ನೀರಿನ ಹಾಹಾಕಾರ ತಪ್ಪಿಸಲು ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳಿ: ಉಡುಪಿ ಡಿಸಿ ವಿದ್ಯಾಕುಮಾರಿ

ಉಡುಪಿ: ಭವಿಷ್ಯದಲ್ಲಿ ನೀರಿನ ಹಾಹಾಕಾರ ತಪ್ಪಿಸಲು ಪ್ರತಿ ಯೊಬ್ಬರೂ ತಮ್ಮ ಮನೆ ಹಾಗೂ ಜಮೀನುಗಳಲ್ಲಿ ಮಳೆ ನೀರಿನ ಕೊಯ್ಲು ಅಳವಡಿಸಿಕೊಳ್ಳುವುದು ಅತ್ಯಂತ ಸೂಕ್ತ ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಹೇಳಿದ್ದಾರೆ.
ಶನಿವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಗಳ ಆಶ್ರಯದಲ್ಲಿ ನಡೆದ ಮಳೆ ನೀರು ಕೊಯ್ಲು ಕಾರ್ಯಗಾರವನ್ನು ಗಿಡಕ್ಕೆ ನೀರನ್ನು ಎರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಉಡುಪಿ ಜಿಲ್ಲೆ ಕರಾವಳಿ ಪ್ರದೇಶದಲ್ಲಿದ್ದು, ಸಮುದ್ರ ತೀರ ಒಂದೆಡೆ ಯಾದರೆ, 4000ಮಿ.ಮೀ.ಗೂ ಅಧಿಕ ವಾಡಿಕೆ ಮಳೆ ಸುರಿಯುತ್ತದೆ. ಜಿಲ್ಲೆ ಯಲ್ಲಿ 16ಕ್ಕೂ ಹೆಚ್ಚು ನದಿಗಳು ಹರಿಯುತ್ತಿದ್ದರೂ, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದೆ ಎಂದರೆ ಇದಕ್ಕೆ ಅಂತರ್ಜಲ ಮಟ್ಟ ಕುಸಿಯುತ್ತಿರುವುದು ಮೂಲ ಕಾರಣ. ಇದನ್ನು ಎಲ್ಲರೂ ಗಂಭೀರವಾಗಿ ತೆಗೆದುಕೊಂಡು ಅಂತರ್ಜಲ ಮಟ್ಟ ಹೆಚ್ಚಿಸಲು ಮಳೆ ನೀರಿನ ಕೊಯ್ಲು ಅಳವಡಿಸಿಕೊಳ್ಳಬೇಕು ಎಂದರು.
ಮಳೆ ನೀರಿನ ಕೊಯ್ಲು ಅಳವಡಿಸುವುದು ಅತ್ಯಂತ ಸರಳ ಹಾಗೂ ಕಡಿಮೆ ಮೊತ್ತದಲ್ಲಿ ಸಾಧ್ಯ. ಇದನ್ನು ಅಳವಡಿಸುವು ದರಿಂದ ಭವಿಷ್ಯದಲ್ಲಿ ಮುಂದಿನ ಪೀಳಿಗೆ ನೀರಿನ ಅಭಾವದಿಂದ ದೂರವಿರಲು ಸಾಧ್ಯ. ನಿರ್ಮಾಣ ಹಂತದ ಕಟ್ಟಡಗಳಲ್ಲಿ ಇದನ್ನು ಅಳವಡಿಸಲು ಮುಂದಾಗುವುದು ಸೂಕ್ತ. ಒಬ್ಬರು ಅಳವಡಿಸಿಕೊಂಡರೆ ಇದನ್ನು ನೋಡಿ ನೆರೆಹೊರೆಯವರು ಮತ್ತು ಅಕ್ಕಪಕ್ಕದ ಜಮೀನಿನವರು ಅಳವಡಿಸಲು ಮುಂದಾಗುತ್ತಾರೆ ಎಂದರು.
ನಾವು ದಿನನಿತ್ಯ ನೀರಿನ ಬಳಕೆಯನ್ನು ಯಥೇಚ್ಛವಾಗಿ ಮಾಡುತ್ತಿದ್ದೇವೆ. ಆದರೆ ನೀರಿನ ಸಂಗ್ರಹಣೆಗೆ ಹೆಚ್ಚಿನ ಒತ್ತು ಕೊಡುತ್ತಿಲ್ಲ. ಈಗದು ಅನಿವಾರ್ಯ. ಇದು ಮಳೆ ನೀರಿನ ಕೊಯ್ಲುನಿಂದ ಮಾತ್ರ ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ಮೀಡಿಯಾ ನೆಟ್‌ವರ್ಕ್‌ನ ಸಿಇಓ ವಿನೋದ್ ಕುಮಾರ್ ಮಾತನಾಡಿ, ಪ್ರಾಕೃತಿಕವಾಗಿ ಸಿಗುವ ಮಳೆ ನೀರು ಹರಿದು ವ್ಯರ್ಥವಾಗದ ರೀತಿಯಲ್ಲಿ ನೋಡಿಕೊಳ್ಳುವುದು ಅನಿವಾರ್ಯ. ಅಂತರ್ಜಲ ಮಟ್ಟ ಹೆಚ್ಚಿಸಲು ಪ್ರತಿಯೊಬ್ಬರೂ ಕಾರ್ಯಪ್ರವೃತ್ತರಾಗಬೇಕು. ಇದರೊಂದಿಗೆ ಎಲ್ಲರೂ ನೀರಿನ ಮಿತಬಳಕೆಗೆ ಒತ್ತು ನೀಡಬೇಕು ಎಂದರು.
ಉಡುಪಿ ಜಿಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಮಾತನಾಡಿ, ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ನೀರಿನ ಅಭಾವದಿಂದ ಸಾಕಷ್ಟು ತೊಂದರೆ ಅನುಭಸುತ್ತಿದ್ದೇವೆ. ಇದರ ನಿವಾರಣೆಗೆ ಮಳೆ ನೀರು ಕೊಯ್ಲು ಅನುಷ್ಠಾನಗೊಳಿಸುವುದು ಅತ್ಯಂತ ಅವಶ್ಯ ಎಂದರು.
ಸಂಪನ್ಮೂಲ ವ್ಯಕ್ತಿ ಜೋಸೆಫ್ ರೆಬೆಲ್ಲೋ ಮಳೆ ನೀರು ಕೊಯ್ಲು ಅಳವಡಿಸುವ ಕುರಿತು ಸಂಪೂರ್ಣ ಮಾಹಿತಿ ನೀಡಿದರು. ಹಿರಿಯ ಪತ್ರಕರ್ತ ಕುಮಾರಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್ ಸ್ವಾಗತಿಸಿದರು. ಉಷಾರಾಣಿ ಕಾರ್ಯಕ್ರಮ ನಿರೂಪಿಸಿ, ಪತ್ರಕರ್ತ ರಾಜು ಖಾರ್ವಿ ವಂದಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿ, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು, ರೈತ ಸಂಘ ಟನೆಗಳು, ಇಂಜಿನಿಯರ್ಸ್ ಅಸೋಸಿಯೇಶನ್, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.







