ಚುನಾವಣಾ ಬಾಂಡ್ ಪಡೆಯದ ಏಕೈಕ ಪಕ್ಷ ಬಿಎಸ್ಪಿ: ಜಾಕೀರ್ ಹುಸೇನ್

ಉಡುಪಿ: ಇತ್ತೀಚಿನ ದಿನಗಳಲ್ಲಿ ಭಾರತ ಇತಿಹಾಸದ ಅತಿ ದೊಡ್ಡ ಭ್ರಷ್ಟಾಚಾರದ ಹಗರಣವೆನಿಸಿದ ‘ಚುನಾವಣಾ ಬಾಂಡ್’ ಹಗರಣದಲ್ಲಿ ಸಿಲುಕದೇ ಪರಿಶುದ್ಧವಾಗಿರುವ ಏಕೈಕ ಪಕ್ಷ ಬಹುಜನ ಸಮಾಜ ಪಕ್ಷ ಎಂದು ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಜಾಕೀರ್ ಹುಸೇನ್ ಹೇಳಿದ್ದಾರೆ.
ಉಡುಪಿಯಲ್ಲಿಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು ದೇಶದ ನಾಲ್ಕು ರಾಷ್ಟ್ರೀಯ ಪಕ್ಷಗಳು ಹಾಗೂ 22 ಪ್ರಾದೇಶಿಕ ಪಕ್ಷಗಳು ಸೇರಿದಂತೆ ಒಟ್ಟು 26 ಪಕ್ಷಗಳು ಚುನಾವಣಾ ಬಾಂಡ್ ಹಗರಣದಲ್ಲಿ ಪಾಲು ಪಡೆದಿವೆ. ಆದರೆ ದೇಶದ ಮೂರನೇ ಅತಿದೊಡ್ಡ ಪಕ್ಷವೆನಿಸಿದ ಬಿಎಸ್ಪಿ ಇದರಲ್ಲಿ ಒಂದೇ ಒಂದು ಪೈಸೆ ಭ್ರಷ್ಟಾಚಾರದ ಹಣವನ್ನು ಪಡೆದಿಲ್ಲ. ಬಿಜೆಪಿ ಅತಿದೊಡ್ಡ ಫಲಾನುಭವಿ ಎನಿಸಿದ ಈ ಹಗರಣದಲ್ಲಿ ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷಗಳು ಪಾಲು ಪಡೆದಿವೆ ಎಂದರು.
ಬಹುಜನ ಸಮಾಜ ಪಾರ್ಟಿ ರಾಜ್ಯದ ಎಲ್ಲಾ 28 ಲೋಕಸಭಾ ಸ್ಥಾನಗಳಿಗೂ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಲಿದೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಕೆ.ಟಿ.ರಾಮಕೃಷ್ಣ ಸೇರಿದಂತೆ ಒಟ್ಟು 25 ಅಭ್ಯರ್ಥಿಗಳ ಹೆಸರುಗಳನ್ನು ಈಗಾಗಲೇ ಪ್ರಕಟಿಸಿದೆ. ಇನ್ನುಳಿದ ಮೂರು ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರು ಒಂದೆರಡು ದಿನಗಳಲ್ಲಿ ಅಂತಿಮಗೊಳ್ಳಲಿದೆ ಎಂದರು.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಪಕ್ಷದ ಅಭ್ಯರ್ಥಿ ಯಾಗಿರುವ ಕೆ.ಟಿ.ರಾಮಕೃಷ್ಣ ಅವರು ಮಾತನಾಡಿ, ತಾನು ಕಳೆದ 45 ವರ್ಷಗಳಿಂದ ಸಾರ್ವಜನಿಕರ ಸೇವೆಯಲ್ಲಿದ್ದು, ಆರಂಭಿಕ ವರ್ಷಗಳಲ್ಲಿ ದಲಿತ ಸಂಘರ್ಷ ಸಮಿತಿ ಪರವಾಗಿ ಕೆಲಸ ಮಾಡಿದ್ದರೆ, ಕಳೆದ 32 ವರ್ಷಗಳಿಂದ ಕಾನ್ಸಿರಾಮ್ ಹಾಗೂ ಮಾಯವತಿ ಅವರಿಂದ ಸ್ಪೂರ್ತಿ ಪಡೆದು ಬಹುಜನ ಸಮಾಜ ಪಾರ್ಟಿ ಪರವಾಗಿ ಕೆಲಸ ಮಾಡುತಿದ್ದೇನೆ ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಆದರ್ಶವಾಗಿಸಿ ದೇಶದಲ್ಲಿ ಸರ್ವಜನರೂ ಯಾವುದೇ ಸಮಸ್ಯೆಗಳಿಲ್ಲದೇ ಸುಖಿ ಜೀವನ ನಡೆಸುವುದನ್ನು ಕಾಣಬೇಕೆಂಬುದೇ ನನ್ನ ಕನಸು ಎಂದು ಕೆ.ಟಿ.ರಾಮಕೃಷ್ಣ ಹೇಳಿಕೊಂಡರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಕಳೆದ ಹತ್ತು ವರ್ಷಗಳಿಂದ ಸಂವಿಧಾನದ ಆಶಯದಂತೆ ಆಡಳಿತ ನಡೆಸಿಲ್ಲ. ಸಾಮಾನ್ಯ ಜನರಿಗಾಗಿ ಒಂದು ಒಂದು ಅಂಶವನ್ನೂ ಅವರು ಜಾರಿಗೆ ತಂದಿಲ್ಲ. ದಲಿತರ ಮೇಲಿನ ಅತ್ಯಾಚಾರ, ದೌರ್ಜನ್ಯ ಹೆಚ್ಚಾಗಿದ್ದು, ಅತ್ಯಾಚಾರಿಗಳನ್ನು ಮೆರೆಸುವ ಸಂಸ್ಕೃತಿ ಬಿಜೆಪಿಯದ್ದಾಗಿದೆ. ಭ್ರಷ್ಟಾಚಾರ ಇವರ ನಿತ್ಯದ ಉಸಿರಿನಂತಾಗಿದೆ ಎಂದರು.
ಇದೀಗ ತಾನು ಪಕ್ಷದ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಚುನಾವಣೆ ಯೊಂದರಲ್ಲಿ ಸ್ಪರ್ಧಿಸುತಿದ್ದು, ಕ್ಷೇತ್ರದ ಜನತೆಯ ಬೆಂಬಲವನ್ನು ನಿರೀಕ್ಷಿಸುತ್ತಿರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಪದಾಧಿಕಾರಿಗಳಾದ ಕೆ.ಪಿ.ಸುಧಾ, ಜಾಕಿರ್ ಅಲಿಖಾನ್, ಪರಮೇಶ್ವರ್, ಕೆ.ಆರ್.ಗಂಗಾಧರ್, ಮಂಜುನಾಥ್, ಪ್ರಶಾಂತ್ ಮುಂತಾದವರು ಉಪಸ್ಥಿತರಿದ್ದರು.







