ಕಾಪು: ಬಾವಿಗೆ ಬಿದ್ದ ಮಹಿಳೆಯನ್ನು ರಕ್ಷಿಸಿದ ಅಗ್ನಿಶಾಮಕ ದಳ
ಕಾಪು: ನೀರು ಸೇದುವಾಗ ಹಗ್ಗ ತುಂಡಾಗಿ ಬಾವಿಗೆ ಬಿದ್ದ ಮಹಿಳೆಯನ್ನು ಅಗ್ನಿಶಾಮಕ ದಳ ರಕ್ಷಿಸಿರುವ ಘಟನೆ ಎರ್ಮಾಳು ಬಡಾ ಎಂಬಲ್ಲಿ ಇಂದು ನಡೆದಿದೆ.
ಎರ್ಮಾಳು ಬಡಾ ನಿವಾಸಿ ಸವಿತಾ(40) ಎಂಬವರು ಮನೆಯ ಬಾವಿಯಿಂದ ನೀರು ಸೇದುವಾಗ ಹಗ್ಗ ತುಂಡಾಗಿ ಆಯಾ ತಪ್ಪಿ ಬಾವಿಗೆ ಬಿದ್ದರೆನ್ನಲಾಗಿದೆ. ಈ ಬಗ್ಗೆ ಕೂಡಲೇ ಉಡುಪಿ ಅಗ್ನಿ ಶಾಮಕ ಠಾಣೆಗೆ ಮಾಹಿತಿ ತಿಳಿಸಲಾಯಿತು. ಅದರಂತೆ ಅಗ್ನಿಶಾಮಕ ದಳ ತಂಡ ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿತು.
ಸುಮಾರು 10ಅಡಿ ಅಗಲ 15ಅಡಿ ಆಳ, 8 ಅಡಿ ನೀರು ಇರುವ ಬಾವಿಗೆ ಸಿಬ್ಬಂದಿ ರವಿ ನಾಯ್ಕ್ ಹಗ್ಗದ ಸಹಾಯದಿಂದ ಇಳಿದು ಮಹಿಳೆಯನ್ನು ಸುರಕ್ಷಿತವಾಗಿ ಮೇಲಕ್ಕೆ ಎತ್ತಿದರು. ಈ ರಕ್ಷಣಾ ಕಾರ್ಯದಲ್ಲಿ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ವಿನಾಯಕ ಕಲ್ಗುಟಕರ, ಪ್ರಭಾರ ಅಗ್ನಿಶಾಮಕ ಠಾಣಾ ಅಧಿಕಾರಿ ಮೀರ್ ಮಹಮ್ಮದ್ ಗೌಸ್, ಪ್ರಮುಖ ಅಗ್ನಿ ಶಾಮಕ ಕೇಶವ, ಅಗ್ನಿಶಾಮಕ ಚಾಲಕ ರವೀಂದ್ರ, ತೌಸೀಫ್, ಅಗ್ನಿ ಶಾಮಕರಾದ ಕೃಷ್ಣ ನಾಯ್ಕ್, ರವಿ ನಾಯ್ಕ್, ರಾಕೇಶ್, ಶಿವಾನಂದ ಪಾಲ್ಗೊಂಡಿದ್ದರು.
Next Story





