ರಘುಪತಿ ಭಟ್ ಗೆಲ್ಲುವ ಭ್ರಮೆಯಲ್ಲಿದ್ದಾರೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

ಉಡುಪಿ: ನೈರುತ್ಯ ಪದವೀಧರ ಕ್ಷೇತ್ರದ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ತನ್ನ ಮೂಗಿನ ನೇರಕ್ಕೆ ಮಾತನಾಡುತ್ತಿ ದ್ದಾರೆ. ರಘುಪತಿ ಭಟ್‌ಗೆ ಪಕ್ಷದಿಂದ ಯಾವತ್ತು ಅನ್ಯಾಯ ಆಗಿಲ್ಲ. ಅವರಿಗೆ ಸಾಕಷ್ಟು ಅವಕಾಶ ಸಿಕ್ಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅವಕಾಶ ಸಿಗಬೇಕಾದವರು ಅನೇಕ ಮಂದಿ ನಮ್ಮ ಪಕ್ಷದಲ್ಲಿದ್ದಾರೆ. ಸಿಕ್ಕವರಿಗೆ ಮತ್ತೆ ಮತ್ತೆ ಅವಕಾಶ ಸಿಗಬೇಕು ಎಂಬುದು ಸರಿಯಲ್ಲ. ರಘುಪತಿ ಭಟ್ ತಾನು ಗೆಲ್ಲುತ್ತೇನೆ ಎನ್ನುವ ಭ್ರಮೆಯಲ್ಲಿದ್ದಾರೆ. ಬಿಜೆಪಿ ಪಕ್ಷ, ಸಂಘಟನೆ ಬಲಿಷ್ಠವಾಗಿದೆ. ಧನಂಜಯ್ ಸರ್ಜಿಯನ್ನು ದೊಡ್ಡ ಅಂತರದಲ್ಲಿ ಗೆಲ್ಲಿಸುತ್ತೇವೆ ಎಂದರು.
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯದಲ್ಲಿ ಚುನಾಯಿತ ಸರಕಾರ ಇದೆ ಎಂಬುದನ್ನೇ ಜನ ಮರೆತಿದ್ದಾರೆ. ಪೋಲಿಸ್ ಅಧಿಕಾರಿಗಳು, ಸರಕಾರದ ಪ್ರತಿನಿಧಿಗಳು ವಿಫಲರಾಗಿದ್ದಾರೆ. ರಾಜ್ಯದಲ್ಲಿ ಯಾರು ಏನು ಬೇಕಾದರೂ ಮಾಡಬಹುದು ಎಂಬ ವಾತಾವರಣ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದರು.
ಮಧು ಬಂಗಾರಪ್ಪ ಹೇರ್ ಕಟಿಂಗ್ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಶಿಕ್ಷಣ ಸಚಿವರು ಶಿಸ್ತಿನಿಂದ ಇರಬೇಕು. ನಾನು ಹೇಳಿರುವುದು ಶಿಕ್ಷಕರು, ಪೋಷಕರು, ಮಕ್ಕಳ ಅಭಿಪ್ರಾಯವೇ ಹೊರತು ನನ್ನ ಅಭಿಪ್ರಾಯ ಅಲ್ಲ. ಕನ್ನಡ ಗೊತ್ತಿರುವವರು ಸಚಿವರಾದರೆ ರಾಜ್ಯಕ್ಕೂ ಮಕ್ಕಳ ಶಿಕ್ಷಣಕ್ಕೂ ಒಳಿತು ಎಂದರು.
ಮಧು ಬಂಗಾರಪ್ಪ ಶಿಕ್ಷಣವನ್ನು ಸರಿಯಾದ ದಾರಿಯಲ್ಲಿ ತೆಗೆದು ಕೊಂಡು ಹೋಗುತ್ತಾರೆ ಎಂಬ ನಂಬಿಕೆ ನನಗೆ ಇಲ್ಲ. ಕನ್ನಡ ಬರುವುದಿಲ್ಲ ಎಂದು ಅವರೇ ಒಪ್ಪಿಕೊಂಡಿದ್ದಾರೆ. ಕನ್ನಡ ಗೊತ್ತಿರುವ, ಶಿಕ್ಷಣಕ್ಕೆ ಆದ್ಯತೆ ಕೊಡುವ ವ್ಯಕ್ತಿಗೆ ಅಧಿಕಾರ ಕೊಡಬೇಕು. ಶಿಕ್ಷಣ ಕ್ಷೇತ್ರಕ್ಕೆ ತುಂಬಾ ಪಾವಿತ್ರತೆ ಇದೆ. ಶಿಕ್ಷಕರು, ಮಕ್ಕಳು ಶಿಸ್ತಿನಿಂದ ಶಾಲೆಗೆ ಬರಬೇಕು. ಹಾಗಾಗಿ ಶಿಕ್ಷಣ ಸಚಿವರು ಕೂಡ ಶಿಸ್ತಿನಿಂದ ಇರಬೇಕು ಎಂದು ಅವರು ಹೇಳಿದರು.







