ಯಕ್ಷಗಾನದ ಮೂಲಕ ಮತದಾರರ ಜಾಗೃತಿ ಅಭಿಯಾನ

ಕುಂದಾಪುರ : ಉಡುಪಿ ಜಿಲ್ಲಾಡಳಿತ, ಜಿ.ಪಂ. ಸ್ವೀಪ್ ಸಮಿತಿ, ಕುಂದಾಪುರ ತಾಲೂಕು ಆಡಳಿತ, ತಾ.ಪಂ. ಸ್ವೀಪ್ ಸಮಿತಿ ಆಶ್ರಯದಲ್ಲಿ ಕುಂದಾಪುರ ಪುರಸಭೆ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ಪ್ರಯುಕ್ತ ಕೋಟದ ಕಲಾಪೀಠ ಸಂಸ್ಥೆ ವತಿಯಿಂದ ಯಕ್ಷಗಾನದ ಮೂಲಕ ಮತದಾರರ ಜಾಗೃತಿ ಅಭಿಯಾನವನ್ನು ಶನಿವಾರ ಕುಂದಾಪುರ ಶಾಸ್ತ್ರಿ ಸರ್ಕಲ್ ಸಮೀಪದ ಫ್ಲೈಓವರ್ ಕೆಳಗೆ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮಿ ಎಚ್.ಎಸ್. ಮಾತನಾಡಿ, ಚುನಾವಣೆಯು ಪ್ರಜಾಪ್ರಭುತ್ವದ ಹಬ್ಬವಿದ್ದಂತೆ. ಶೇ.100ರಷ್ಟು ಮತದಾನ ಆಗುವಲ್ಲಿ ಎಲ್ಲರ ಸಹಕಾರವೂ ಅಗತ್ಯ. ಎಲ್ಲರೂ ಭೀತಿ ಯಿಲ್ಲದೆ, ನಿರ್ಭೀತಿಯಿಂದ ಬಂದು ಮತದಾನ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕುಂದಾಪುರ ಕ್ಷೇತ್ರದಲ್ಲಿ 222 ಮತಗಟ್ಟೆಗಳಿದ್ದು, ಅವುಗಳಲ್ಲಿ ೯ ವಿಶೇಷ ಮತಗಟ್ಟೆಗಳನ್ನಾಗಿ ರೂಪಿಸಲಾಗುತ್ತಿದೆ ಎಂದರು.
ಕುಂದಾಪುರ ತಾ.ಪಂ. ಕಾರ್ಯಂನಿರ್ವಾಹಣಾಧಿಕಾರಿ, ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಶಶಿಧರ್ ಮಾತನಾಡಿ, ಪ್ರಜಾಪ್ರಭುತ್ವದ ಹಬ್ಬಕ್ಕೆ ಸ್ವೀಪ್ ಸಮಿತಿಯು ವಿವಿಧ ಚಟುವಟಿಕೆಗಳ ಮೂಲಕ ನಾಗರೀಕರಿಗೆ ಆಹ್ವಾನವನ್ನು ನೀಡುತ್ತಿದೆ. ಯಕ್ಷಗಾನದ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನವೂ ಒಂದಾಗಿದೆ. ಎಲ್ಲ ನಾಗರೀಕರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ನಿಮ್ಮ ನೆಚ್ಚಿನ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ. ಈ ವರ್ಷದ ಜಿಲ್ಲೆಯ ಧ್ಯೇಯವೆಂದರೆ ಶೇ.100 ರಷ್ಟು ಮತದಾನ, ಇದು ಉಡುಪಿಯ ವಾಗ್ದಾನ ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಪ್ರತಿಜ್ಞಾ ವಿಧಿ ಬೋಧಿಸಿದರು. ಪಂಚಾಯತ್‌ರಾಜ್ ಇಲಾಖೆ ಸಹಾಯಕ ನಿರ್ದೇಶಕಿ ದೀಪಾ, ಪುರಸಭೆಯ ಮ್ಯಾನೇಜರ್ ಶರತ್ ಖಾರ್ವಿ, ಪ್ರಥಮ ದರ್ಜೆ ಸಹಾಯಕ ಗಣೇಶ್ ಜನ್ನಾಡಿ, ಪ್ರೋಔ ಕೇಶವ್, ಕಂದಾಯ ಅಧಿಕಾರಿ ಅಂಜನಿ ಗೌಡ, ಸೂರಜ್, ಅಧಿಕಾರಿ, ಸಿಬಂದಿ ವರ್ಗ, ಬಿಸಿಎಂ ಹಾಸ್ಟೆಲ್ ವಿಸ್ತರಣಾಧಿಕಾರಿ ಆಶಾ, ಸ್ವೀಪ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಪುರಸಭೆ ಎಂಜಿನಿಯರ್ ಗುರುಪ್ರಸಾದ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.







