ಮಲತಾಯಿ ಧೋರಣೆ ಮಾಡದೆ ಬೈಂದೂರು ಅಭಿವೃದ್ಧಿ: ಗೀತಾ ಶಿವರಾಜ್ ಕುಮಾರ್ ಭರವಸೆ

ಕುಂದಾಪುರ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ಅನೇಕ ವರ್ಷಗಳಿಂದ ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷ್ಯ ಕ್ಕೊಳಗಾಗಿದೆ. ಆದರೆ ನಾವು ಗೆದ್ದಲ್ಲಿ ಬೈಂದೂರು ಬಗ್ಗೆ ಯಾವುದೇ ಮಲತಾಯಿ ಧೋರಣೆ ಮಾಡುವುದಿಲ್ಲ. ಇಲ್ಲಿನ ಮೀನುಗಾರರು, ರೈತರು, ಮಹಿಳೆಯರ ಸಮಸ್ಯೆಗಳಿಗೆ ಹೆಚ್ಚಿನ ಸ್ಪಂದನೆ ನೀಡುತ್ತೇವೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಹೇಳಿದ್ದಾರೆ.
ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಡ, ಆಲೂರು, ನಾವುಂದ ದಲ್ಲಿ ಬೈಂದೂರು, ವಂಡ್ಸೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ರವಿವಾರ ನಡೆದ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಬಡವ, ಶ್ರೀಮಂತ ಎಂಬ ಬೇಧಭಾವ ತೋರದೆ, ಪ್ರತಿಯೊಬ್ಬರಿಗೂ ನಮ್ಮ ಕಾಂಗ್ರೆಸ್ ಪಕ್ಷದ ಜನಪರ ಗ್ಯಾರಂಟಿ ಯೋಜನೆಗಳು ತಲುಪುತ್ತಿವೆ. ಅದೇ ರೀತಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಬೈಂದೂರು ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅದನ್ನು ಮುಂದುವರೆಸಿಕೊಂಡು ಹೋಗಲು ನನಗೆ ಅವಕಾಶ ಕಲ್ಪಿಸಿಕೊಡಿ ಎಂದರು.
ನಟ ಶಿವರಾಜ್ ಕುಮಾರ್ ಮಾತನಾಡಿ, ಮತದಾನ ಒಂದು ಹಕ್ಕು. ಸೂಕ್ತ ಯೋಚನೆಯೊಂದಿಗೆ ಸರಿಯಾದ ವ್ಯಕ್ತಿಗೆ ನಿಮ್ಮ ಮತ ನೀಡಬೇಕು. ಹೊಸಬರಿಗೆ ಅವಕಾಶ ನೀಡಿ. ಗೀತಾ ಗೆದ್ದರೆ ಖಂಡಿತ ಉತ್ತಮ ಕೆಲಸ ಮಾಡುವ ಬಗ್ಗೆ ನಾನೇ ಗ್ಯಾರಂಟಿ. ಆ ಬಗ್ಗೆ ನಂಬಿಕೆ ಇಡಿ. ನಾನು ಸೆಲೆಬ್ರೆಟಿ, ನಟನಾಗಿ ಬಂದಿಲ್ಲ. ಗೀತ ಗಂಡನಾಗಿ ಮತ ಕೇಳಲು ಬಂದಿದ್ದು, ಒಂದು ಬಾರಿ ಮತ ಕೊಟ್ಟು ಗೆಲ್ಲಿಸಿ, ಗೀತಾ ಅವರಿಗೆ ಕೆಲಸ ಮಾಡುವ ಇಚ್ಚಾಶಕ್ತಿ ಇದೆ ಎಂದರು.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಮಹಾನ್ ಸುಳ್ಳುಗಾರ. ಕಾಂಗ್ರೆಸ್ ನೀಡಿದ ಭರವಸೆ ಈಡೇರಿಸಿದೆ. ಆದರೆ ಶ್ರೀನಿವಾಸ ಪೂಜಾರಿ ನೀಡುತ್ತೇವೆ ಎಂದ ಕುಚ್ಚಲಕ್ಕಿ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.
ನಾವುಂದ ಕಾರ್ಯಕ್ರಮದ ವೇಳೆ ಆಗಮಿಸಿದ ಮಂಗಳಮುಖಿಯರು ವೇದಿಕೆ ಮೇಲೆ ಬಂದು ಗೀತಾ ಮತ್ತು ಶಿವರಾಜ ಕುಮಾರ್ ದಂಪತಿಗಳನ್ನು ಹರಸಿದರು.
ಮಾಜಿ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ, ಪಕ್ಷದ ಮುಖಂಡರಾದ ಜಿ.ಎ. ಬಾವಾ, ಎಸ್.ರಾಜು ಪೂಜಾರಿ, ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಬಾಬು ಹೆಗ್ಡೆ, ಶಂಕರ ಪೂಜಾರಿ, ಮದನ್ ಕುಮಾರ್, ಅರವಿಂದ ಪೂಜಾರಿ, ಪ್ರಸನ್ನ ಕುಮಾರ್ ಶೆಟ್ಟಿ, ಅನಿಲ್, ಕೆನಡಿ ಪಿರೇರಾ, ರಮೇಶ್ ಶೆಟ್ಟಿ, ಸುಶೀಲಾ ದೇವಾಡಿಗ, ಡಿ.ಆರ್.ರಾಜು, ವಂಡಬಳ್ಳಿ ಜಯರಾಮ ಶೆಟ್ಟಿ, ಉದಯ ಕುಮಾರ್ ಶೆಟ್ಟಿ ವಂಡ್ಸೆ, ಉದಯ್ ಪೂಜಾರಿ ಚಿತ್ತೂರು ಉಪಸ್ಥಿತರಿದ್ದರು.
‘ದಿನ ನಿತ್ಯದ ವಸ್ತುಗಳ ಬೆಲೆ ಗಗನಕ್ಕೇರಿದೆ. ದೇಶ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ಸಮಸ್ಯೆ ತಲೆದೂರಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ನರೇಗಾ ಯೋಜನೆಗೆ ಬೇಡಿಕೆ ಹೆಚ್ಚಿದೆ. ಆದರೆ ಕೆಲಸವಿಲ್ಲ. ನಂದಿನಿ ಹಾಲು ಮತ್ತು ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ಇದಕ್ಕೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರದಲ್ಲಿ ಧ್ವನಿ ಎತ್ತಲು, ನನಗೆ ಮತ ನೀಡಿ ಅವಕಾಶ ಒದಗಿಸಿಕೊಡಿ’
-ಗೀತಾ ಶಿವರಾಜ್‌ಕುಮಾರ್







