ದಲಿತರ ಉಪವಾಸ ಸತ್ಯಾಗ್ರಹ: ಉಡುಪಿ ಜಿಲ್ಲಾಧಿಕಾರಿ ಭೇಟಿ

ಬೈಂದೂರು: ಜಿಲ್ಲೆಯ ವಿವಿಧ ದಲಿತ ಸಂಘಟನೆಗಳ ವತಿಯಿಂದ ದಲಿತರಿಗೆ ಮೀಸಲಿಟ್ಟ ಡಿಸಿ ಮನ್ನಾಭೂಮಿಯನ್ನು ದಲಿತ ರಿಗೆ ನೀಡಬೇಕೆಂದು ಆಗ್ರಹಿಸಿ ಬೈಂದೂರು ತಾಲೂಕು ಕಚೇರಿ ಎದುರು ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಗುರುವಾರ ಉಡುಪಿ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಭೇಟಿ ನೀಡಿದರು.
ದಲಿತ ಸಂಘಟನೆ ವತಿಯಿಂದ ಮನವಿ ಸ್ವೀಕರಿಸಿ ಮಾತನಾಡಿ, ಈಗಾಗಲೇ ಉಡುಪಿ ಜಿಲ್ಲೆಯಲ್ಲಿ ದಲಿತರ ರಕ್ಷಣೆ ಮತ್ತು ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ದೊರಕಿಸಿ ಕೊಡಲಾಗುತ್ತಿದೆ. ಬೈಂದೂರು ಹಾಗೂ ಶಿರೂರು ಮುಂತಾದ ಕಡೆ ದಲಿತರಿಗೆ ಮೀಸಲಿಟ್ಟ ಭೂಮಿಗೆ ಬದಲಾಗಿ ಪ್ರತ್ಯೇಕ ಸ್ಥಳ ನೀಡಬೇಕೆಂಬ ಬೇಡಿಕೆಗೆ ಇಲಾಖೆಗಳೊಂದಿಗೆ ಚರ್ಚಿಸಿ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.
ಜಿಲ್ಲಾಧಿಕಾರಿಗಳ ಭೇಟಿಯ ಬಳಿಕ ಉಪವಾಸ ಸತ್ಯಾಗ್ರಹ ಹಿಂತೆಗೆದು ಕೊಂಡಿದ್ದೇವೆ ಎಂದು ದಲಿತ ಸಂಘಟನೆಯ ಮುಖಂಡರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ., ಬೈಂದೂರು ತಹಶೀಲ್ದಾರ್ ಪ್ರದೀಪ್ ಆರ್., ದಲಿತ ಮುಖಂಡರಾದ ರಾಘವೇಂದ್ರ ಶಿರೂರು, ಮಾಧವ ಬಾಕಡ, ರಮೇಶ ಶಿರೂರು, ರಾಮ ಎಂ.ಮಯ್ಯಾಡಿ, ಮಹಾಲಕ್ಷ್ಮೀ ಬೈಂದೂರು, ಈಶ್ವರ ಶಿರೂರು, ವಾಸುದೇವ ಶಿರೂರು ಮೊದಲಾದವರು ಉಪಸ್ಥಿತರಿದ್ದರು.







