ಉಡುಪಿ : ಅಂಗವಿಕಲತೆ ಹೊಂದಿರುವ ಕುಷ್ಠರೋಗಿಗಳಿಗೆ ಸರ್ಜರಿ

ಉಡುಪಿ, ಫೆ.27: ಕುಷ್ಠರೋಗ ಅತೀ ಪುರಾತನವಾದ ಮತ್ತು ನಿಧಾನಗತಿ ಯಲ್ಲಿ ಮನುಷ್ಯನ ಚರ್ಮ ಮತ್ತು ನರಗಳನ್ನು ಬಾಧಿಸುವ ಮೈಕೊ ಬ್ಯಾಕ್ಟೀರಿಯಾ ಲೆಪ್ರೆ ಎಂಬ ಸೂಕ್ಷ್ಮಾಣು ಜೀವಿಯಿಂದ ಗಾಳಿಯ ಮೂಲಕ ಹರಡುವ ರೋಗವಾಗಿದೆ. ಇದನ್ನು ಬಹು ಔಷಧೀಯ ವಿಧಾನ ಎಂಬ ಚಿಕಿತ್ಸೆಯ ಮೂಲಕ ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ.
ಆದರೆ ಈ ಬ್ಯಾಕ್ಟಿರೀಯಾ ನರಗಳಿಗೆ ಬಾಧಿಸಿದಾಗ ಸೂಕ್ತ ಸಮಯದಲ್ಲಿ ಚಿಕಿತ್ಸೆಯನ್ನು ಪಡೆಯದಿದ್ದಲ್ಲಿ ಕೈಕಾಲುಗಳಲ್ಲಿ ಅಂಗವಿಕಲತೆಯು ಕಾಣಿಸಿಕೊಳ್ಳುತ್ತದೆ. ಈ ಅಂಗವಿಕಲತೆಯನ್ನು ರೀ-ಕನ್ಸ್ಟ್ರಕ್ಟೀವ್ ಸರ್ಜರಿ ಮೂಲಕ ಸರಿಪಡಿಸಕೊಳ್ಳ ಬಹುದಾಗಿದೆ.
ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ತಜ್ಞ ಡಾ. ಮಹೇಂದ್ರ ಕುಮಾರ್ ಶೆಟ್ಟಿ ಅವರು ರೀ-ಕನ್ಸ್ಟ್ರಕ್ಟೀವ್ ಸರ್ಜರಿ ಶಸ್ತ್ರ ಚಿಕಿತ್ಸೆಯನ್ನು ಮಾಡುವಲ್ಲಿ ಪರಿಣಿತರಾಗಿದ್ದು, ಪ್ರಸ್ತುತ ಜಿಲ್ಲೆಯಲ್ಲಿ 16 ಅಂಗಕಲತೆ ಇರುವ ಕುಷ್ಠರೋಗಿಗಳನ್ನು ಗುರುತಿಸಲಾಗಿದೆ.
ಜಿಲ್ಲಾ ಕುಷ್ಠರೋಗ ನಿವಾರಣಾ ಕಚೇರಿ ವತಿಯಿಂದ ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಈಗಾಗಲೇ ಒಬ್ಬ ರೋಗಿಯ ರೀ-ಕನ್ಸ್ಟ್ರಕ್ಟೀವ್ ಸರ್ಜರಿ ಅನ್ನು ಉಚಿತವಾಗಿ ಮಾಡಲಾಗಿದ್ದು, ಉಳಿದ ಎಲ್ಲಾ ಅಂಗವಿಕಲತೆ ಇರುವ ಕುಷ್ಠರೋಗಿಗಳ ರೀ-ಕನ್ಸ್ಟ್ರಕ್ಟೀವ್ ಸರ್ಜರಿ ಅನ್ನು ಜಿಲ್ಲೆಯಲ್ಲಿಯೇ ಮಾಡಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.







