ ದಿನಕರ ನಾಗು ಶೆಟ್ಟಿ ಶಿಕ್ಷೆಗೆ ಗುರಿಯಾಗಿರುವ ಆರೋಪಿ. ಈತ ನಾಡ್ಪಾಲು ಗ್ರಾಮದ ಬೈದೆ ಬೆಳಾರ ನಿವಾಸಿ ಶಿವರಾಂ ಪೂಜಾರಿ ಎಂಬವರಿಂದ 2016ರಲ್ಲಿ ಮೂರು ತಿಂಗಳ ಮಟ್ಟಿಗೆ 3,32,000ರೂ. ಹಣವನ್ನು ಪಡೆದಿದ್ದು, ಮರು ಪಾವತಿಗಾಗಿ ದಿನಕರ್ ಶೆಟ್ಟಿ 3 ಚೆಕ್‌ಗಳನ್ನು ನೀಡಿದ್ದನು.
ಬಳಿಕ ಬ್ಯಾಂಕಿನಲ್ಲಿ ಚೆಕ್ ಹಾಕಿದ್ದಾಗ ಬೌನ್ಸ್ ಆಗಿದ್ದು, ಈ ಹಿನ್ನಲೆಯಲ್ಲಿ ಶಿವರಾಮ ಪೂಜಾರಿ ಕಾರ್ಕಳ ನ್ಯಾಯಾಲಯದಲ್ಲಿ ಆತನ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಈ ಕುರಿತು ವಿಚಾರಣೆ ನಂತರ ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ದಿನಕರ್ ಶೆಟ್ಟಿ ಆರೋಪಿ ಎಂದು ನ್ಯಾಯಾಲಯ ಪರಿಗಣಿಸಿ, ಒಂದು ತಿಂಗಳ ಒಳಗೆ ಖರ್ಚು ವೆಚ್ಚಗಳು ಸೇರಿ 4,35,000ರೂ. ಹಣವನ್ನು ಶಿವರಾಮ ಪೂಜಾರಿಗೆ ನೀಡಬೇಕು. ತಪ್ಪಿದ್ದಲ್ಲಿ ಆರು ತಿಂಗಳ ಪ್ರತ್ಯೇಕ ಮೂರು ಪ್ರಕರಣಗಳು ಸೇರಿ ಒಟ್ಟು 18 ತಿಂಗಳ ಜೈಲುಶಿಕ್ಷೆಯನ್ನು ನೀಡಿ ನ್ಯಾಯಾಧೀಶರು ಆದೇಶ ನೀಡಿದರು. ಶಿವರಾಮ ಪೂಜಾರಿ ಪರ ನ್ಯಾಯವಾದಿ ಎಚ್.ರತನ್ ಕುಮಾರ್ ಹೆಬ್ರಿ ವಾದ ಮಂಡಿಸಿದ್ದಾರೆ.







