ಮಣಿಪಾಲ: ಅಖಿಲ ಭಾರತ ಅಂತರ ವಿವಿ ಮಹಿಳಾ ಕ್ರಿಕೆಟ್‌ಗೆ ಚಾಲನೆ
ನಾಲ್ಕು ವಲಯಗಳ 16 ತಂಡಗಳಿಂದ ಸ್ಪರ್ಧೆ

ಉಡುಪಿ: ಮಣಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ), ಭಾರತೀಯ ವಿವಿಗಳ ಸಂಘದ ಸಹಯೋಗ ದೊಂದಿಗೆ ಮಣಿಪಾಲದ ಎಂಡ್‌ಪಾಯಿಂಟ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಯೋಜಿಸಿರುವ 2023-24ನೇ ಸಾಲಿನ ಅಖಿಲ ಭಾರತ ಅಂತರ ವಲಯ ಅಂತರ ವಿಶ್ವವಿದ್ಯಾಲಯ ಮಹಿಳಾ ಕ್ರಿಕೆಟ್ ಟೂರ್ನಿ ಇಂದು ಸಂಜೆ ಉದ್ಘಾಟನೆಗೊಂಡಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಭಾಗವಹಿಸಿದ್ದ ಮಾಹೆ ಮಣಿಪಾಲದ ಕುಲಪತಿ ಲೆ.ಜ.(ಡಾ.) ಎಂ.ಡಿ. ವೆಂಕಟೇಶ್ ಕ್ರಿಕೆಟ್ ಟೂರ್ನಿ ಯನ್ನು ಉದ್ಘಾಟಿಸಿದರು. ಕ್ರೀಡೆಯಲ್ಲಿ ಎಲ್ಲರೂ ಒಳಗೊಳ್ಳುವ ಮತ್ತು ಶ್ರೇಷ್ಠ ಸಂಸ್ಕೃತಿಯನ್ನು ಬೆಳೆಸುವ ನಮ್ಮ ಬದ್ಧತೆಗೆ ಇದು ಸಾಕ್ಷಿಯಾಗಿದೆ. ದೇಶದ ಪ್ರತಿಭಾವಂತ ಕ್ರೀಡಾಪಟುಗಳನ್ನು ಮೈದಾನದಲ್ಲಿ ವೀಕ್ಷಿಸು ವುದು ನಮ್ಮ ಯುವ ಜನಾಂಗದ ಅಪರಿಮಿತ ಸಾಮರ್ಥ್ಯದ ಮೇಲಿನ ನಮ್ಮ ನಂಬಿಕೆಯನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, ಮಹಿಳೆಯರ ಸಬಲೀಕರಣ ಹಾಗೂ ಗುರುತಿಸುವಿಕೆಗೆ ಕ್ರೀಡೆ ಯಲ್ಲಿ ಇಷ್ಟೊಂದು ತಂಡಗಳ ಭಾಗವಹಿಸುವಿಕೆ ದ್ಯೋತಕವಾಗಿದೆ. ಇಲ್ಲಿ ಭಾಗವಹಿಸಿದ ಮಹಿಳಾ ಕ್ರಿಕೆಟಿಗರು ಮುಂದೆ ದೇಶವನ್ನು ಪ್ರತಿನಿಧಿಸುವ ಅವಕಾಶ ಪಡೆಯಲಿ ಎಂದವರು ಹಾರೈಸಿದರು.
ಮಾಹೆಯ ಸಹ ಕುಲಪತಿ (ಆರೋಗ್ಯ ವಿಜ್ಞಾನ) ಡಾ. ಶರತ್ ಕೆ ರಾವ್ ಅವರು ವಿದ್ಯಾರ್ಥಿಗಳ ಮತ್ತು ಸಂಸ್ಥೆಯ ಸಮಗ್ರ ಅಭಿವೃದ್ಧಿಯಲ್ಲಿ ಕ್ರೀಡೆಯ ಮಹತ್ವವನ್ನು ಒತ್ತಿ ಹೇಳಿದರು. ಕ್ರಿಕೆಟ್‌ನಂತಹ ಕ್ರೀಡೆಗಳು ನಮ್ಮ ವಿದ್ಯಾರ್ಥಿ ಗಳ ದೈಹಿಕ ಸಾಮರ್ಥ್ಯಗಳಿಗೆ ಸವಾಲು ಹಾಕುವುದಲ್ಲದೆ, ಅವರಲ್ಲಿ ಸಾಂಘಿಕ ಕೆಲಸ, ನಾಯಕತ್ವ ಮತ್ತು ಸ್ಥಿತಿಸ್ಥಾಪಕತ್ವದ ಸದ್ಗುಣ ಗಳನ್ನು ತುಂಬುತ್ತದೆ ಎಂದರು.
ಕಾರ್ಯಕ್ರಮದ ಕೊನೆಯಲ್ಲಿ ಕ್ರಿಕೆಟ್ ಕ್ಷೇತ್ರದಲ್ಲಿ ಅತ್ಯುತ್ತಮ ಪ್ರದರ್ಶನ ಮತ್ತು ಕ್ರೀಡಾಸ್ಫೂರ್ತಿಯನ್ನು ಮೆರೆದ ಇಬ್ಬರು ಸ್ಥಳೀಯರನ್ನು ಸನ್ಮಾನಿಸಲಾಯಿತು. ಭಾರತ ಎ ತಂಡವನ್ನು ಪ್ರತಿನಿಧಿಸಿರುವ ಉಡುಪಿಯ ನಿಶ್ಚಿತ್ ಪೈ ಮತ್ತು 2023ರಲ್ಲಿ ಕರ್ನಾಟಕ 19 ವರ್ಷದೊಳಗಿನ ಮಹಿಳಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ ಆಲ್‌ರೌಂಡರ್ ತೇಜಸ್ವಿನಿ ಉದಯ್ ಕುಮಾರ್ ಅವರು ಸನ್ಮಾನಗೊಂಡ ಕ್ರಿಕೆಟಿಗರು.
ಮಾಹೆ ವಿವಿಯ ಕ್ರೀಡಾ ಕಾರ್ಯದರ್ಶಿ ಡಾ.ವಿನೋದ್ ಸಿ. ನಾಯಕ್ ಅವರು ಅತಿಥಿಗಳನ್ನು ಸ್ವಾಗತಿಸಿದರೆ, ಡಾ.ಎಚ್. ಎಸ್.ಬಲ್ಲಾಳ್ ಟ್ರೋಫಿ ಅನಾವರಣಗೊಳಿಸಿದರು. ಟೂರ್ನಿಯ ಸಂಚಾಲಕ ಡಾ.ಉಪೇಂದ್ರ ನಾಯಕ್ ತಂಡಗಳನ್ನು ಪರಿಚಯಿಸಿದರೆ, ಡಾ.ದೀಪಕ್ ರಾಮ್ ಬಾಯರಿ ವಂದಿಸಿದರು.
16 ವಿವಿ ಮಹಿಳಾ ತಂಡಗಳ ಸ್ಪರ್ಧೆ
ಮಣಿಪಾಲದ ಎಂಡ್‌ಪಾಯಿಂಟ್ ಕ್ರೀಡಾಂಗಣದಲ್ಲಿ ಮಾ.5ರವರೆಗೆ ನಡೆಯುವ 2023-24ನೇ ಸಾಲಿನ ಮಹಿಳೆಯರ ಅಖಿಲ ಭಾರತ ಅಂತರ ವಲಯ ಅಂತರ ವಿಶ್ವವಿದ್ಯಾನಿಲಯ ಕ್ರಿಕೆಟ್ ಟೂರ್ನಿಯಲ್ಲಿ ದಕ್ಷಿಣ ವಲಯ, ಉತ್ತರ ವಲಯ, ಪೂರ್ವ ವಲಯ, ಪಶ್ಚಿಮ ವಲಯಗಳ ತಲಾ ನಾಲ್ಕರಂತೆ ಒಟ್ಟು 16 ತಂಡಗಳು ಸ್ಪರ್ಧಿಸಿವೆ.
ದಕ್ಷಿಣ ವಲಯದಿಂದ ಕೇರಳದ ಮೂರು ಹಾಗೂ ಕರ್ನಾಟಕದ ಮೈಸೂರು ವಿವಿ ತಂಡಗಳು ಸ್ಪರ್ಧೆಗೆ ಅರ್ಹತೆ ಪಡೆದು ಕೊಂಡಿವೆ. ಕೊಟ್ಟಾಯಂನ ಮಹಾತ್ಮಗಾಂಧಿ ವಿವಿ, ಕಲ್ಲಿಕೋಟೆಯಿಂದ ಕಲ್ಲಿಕೋಟೆ ವಿವಿ, ಕಣ್ಣೂರು ವಿವಿ ಹಾಗೂ ಮೈಸೂರು ವಿವಿ ಸ್ಪರ್ಧಿಸುತ್ತಿರುವ ತಂಡಗಳು.
2023ರಲ್ಲಿ ಮೈಸೂರಿನಲ್ಲಿ ನಡೆದ ಟೂರ್ನಿಯಲ್ಲಿ ಜಲಂಧರ್‌ನ ಲವ್ಲೀ ಪ್ರೊಪೇಷನಲ್ ವಿಶ್ವವಿದ್ಯಾನಿಲಯ ಮೊದಲ ಬಾರಿ ಚಾಂಪಿಯನ್ ಪ್ರಶಸ್ತಿ ಪಡೆದಿದ್ದರೆ, ಮೂರು ಬಾರಿಯ ಚಾಂಪಿಯನ್ ಹರ್ಯಾಣ ರೋಹ್ಟಕ್‌ನ ಮಹರ್ಷಿ ದಯಾನಂದ ವಿವಿ ರನ್ನರ್‌ಅಪ್ ಆಗಿತ್ತು.







