ಅಖಿಲ ಭಾರತ ಅಂತರ ವಿವಿ ಮಹಿಳಾ ಕ್ರಿಕೆಟ್: ಮೈಸೂರು ವಿವಿಗೆ ಮೊದಲ ಸೋಲು

ಮಣಿಪಾಲ: ಭಾರತೀಯ ವಿವಿ ಸಂಘದ ಸಹಯೋಗದೊಂದಿಗೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಇಲ್ಲಿನ ಎಂಡ್ ಪಾಯಿಂಟ್ ಮೈದಾನದಲ್ಲಿ ಯೋಜಿಸಿರುವ 2023-24ನೇ ಸಾಲಿನ ಅಖಿಲ ಭಾರತ ಅಂತರ ವಲಯ ಅಂತರ ವಿವಿ ಮಹಿಳಾ ಕ್ರಿಕೆಟ್ ಟೂರ್ನಿಯ ಮೂರನೇ ದಿನವಾದ ಗುರುವಾರ ಮೈಸೂರು ವಿವಿ ತಂಡ ಟೂರ್ನಿಯ ಮೊದಲ ಸೋಲು ಅನುಭವಿಸಿತು.
ಮೊದಲೆರಡು ದಿನಗಳಲ್ಲಿ ಸತತವಾಗಿ ಎರಡು ಜಯಗಳನ್ನು ದಾಖಲಿಸಿದ್ದ ಮೈಸೂರ ವಿವಿ ಇಂದು ಶಿಮ್ಲಾದ ಹಿಮಾಚಲ ಪ್ರದೇಶ ವಿವಿ ಕೈಯಲ್ಲಿ ಆರು ವಿಕೆಟ್‌ಗಳ ಅಂತರ ಸೋಲನನುಭವಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಮೈಸೂರು ವಿವಿ 8 ವಿಕೆಟ್‌ಗೆ 103 ರನ್‌ಗಳಿಸಿದರೆ ಉತ್ತರವಾಗಿ ಹಿಮಾಚಲ ಪ್ರದೇಶ ವಿವಿ ನಾಲ್ಕು ವಿಕೆಟ್‌ಗಳಿಗೆ 104 ರನ್ ಗಳಿಸಿ ಜಯಭೇರಿ ಬಾರಿಸಿತು.
ತನ್ನ ಮೊದಲ ಪಂದ್ಯದಲ್ಲಿ ಬಿಲಾಲಪುರದ ಅಟಲ್‌ಬಿಹಾರಿ ವಾಜಪೇಯಿ ವಿವಿ ತಂಡವನ್ನು 213 ರನ್‌ಗಳ ಭರ್ಜರಿ ಅಂತರದಿಂದ ಪರಾಭವಗೊಳಿಸಿದ ಮೈಸೂರು ವಿವಿ ಎರಡನೇ ಪಂದ್ಯದಲ್ಲಿ ಇಂದೋರ್‌ನ ಡಿಎವಿ ವಿವಿಯನ್ನು ಐದು ವಿಕೆಟ್‌ಗಳ ಅಂತರದಿಂದ ಪರಾಭವಗೊಳಿಸಿತ್ತು.
ದಿನದ ಮತ್ತೊಂದು ಪಂದ್ಯದಲ್ಲಿ ಕಲ್ಲಿಕೋಟೆ ವಿವಿ ಸತತ ಎರಡನೇ ಜಯ ದಾಖಲಿಸಿತು. ಇಂದು ಕಲ್ಲಿಕೋಟೆ ವಿವಿ, ಪಂಜಾಬ್ ವಿವಿಯನ್ನು 114 ರನ್‌ಗಳಿಂದ ಪರಾಭವಗೊಳಿಸಿತು. ಕಲ್ಲಿಕೋಟೆ ವಿವಿ ಮೂರು ವಿಕೆಟ್‌ಗೆ 148 ರನ್‌ಗಳಿಸಿದ್ದಲ್ಲದೇ ಬಳಿಕ ಎದುರಾಳಿಯನ್ನು ಕೇವಲ 34 ರನ್‌ಗಳಿಗೆ ನಿಯಂತ್ರಿಸಿ ಏಕಪಕ್ಷೀಯ ಜಯ ಪಡೆಯಿತು.
ಮೊದಲ ಪಂದ್ಯದಲ್ಲಿ ಬಿಹಾರದ ಲಲಿತ್‌ನಾರಾಯಣ್ ಮಿಥಿಲಾ ವಿವಿಗೆ 25 ರನ್‌ಗಳಿಂದ ಸೋತಿದ್ದ ಕೊಟ್ಟಾಯಂನ ಮಹಾತ್ಮ ಗಾಂಧಿ ವಿವಿ ರೋಹ್ಟಕ್‌ನ ಮಹರ್ಷಿ ದಯಾನಂದ ವಿವಿಯನ್ನು 7 ವಿಕೆಟ್‌ಗಳಿಂದ ಪರಾಭವಗೊಳಿಸಿತು. ಮಹಾತ್ಮಗಾಂಧಿ ವಿವಿ ನಿಗದಿತ ಓವರುಗಳಲ್ಲಿ 118 ರನ್‌ಗಳಿಸಿ ಬಳಿಕ ಎದುರಾಳಿಯನ್ನು 96 ರನ್‌ಗೆ ಆಲೌಟ್ ಮಾಡಿತು.
ಅಮೃತಸರದ ಗುರುನಾನಕ್ ದೇವ್ ವಿವಿ ಸಹ ಸತತ ಎರಡನೇ ಜಯ ಪಡೆಯಿತು. ಮೊದಲ ಪಂದ್ಯದಲ್ಲಿ ಪುಣೆ ವಿವಿಯನ್ನು ಸೋಲಿಸಿದ್ದ ಅಮೃತಸರ ವಿವಿ ತಂಡ, ಎರಡನೇ ಪಂದ್ಯದಲ್ಲಿ ಕಣ್ಣೂರು ವಿವಿಯನ್ನು 162 ರನ್‌ಗಳಿಂದ ಏಕಪಕ್ಷೀಯವಾಗಿ ಪರಾಭವಗೊಳಿಸಿತು.







