ದೌರ್ಜನ್ಯ ವಿರುದ್ಧದ ಮಹಿಳಾ ಕಾನೂನು ಬಳಸಿಕೊಳ್ಳುವ ಧೈರ್ಯ ತೋರಬೇರು: ಮೇರಿ ಶ್ರೇಷ್ಠ

ಉದ್ಯಾವರ: ಇಂದಿನ ಶಿಷ್ಟ ಸಮಾಜದಲ್ಲಿ ಮಹಿಳೆ ಪ್ರತಿ ಕ್ಷೇತ್ರದಲ್ಲಿ ಸಾಧನೆಗಳನ್ನು ಮಾಡಿದ್ದರೂ ಸಹ, ಆಕೆ ಮನೆ ವಾರ್ತೆಗೆ ಮಾತ್ರ ಸೀಮಿತ ವಾಗಿರುತ್ತಾಳೆ ಮತ್ತು ಸೀಮಿತವಾಗಿರಬೇಕು ಎಂಬ ಭಾವನೆ ಪುರುಷ ಪ್ರಧಾನ ಸಮಾಜ ದಲ್ಲಿದೆ. ಆಕೆ ಆರ್ಥಿಕವಾಗಿ ಸ್ವತಂತ್ರವಾಗಿದ್ದರೂ ಆ ಸ್ವಾತಂತ್ರ್ಯವನ್ನು ಅನುಭವಿಸದ ಸ್ಥಿತಿಯಲ್ಲಿ ಬದುಕುತ್ತಿದ್ದಾಳೆ ಎಂದು ಉಡುಪಿ ಜಿಲ್ಲಾ ಸರಕಾರಿ ವಕೀಲೆ ಮೇರಿ ಎ.ಆರ್.ಶ್ರೇಷ್ಠ ಹೇಳಿದ್ದಾರೆ.
ಉಡುಪಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಾವರದ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್‌ನ ಸುವರ್ಣ ಸಂಭ್ರಮ ವರ್ಷದ ಪ್ರಯುಕ್ತ ನಡೆದ ಮೇ ತಿಂಗಳ ಮಹಿಳಾ ಕಾನೂನು ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಇದೇ ಕಾರಣಕ್ಕಾಗಿ ಸಂವಿಧಾನ ಮತ್ತು ಸರಕಾರ, ಮಹಿಳಾ ದೌರ್ಜನ್ಯದ ವಿರೋಧವಾಗಿ ಮಹಿಳಾ ಕಾನೂನುಗಳನ್ನು ರೂಪಿಸಿದೆ. ಆದರೆ ಆ ಕಾನೂನು ಗಳ ಅರಿವಿಲ್ಲದೇ ಅಥವಾ ಅರಿವು ಇದ್ದರೂ ಕೂಡ ಅದನ್ನು ಬಳಸಿಕೊಳ್ಳುವ ಧೈರ್ಯ ವಿಲ್ಲದೇ ಮಹಿಳೆ ದೌರ್ಜನ್ಯದಲ್ಲಿ ನಲುಗಿ ತನ್ನ ಬದುಕನ್ನು ಕಳೆಯುತಿದ್ದಾಳೆ. ಇದಕ್ಕಾಗಿ ಇಂದಿನ ಮಹಿಳೆ ತನ್ನ ಮೇಲಿನ ದೌರ್ಜನ್ಯದ ವಿರುದ್ಧವಿರುವ ಕಾನೂನನ್ನು ತಿಳಿದುಕೊಳ್ಳಬೇಕು ಮತ್ತು ಅದನ್ನು ಧೈರ್ಯವಾಗಿ ಬಳಸಲು ಮುಂದಾಗಬೇಕು. ಆಗ ಮಾತ್ರ ಸಮ ಸಮಾಜ ನಿರ್ಮಾಣ ವಾಗಬಹುದು ಎಂದು ಮೇರಿ ಶ್ರೇಷ್ಠ ಅಭಿಪ್ರಾಯಪಟ್ಟರು.
ಹೆಣ್ಣಿನ ಮೇಲೆ ದೌರ್ಜನ್ಯ ಆಕೆ ಭ್ರೂಣಾವಸ್ಥೆಯಲ್ಲಿ ಇರುವಾಗ ಪ್ರಾರಂಭ ಗೊಳ್ಳುತ್ತದೆ. ಅದು ಸಾವಿನ ತನಕ ಪ್ರತಿ ಹಂತ ದಲ್ಲಿಯೂ ನಡೆಯುತ್ತದೆ. ಹೆಣ್ಣಿನ ಮೇಲಿನ ದೌರ್ಜನ್ಯ ಭ್ರೂಣ ಹತ್ಯೆ, ಬಾಲ್ಯ ವಿವಾಹ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ, ಉದ್ಯೋಗದ ಸಂದರ್ಭದಲ್ಲಿ ಆಗುವ ಕಿರುಕುಳ ಮೊದಲಾದ ಎಲ್ಲಾ ಸಂಗತಿಗಳ ವಿರುದ್ಧ ನ್ಯಾಯ ಒದಗಿಸುವ ಎಲ್ಲಾ ಕಾನೂನುಗಳು ನಮ್ಮಲ್ಲಿವೆ. ಆದರೆ ಹೆಚ್ಚಿನ ಮಹಿಳೆಗೆ ಇದರ ಬಗ್ಗೆ ಅರಿವು ಇರದೆ, ಅರಿವು ಇದ್ದರೂ ಸಮಾಜಕ್ಕೆ ಹೆದರಿ ಬಳಸಿಕೊಳ್ಳದೇ ತನ್ನಲ್ಲೇ ನರಳುತ್ತಾಳೆ. ಇದು ಕೊನೆಗೊಳ್ಳಬೇಕು. ಇಂತಹ ಕಾನೂನುಗಳ ಅರಿವನ್ನು ಮಹಿಳೆಗೆ ನೀಡುವುದೇ ಒಂದು ಸವಾಲಾಗಿ ಪರಿಣಮಿಸಿದೆ ಎಂದವರು ವಿವರಿಸಿದರು.
ಇಂದಿನ ಈ ಆಧುನಿಕ ಕಾಲದಲ್ಲಿ ಮಹಿಳೆ ಎಂದೂ ಒಂಟಿಯಲ್ಲ. ಆಕೆಯ ಮೇಲೆ ನಡೆಯಬಹುದಾದ ಯಾವುದೇ ದೌರ್ಜನ್ಯ ಹಾಗೂ ಅನ್ಯಾಯ ಗಳಿಂದ ರಕ್ಷಿಸಿಕೊಳ್ಳಲು ಕಾನೂನು ಆಕೆಯ ಕೈಗೆ ಆಯುಧವನ್ನು ಕೊಟ್ಟಿದೆ. ಅದನ್ನು ಬಳಸುವ ಕೆಲಸ ಮಹಿಳೆಯರು ಮಾಡಬೇಕಾಗಿದೆ .ಈ ಧೈರ್ಯವನ್ನು ಅವರು ತೋರದಿದ್ದರೆ ಅವರನ್ನು ಯಾರು ರಕ್ಷಿಸಲಾರರು ಎಂದ ಮೇರಿ ಶ್ರೇಷ್ಠ, ಮಹಿಳಾ ಕಾನೂನಿನ ಎಲ್ಲಾ ವಿವರಗಳನ್ನು ನೀಡಿದರು.
ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪ್ರೇಮಾ ಮಾರ್ಗರೇಟ್, ಸುಗಂಧಿ ಶೇಖರ್, ರಿಯಾಝ್ ಪಳ್ಳಿ ಮೊದಲಾದ ವರು ಭಾಗವಹಿಸಿದರು.
ಸಂಸ್ಥೆಯ ಅಧ್ಯಕ್ಷ ತಿಲಕ್‌ರಾಜ್ ಸಾಲಿಯನ್ ಸ್ವಾಗತಿಸಿ, ಗೌರವಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಅಬಿದ್ ಆಲಿ ಕಾರ್ಯಕ್ರಮ ನಿರ್ವಹಿಸಿ ಕೊನೆಯಲ್ಲಿ ವಂದಿಸಿದರು.







