ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ದಿನದಲ್ಲಿ ಏಳು ನಾಮಪತ್ರ ಸಲ್ಲಿಕೆ
![ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ದಿನದಲ್ಲಿ ಏಳು ನಾಮಪತ್ರ ಸಲ್ಲಿಕೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ದಿನದಲ್ಲಿ ಏಳು ನಾಮಪತ್ರ ಸಲ್ಲಿಕೆ](https://www.varthabharati.in/h-upload/2024/04/03/1258213-ud-a3-nomination-hegde.webp)
ಉಡುಪಿ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬುಧವಾರ ಇಬ್ಬರು ಅಭ್ಯರ್ಥಿಗಳು ಒಟ್ಟು ಏಳು ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಕೆ.ಜಯಪ್ರಕಾಶ್ ಹೆಗ್ಡೆ ಅವರು ನಾಲ್ಕು ನಾಮಪತ್ರಗಳನ್ನು ಸಲ್ಲಿಸಿದ್ದರೆ, ಬಿಜೆಪಿ ಪಕ್ಷದಿಂದ ಕೋಟ ಶ್ರೀನಿವಾಸ ಪೂಜಾರಿ ಅವರು ಮೂರು ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿ ಇದುವರೆಗೆ ಎಂಟು ಮಂದಿ ಅಭ್ಯರ್ಥಿಗಳು ಒಟ್ಟು 13 ನಾಮಪತ್ರಗಳನ್ನು ಸಲ್ಲಿಸಿದಂತಾಗಿದೆ.
ಕಾಂಗ್ರೆಸ್ನ ಅಭ್ಯರ್ಥಿಯಾಗಿ ಕೆ.ಜಯಪ್ರಕಾಶ್ ಹೆಗ್ಡೆ ಅವರು ಪಕ್ಷದ ಹಿರಿಯ ನಾಯಕರೊಂದಿಗೆ ಬಂದು ತಮ್ಮ ನಾಮಪತ್ರ ವನ್ನು ಸಲ್ಲಿಸಿದರು. ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ ಬಳಿಕ ಮಣಿಪಾಲ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಅವರು ಚುನಾವಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರಿಗೆ ತಮ್ಮ ನಾಲ್ಕು ಸೆಟ್ ನಾಮಪತ್ರಗಳನ್ನು ಸಲ್ಲಿಸಿದರು.
ಕುಂದಾಪುರ ತಾಲೂಕು ಕೊರ್ಗಿಯ 71 ವರ್ಷ ಪ್ರಾಯದ ಹೈಕೋರ್ಟ್ ನಲ್ಲಿ ನ್ಯಾಯವಾದಿಯಾಗಿರುವ ಜಯಪ್ರಕಾಶ್ ಹೆಗ್ಡೆ ಅವರು ರಾಜ್ಯ ಇಂಧನ ಸಚಿವ ಕೆ.ಜೆ.ಜಾರ್ಜ್, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ ಹಾಗೂ ಮೊಟಮ್ಮ ಹಾಗೂ ಕಾಂಗ್ರೆಸ್ ಪಕ್ಷದ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಅವರೊಂದಿಗೆ ಬಂದು ನಾಮಪತ್ರಗಳನ್ನು ಸಲ್ಲಿಸಿದರು.
64 ವರ್ಷ ಪ್ರಾಯದ ಬ್ರಹ್ಮಾವರ ತಾಲೂಕು ಕೋಟತಟ್ಟು ಗ್ರಾಮದ ನಿವಾಸಿ ಕೋಟ ಶ್ರೀನಿವಾಸ ಪೂಜಾರಿ ಅವರು ಸಹ ಮೂರು ಸೆಟ್ಗಳಲ್ಲಿ ತಮ್ಮ ನಾಮಪತ್ರಗಳನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಿದರು.
ನಾಮಪತ್ರ ಸಲ್ಲಿಸಲು ನಾಳೆ (ಎ.4) ಕೊನೆಯ ದಿನವಾಗಿದೆ. ಎಪ್ರಿಲ್ 5ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಎ.8 ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿದೆ.