ಉಡುಪಿ: ಮೆದುಳು ನಿಷ್ಕೃಿಯಗೊಂಡ ಮಹಿಳೆಯ ಅಂಗಾಂಗ ದಾನ

ಉಡುಪಿ: ರಸ್ತೆ ಅಪಘಾತದಿಂದ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತಿದ್ದ ಮಹಿಳೆಯೊಬ್ಬರು ಚಿಕಿತ್ಸೆಗೆ ಸ್ಪಂದಿಸದೇ ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಹಲವರಿಗೆ ಹೊಸ ಬದುಕು ನೀಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಶಿವಮೊಗ್ಗ ಜಿಲ್ಲೆಯ 44 ವರ್ಷದ ಲಲಿತಮ್ಮ ಅವರು ರಸ್ತೆ ಅಪಘಾತಗೆ ಒಳಗಾಗಿ ಹೆಚ್ಚಿನ ಚಿಕಿತ್ಸೆಗೆಂದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ವೈದ್ಯರು ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ, ಅವರು ಚೇತರಿಸಿಕೊಳ್ಳುವ ಯಾವುದೇ ಲಕ್ಷಣಗಳು ಕಂಡು ಬರಲಿಲ್ಲ ಎಂದು ಮಣಿಪಾಲ ಕೆಎಂಸಿಯ ವೈದ್ಯಕೀಯ ಅಧೀಕ್ಷಕರಾದ ಡಾ.ಅವಿನಾಶ್ ಶೆಟ್ಟಿ ತಿಳಿಸಿದರು.
ಕೊನೆಗೆ ಮಾನವ ಅಂಗಾಂಗ ಕಸಿ ಕಾಯ್ದೆ 1994ರ ಅನುಸಾರ ಲಲಿತಮ್ಮ ಅವರನ್ನು ಎರಡು ಬಾರಿ ಪರಿಶೀಲಿಸಿ, ಅಧಿಕೃತವಾಗಿ ಪರಿಣಿತ ವೈದ್ಯರ ತಂಡವು ರೋಗಿಯ ಮೆದುಳು ನಿಷ್ಕ್ರೀಯಗೊಂಡಿದೆ ಎಂದು ಘೋಷಿಸಿದರು.
ಬಳಿಕ ಲಲಿತಮ್ಮ ಕುಟುಂಬದ ಸದಸ್ಯರು ಇತರ ರೋಗಿಗಳ ಜೀವ ಉಳಿಸಲು ಕಾರ್ಯಸಾಧ್ಯವಾದ ಅಂಗಗಳನ್ನು ದಾನ ಮಾಡಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು.
ಜೀವಸಾರ್ಥಕತೆ ಪ್ರೋಟೋಕಾಲ್‌ಗಳು ಮತ್ತು ನಿರ್ಧಾರಗಳ ಪ್ರಕಾರ ದಾನ ಮಾಡಿದ ಶ್ವಾಸಕೋಶಗಳನ್ನು ಕಿಮ್ಸ್ ಆಸ್ಪತ್ರೆ ಹೈದರಾಬಾದ್‌ಗೆ, ಯಕೃತ್‌ನ್ನು ಸ್ಪರ್ಶ ಆಸ್ಪತ್ರೆ ಬೆಂಗಳೂರು ಮತ್ತು ಒಂದು ಮೂತ್ರಪಿಂಡವನ್ನು ಯುನಿಟಿ ಆಸ್ಪತ್ರೆ ಮಂಗಳೂರಿಗೆ ಕಳುಹಿಸಲಾಯಿತು.
ಒಂದು ಮೂತ್ರಪಿಂಡ ಮತ್ತು ಎರಡು ಕಾರ್ನಿಯಾಗಳನ್ನು ಮಣಿಪಾಲ ದಲ್ಲಿ ನೋಂದಾಯಿತ ರೋಗಿಗಳಿಗೆ ಬಳಸಲಾಯಿತು ಎಂದು ಡಾ. ಶೆಟ್ಟಿ ತಿಳಿಸಿದರು.
‘ಜೀವ ಉಳಿಸುವ ನಿಟ್ಟಿನಲ್ಲಿ ಅಂಗದಾನ ಶ್ರೇಷ್ಟವಾದ ಕೆಲಸವಾಗಿದ್ದು, ಅತ್ಯಂತ ಮಹತ್ವವನ್ನು ಪಡೆದಿದೆ. ಜನರು ಈ ರೀತಿಯ ಉತ್ತಮ ಕಾರ್ಯಗಳಿಗೆ ಪ್ರೋತ್ಸಾಹಿಸಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ, ಅಂಗದಾನ ಮಾಡಲು ನಿರ್ಧರಿಸಿದ ಲಲಿತಮ್ಮ ಕುಟುಂಬಕ್ಕೆ ಕೃತಜ್ಞತೆ ಸಲ್ಲಿಸಿದರು.







