ಶಿಕ್ಷಕರ, ಪದವೀಧರರ ಸಮಸ್ಯೆಗಳಿಗೆ ಕಾಂಗ್ರೆಸ್ ಸದಾ ಸ್ಪಂದನೆ: ಸಲೀಂ ಅಹ್ಮದ್

ಉಡುಪಿ, ಮೇ 27: ರಾಜ್ಯದ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಖಚಿತ. ಜನತೆ ವಿಧಾನಸಭಾ ಚುನಾವಣೆಯಲ್ಲಿ ಬದಲಾವಣೆ ಬಯಸಿದಂತೆ ಪದವೀಧರ ಹಾಗೂ ಶಿಕ್ಷಕ ಕ್ಷೇತ್ರಗಳಲ್ಲಿಯೂ ಬದಲಾವಣೆಯನ್ನು ಬಯಸಿದ್ದಾರೆ ಎಂದು ವಿಧಾನ ಪರಿಷತ್‌ನಲ್ಲಿ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದ್ದಾರೆ.
ನಗರದ ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ನಡೆದ ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣಾ ಪೂರ್ವ ತಯಾರಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಅಭಿವೃದ್ಧಿಯ ಮೂಲಕ ಎಲ್ಲಾ ವರ್ಗದ ಜನರಿಗೆ ನ್ಯಾಯ ಒದಗಿಸುವುದು ಕಾಂಗ್ರೆಸ್ ಪಕ್ಷದ ಸಿದ್ಧಾಂತ. ರಾಜ್ಯದ ಶಿಕ್ಷಕರ ಹಾಗೂ ಪದವೀಧರರ ಸಮಸ್ಯೆಗಳಿಗೂ ಕಾಂಗ್ರೆಸ್ ಸದಾ ಸ್ಪಂದಿಸುತ್ತಾ ಬಂದಿದೆ. ದೇಶದಲ್ಲಿಯೂ ಈ ಬಾರಿ ಬದಲಾ ವಣೆಯ ಗಾಳಿ ಬೀಸುತ್ತಿದ್ದು, ಪ್ರಧಾನಿಗಳ ವಿಚಲಿತ ಹೇಳಿಕೆಗಳು ಇದಕ್ಕೆ ಸಾಕ್ಷಿ ಎಂದು ಅವರು ನುಡಿದರು.
ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಮಾತನಾಡಿ ನೈರುತ್ಯ ಶಿಕ್ಷಣ ಹಾಗೂ ಪದವೀಧರ ಕ್ಷೇತ್ರವು ಶಿಕ್ಷಣದಲ್ಲಿ ಬಹಳಷ್ಟು ಮುಂದುವರಿದ ಕ್ಷೇತ್ರ. ಹಾಗೆಯೇ ಅಭಿವೃದ್ಧಿಯಲ್ಲಿಯೂ ಮುಂಚೂಣಿಯಲ್ಲಿದೆ. ಕಾಂಗ್ರೆಸ್ ಪಕ್ಷ ಎಲ್ಲರ ಹಿತ ಕಾಪಾಡುವಲ್ಲಿ ಕಂಕಣ ಬದ್ಧವಾಗಿದೆ. ಈ ಚುನಾವಣೆಯಲ್ಲಿ ಎಲ್ಲಾ ಮತದಾರರನ್ನು ತಲುಪಲು ಕಾರ್ಯ ಕರ್ತರಿಗೆ ಮಾತ್ರ ಸಾಧ್ಯ. ನಮ್ಮ ಸರಕಾರ ಒಂದು ವರ್ಷ ಪೂರೈಸಿದ್ದು, ಈ ಅವಧಿಯ ಜನಪರ ಕೆಲಸಗಳನ್ನು ಮುಂದಿಟ್ಟು ಗೆಲುವು ಸಾಧಿಸಬಹುದು. ಜನರು ಕೋಮು ಭಾವನೆಯನ್ನು ಸ್ವೀಕರಿಸುವುದಿಲ್ಲ ಎನ್ನುವುದು ಕಳೆದ ವಿಧಾನಸಭಾ ಚುನಾ ವಣಾ ಫಲಿತಾಂಶದಿಂದ ಅರಿವಿಗೆ ಬರುತ್ತದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್‌ಕುಮಾರ್ ಕೊಡವೂರು ಪ್ರಸ್ತಾವಿಕವಾಗಿ ಮಾತನಾಡಿ ಚುನಾವಣೆಯಲ್ಲಿ ಅಭ್ಯರ್ಥಿಗಳ ಗೆಲುವಿಗೆ ಕಾರ್ಯ ಯೋಜನೆ ಗಳನ್ನು ಹಮ್ಮಿಕೊಂಡಿದ್ದು, ಬ್ಲಾಕ್ ಅಧ್ಯಕ್ಷರುಗಳಿಗೆ ಜವಾಬ್ದಾರಿಗಳನ್ನು ನೀಡುವುದರೊಂದಿಗೆ ಉಸ್ತುವಾರಿಗಳನ್ನು ನಿಯೋಜಿಸಲಾಗಿದೆ. ಪ್ರತಿ ಹಂತ ದಲ್ಲಿಯೂ ಉಸ್ತುವಾರಿಗಳು ಪ್ರಗತಿಯ ವರದಿಯನ್ನು ಜಿಲ್ಲಾ ಕಾಂಗ್ರೆಸ್‌ಗೆ ನೀಡಲು ಆದೇಶಿಸಲಾಗಿದೆ ಎಂದರು.
ಸಭೆಯಲ್ಲಿಪಕ್ಷದ ಮುಖಂಡರಾದ ಎಂ.ಎ.ಗಫೂರ್, ಜಿಲ್ಲಾ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಪ್ರಸಾದ್‌ರಾಜ್ ಕಾಂಚನ್, ಶಹೀದ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಕೃಷ್ಣಪ್ಪ ಸುಳ್ಯ, ಡಾ. ಪ್ರೊ.ಸುಧೀರ್ ಹೆಗ್ಡೆ, ನೀರೆ ಕೃಷ್ಣ ಶೆಟ್ಟಿ, ಮಲ್ಯಾಡಿ ಶಿವರಾಮ ಶೆಟ್ಟಿ, ಶಂಕರ್ ಕುಂದರ್, ಸಂತೋಷ್ ಕುಲಾಲ್, ನವೀನಚಂದ್ರ ಶೆಟ್ಟಿ, ರಮೇಶ್ ಕಾಂಚನ್, ಸದಾಶಿವ ದೇವಾಡಿಗ, ನವೀನ್‌ಚಂದ್ರ ಸುವರ್ಣ, ಡಾ.ಸುನಿತಾ ಶೆಟ್ಟಿ, ಮೀನಾಕ್ಷಿ ಮಾಧವ ಬನ್ನಂಜೆ, ಕುಶಲ ಶೆಟ್ಟಿ, ಕಿಶೋರ್ ಕುಮಾರ್ ಎರ್ಮಾಳ್, ರೋಶನ್ ಶೆಟ್ಟಿ, ಸರ್ಪುದ್ದೀನ್ ಶೇಖ್, ಸುನಿಲ್ ಬಂಗೇರ, ಸತೀಶ್ ಕೊಡವೂರು, ಮಹಾಬಲ ಕುಂದರ್, ಸುರೇಂದ್ರ ಆಚಾರ್ಯ ಹಾಗೂ ಚುನಾವಣಾ ಉಸ್ತುವಾರಿಗಳು ಭಾಗವಹಿಸಿದ್ದರು.
ಜಿಲ್ಲಾ ವಕ್ತಾರ ಭಾಸ್ಕರ ರಾವ್ ಕಿದಿಯೂರು ಕಾರ್ಯಕ್ರಮ ನಿರ್ವಹಿಸಿದರೆ, ಉದಯಕುಮಾರ ಶೆಟ್ಟಿ ಮುನಿಯಾಲ್ ವಂದಿಸಿದರು.







