ದಲಿತರಿಗೆ ಆರ್ಥಿಕ ಬಹಿಷ್ಕಾರದ ಬೆದರಿಕೆ: ದಸಂಸ ಖಂಡನೆ

ಕುಂದಾಪುರ, ಜೂ.26: ಸ್ವಸಹಾಯ ಸಂಘದವರು ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮದ ಎಲ್ಕೋಡು, ಜಡ್ಡು, ಉಪ್ರಳ್ಳಿ ಎಂಬಲ್ಲಿ ದಲಿತರ ಮನೆಗೆ ಸಾಲ ವಸೂಲಿ ನೆಪದಲ್ಲಿ ನುಗ್ಗಿ ಹಲ್ಲೆ ಮಾಡಿ, ಆರ್ಥಿಕ ಬಹಿಷ್ಕಾರದ ಬೆದರಿಕೆ ಹಾಕಿ ಅವಾಚ್ಯ ಶಬ್ದ ಬಳಸಿ ನಿಂದಿಸಿರುವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕುಂದಾಪುರ ತಾಲೂಕು ಸಂಚಾಲಕ ಕೆ.ಸಿ.ರಾಜು ಬೆಟ್ಟಿನಮನೆ ತಿಳಿಸಿದ್ದಾರೆ.
ಸ್ವಸಹಾಯ ಸಂಘದ ಹೆಸರಿನಲ್ಲಿ ಗೂಂಡಾಗಿರಿಯ ಅತಿರೇಕದ ವರ್ತನೆಯನ್ನು ತೋರಿಸಲಾಗುತ್ತಿದೆ. 21ನೇ ಶತಮಾನ ದಲ್ಲೂ ಇಂತಹ ಘಟನೆ ಗಳು ನಡೆಯುತ್ತಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆಯಾಗಿದೆ. ಈ ಸ್ವಸಹಾಯ ಸಂಘದವರು ದೇವರ ಹೆಸರಲ್ಲಿ, ಗ್ರಾಮೀಣ ಭಾಗದ ಮಹಿಳೆಯರನ್ನು ಸ್ವಾವಲಂಬಿ ಜೀವನ ನಡೆಸಲು ನೆರವಾಗಲು ಹತ್ತು ಜನರ ಗುಂಪು ರಚಿಸಿ ಮೊದಲ ಹಂತದಲ್ಲಿ ಹತ್ತು ಸಾವಿರ ಸಾಲ ನೀಡಿ ನಂತರ ಅಮಾಯಕ ಜನರಿಂದ ಅಧಿಕ ಬಡ್ಡಿಯನ್ನು ವಸೂಲಿ ಮಾಡಿ ಮುಗ್ಧ ಬಡ ಜನರನ್ನು ಸಾಲದ ಸುಳಿಯಲ್ಲಿ ಸಿಲುಕಿಸುತ್ತಿದೆಂದು ಅವರು ಆರೋಪಿಸಿದ್ದಾರೆ.
ಇಂತಹ ಬಡ್ಡಿ ದಂಧೆೆ ನಡೆಸುವ ಸಂಘಗಳ ಮತ್ತು ಖಾಸಗಿ ಹಣಕಾಸು ಸಂಸ್ಥೆಗಳ ವಿರುದ್ಧ ಸಂಭಂದಪಟ್ಟ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಕೊಳ್ಳಬೇಕು. ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮದ ಎಲ್ಕೋಡು, ಜಡ್ಡು, ಉಪ್ರಳ್ಳಿಯ ದಲಿತ ಮಹಿಳೆಯರ ಮೇಲೆ ಹಲ್ಲೆ ಮತ್ತು ಬೆದರಿಕೆ ಹಾಕಿದ ಸಂಘದ ಪದಾಧಿಕಾರಿಗಳನ್ನು ದಲಿತ ದೌರ್ಜನ್ಯ ಕೇಸು ದಾಖಲಿಸಿ ಕೊಂಡು ಕೂಡಲೇ ಬಂಧಿಸಬೇಕು. ಇಲ್ಲವಾದರೆ ಉಡುಪಿ ಜಿಲ್ಲೆಯಾದ್ಯಾಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕೆ.ಸಿ ರಾಜು ಬೆಟ್ಟಿನಮನೆ ಪತ್ರಿಕೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.







