ಮೀನು ಮಾರಾಟ ಶೆಡ್ ಮೇಲೆ ಮರದ ಗೆಲ್ಲು ಬಿದ್ದು ಇಬ್ಬರಿಗೆ ಗಂಭೀರ ಗಾಯ
ಉಡುಪಿ ಜಿಲ್ಲೆಯಲ್ಲಿ ಮುಂದುವರಿದ ಭಾರೀ ಮಳೆ; ಅಪಾರ ಹಾನಿ

ಉಡುಪಿ, ಜೂ.27: ಉಡುಪಿ ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಇಂದು ಸಹ ಮುಂದುವರಿದಿದೆ. ಇದರೊಂದಿಗೆ ಮಳೆ-ಗಾಳಿಯಿಂದಾಗಿ ಅಪಾರ ಪ್ರಮಾಣದ ಹಾನಿಯೂ ವರದಿಯಾಗುತ್ತಿದ್ದು ಕಾರ್ಕಳ ತಾಲೂಕಿನ ನೀರೆ ಗ್ರಾಮದ ವಾರದ ಸಂತೆಯ ಸಂದರ್ಭದಲ್ಲಿ ಮೀನು ಮಾರಾಟದ ಶೆಡ್ ಮೇಲೆ ಮರದ ಭಾರೀ ಗ್ರಾತದ ಗೆಲ್ಲೊಂದು ಬಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗುರುವಾರ ನೀರೆ ಗ್ರಾಮದಲ್ಲಿ ವಾರದ ಸಂತೆ ನಡೆಯುತಿದ್ದು, ಅದರ ಒಂದು ಭಾಗದಲ್ಲಿದ್ದ ಮೀನು ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸುತಿದ್ದ ಶೆಡ್ ಮೇಲೆ ಬೆಳಗ್ಗೆ 11ಗಂಟೆಗೆ ಮರದ ಭಾರೀ ಗಾತ್ರದ ಗೆಲ್ಲೊಂದು ತುಂಡಾಗಿ ಬಿದ್ದು ಅದರೊಳಗೆ ಮೀನು ಮಾರಾಟ ಮಾಡುತಿದ್ದ ಕೌಡೂರಿನ ಭಾಸ್ಕರ್ ಹಾಗೂ ಎರ್ಲಂಪಾಡಿಯ ಸುಮಿತ್ರ ಎಂಬವರು ಗಂಭೀರವಾಗಿ ಗಾಯ ಗೊಂಡರು.
ತುಂಡಾದ ಮರದ ಗೆಲ್ಲು ಹಾಗೂ ಹುಡಿಯಾದ ಸಿಮೆಂಟ್ ಶೀಟ್‌ನ ಭಾಗಗಳು ಇಬ್ಬರ ಮೇಲೆ ಬಿದ್ದಿದ್ದು, ಸುಮಿತ್ರ ಅವರ ಕಾಲಿನ ಮೂಳೆ ಮುರಿತವೂ ಸೇರಿದಂತೆ ಗಂಭೀರಗಾಯವಾಗಿದೆ. ತಕ್ಷಣ ಇಬ್ಬರನ್ನೂ ಸಮೀಪದ ಕಾರ್ಕಳದ ಡಾ.ಟಿಎಂಎ ಪೈ ಆಸ್ಪತ್ರೆಗೆ ದಾಖಲಿಸಿದ್ದು, ಸುಮಿತ್ರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಅಜ್ಜರಕಾಡಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವಿಎ ಸುಚಿತ್ರ ತಿಳಿಸಿದ್ದಾರೆ.
ಭಾಸ್ಕರ ಹಾಗೂ ಸುಮಿತ್ರ ಅವರು ಪ್ರತಿದಿನ ವಾಹನದಲ್ಲಿ ಮೀನು ಮಾರಾಟ ಮಾಡುತಿದ್ದ, ವಾರದ ಸಂತೆಯಾದ ಕಾರಣ ಸಂತೆ ಮಾರುಕಟ್ಟೆಯಲ್ಲಿ ತಮ್ಮ ವಾಹನವನ್ನು ನಿಲ್ಲಿಸಿ ಮೀನು ಮಾರಾಟ ಮಾಡುತಿದ್ದರು ಎಂದು ಅವರು ತಿಳಿಸಿದ್ದಾರೆ.
ಮನೆಗೆ ನುಗ್ಗಿದ ನೀರು: ಉಡುಪಿಯಲ್ಲಿ ಬೈಲಕೆರೆ ಬಳಿಯ ತೋಟದ ಮನೆಯೊಳಗೆ ನೀರು ನುಗ್ಗಿದ ಪರಿಣಾಮ ಮನೆಯ ವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ರಾತ್ರಿ ಸುರಿದ ವಿಪರೀತ ಮಳೆಗೆ ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಪರಿಸರದ ನಾಲ್ಕು ಮನೆಯೊಳಗೆ ನೀರು ತುಂಬಿಕೊಂಡಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳೀಯರನ್ನು ರಕ್ಷಿಸಿದ್ದಾರೆ. ನಾಲ್ಕು ಮನೆಯಲ್ಲಿದ್ದ ಒಟ್ಟು 14 ಮಂದಿಯ ರಕ್ಷಣೆ ಮಾಡಲಾಗಿದ್ದು, ಅವರೆಲ್ಲರಿಗೂ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಉಳಿದು ಕೊಳ್ಳಲು ವ್ಯವಸ್ಥೆ ಮಾಡಲಾಯಿತು.
ಮಲ್ಪೆಯಲ್ಲಿ ರಸ್ತೆಗೆ ಉರುಳಿದ ಮರ: ರಾಜ್ಯ ಕರಾವಳಿಯಲ್ಲಿ ಕಳೆದ ಎರಡು-ಮೂರು ದಿನಗಳಿಂದ ಭಾರೀ ಮಳೆ ಸುರಿಯು ತ್ತಿದೆ. ಇದರಿಂದ ಕರಾವಳಿಯ ಮೂರು ಜಿಲ್ಲೆಗಳಲ್ಲೂ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಉಡುಪಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು ಹಲವೆಡೆ ಮರಗಳು ಬಿದ್ದು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿವೆ.
ಮಲ್ಪೆಯಿಂದ ಉಡುಪಿಗೆ ತೆರಳುವ ರಾಷ್ಟ್ರೀಯ ಹೆದ್ದಾರಿ ಮೇಲೆ ಕಳೆದ ರಾತ್ರಿ ಬೃಹತ್ ಮರವೊಂದು ಉರುಳಿ ಬಿದ್ದ ಪರಿಣಾಮ ಮಲ್ಪೆ ರಾ. ಹೆದ್ದಾರಿ ತಾತ್ಕಾಲಿಕ ಬಂದ್ ಆಗಿತ್ತು. ಆದಿ ಉಡುಪಿ ಪಂದುಬೆಟ್ಟು ಸಮೀಪ ಬೃಹತ್ ಮರ ರಸ್ತೆಗೆ ಅಡ್ಡವಾಗಿ ಉರುಳಿ ಬಿದ್ದಿದ್ದು, ಇದರಿಂದಾಗಿ ಅಕ್ಕಪಕ್ಕದ ಆರೇಳು ವಿದ್ಯುತ್ ಕಂಬಗಳೊಂದಿಗೆ ವಿದ್ಯುತ ಲೈನ್ ಸಹ ಧರಾಶಾಹಿಯಾಗಿವೆ. ಪರಿಣಾಮ ಪರಿಸರದ ಜನತೆ ವಿದ್ಯುತ್ ಇಲ್ಲದೇ ಪರಿತಪಿಸುವಂತಾಗಿದೆ.
ರಾತ್ರಿ ಬೀಸಿದ ವಿಪರೀತ ಗಾಳಿಯಿಂದಾಗಿ ತಡರಾತ್ರಿ ಪಂದುಬೆಟ್ಟುವಿನಲ್ಲಿ ಮರ ರಸ್ತೆಗೆ ಅಡ್ಡವಾಗಿ ಬಿದ್ದಿದ್ದು ಉಡುಪಿ- ಮಲ್ಪೆ ಹೆದ್ದಾರಿ ಸಂಪರ್ಕ ತಾತ್ಕಾಲಿಕ ಬಂದ್ ಆಗಿತ್ತು. ಹೀಗಾಗಿ ವಾಹನಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕಾಯಿತು. ತಡರಾತ್ರಿ ಮರ ಬಿದ್ದಿದ್ದರೂ ಇಲಾಖೆ ಮರ ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲು ತೀರಾ ವಿಳಂಬ ಮಾಡಿದರು ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಹೆರ್ಗದಲ್ಲಿ ಮನೆ ಮೇಲೆರಗಿದ ಮರ: ಪರ್ಕಳದ ಹೆರ್ಗ ಗ್ರಾಮದ ಶೆಟ್ಟಿಬೆಟ್ಟುವಿನ ಕಲ್ಲಬೆಟ್ಟು ಎಂಬಲ್ಲಿ ಅಪ್ಪಿ ಶೇರಿಗಾರ್ತಿ ಯವರ ಮನೆ ಮೇಲೆ ಭಾರೀ ಗಾತ್ರದ ಮರ ಬಿದ್ದು, ಮನೆಗೆ ಅಪಾರ ಹಾನಿಯಾಗಿದೆ. ಇದೇ ಮನೆಗೆ ಹಿಂದೊಮ್ಮೆ ಸಿಡಿಲು ಬಡಿದು ತುಂಬಾ ಹಾನಿಯಾಗಿತ್ತು. ಇದೀಗ ಮರ ಬಿದ್ದು ಮನೆಯ ಮಾಡು ಸಂಪೂರ್ಣ ಹಾನಿಗೊಂಡಿದೆ.
ಮಣಿಪಾಲ ಸಮೀಪದ ಮೂಡುಪೆರಂಪಳ್ಳಿಯ ಪಾಸ್‌ಕುದ್ರು ಎಂಬಲ್ಲಿ ಕಳೆದ ರಾತ್ರಿ ಭಾರೀ ಮಳೆಗೆ ವಿದ್ಯುತ್ ಕಂಬಗಳು ಉರುಳಿ ಬಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮೆಸ್ಕಾಂ ಸಿಬ್ಬಂದಿಗಳು ಇಂದು ಬೆಳಗ್ಗೆ ಬಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದು, ಮರು ಸಂಪರ್ಕ ಕಲ್ಪಿಸಲು ಇನ್ನು ಮೂರು ದಿನ ಬೇಕು ಎಂದು ತಿಳಿಸಿದ್ದಾರೆ. ಇದರಿಂದ ಪರಿಸರದ 30ಕ್ಕೂ ಅಧಿಕ ಮನೆಯವರು ಭಾರೀ ಮಳೆ ಸುರಿಯುತ್ತಿರುವ ದಿನಗಳಲ್ಲಿ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ನಗರದ ಮೂಡನಿಡಂಬೂರು ಪರಿಸರದಲ್ಲಿ ನೀರಿನ ಮಟ್ಟ ಹೆಚ್ಚಿದ್ದು, ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮನೆ, ದೇವಾಲಯಗಳಿಗೆ ನೀರು ನುಗ್ಗಿದೆ. ದೈವಾರಾಧನೆ ನಡೆಯುವ ಮೂಡನಿಡಂಬೂರು ಗರಡಿಗೂ ನೀರ ನುಗ್ಗಿದ್ದು, ಗರಡಿ ಪರಿಸರದಲ್ಲಿ ಜನ ಹಾಗೂ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.
ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಹೊರತಾಗಿಯೂ ಜೋರಾದ ಗಾಳಿ ಬೀಸದ ಕಾರಣ ಪ್ರವಾಹ ಪರಿಸ್ಥಿತಿ ಇನ್ನೂ ಕಾಣಿಸಿಕೊಂಡಿಲ್ಲ. ಆದರೆ ತಗ್ಗುಪ್ರದೇಶಗಳಲ್ಲಿ ಕೃತಕ ನೆರೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಳ್ಳುವಂತಾಗಿದೆ. ಮಳೆ ನೀರು ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ವಾಹನ ಸಂಚಾರಕ್ಕೂ ಅಡಚಣೆಯುಂಟಾಗಿದೆ. ಇನ್ನು ಜಿಲ್ಲೆಯ ನಾನಾ ಕಡೆಗಳಲ್ಲಿ ವಿದ್ಯುತ್ ಕಂಬಗಳಿಗೆ ಹಾನಿಯಾಗಿರು ವುದರಿಂದ ಹೆಚ್ಚಿನ ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತ ಗೊಂಡಿದ್ದು, ಜನರ ಸಹನೆಯೊಂದಿಗೆ ಕಣ್ಣುಮುಚ್ಚಾಲೆಯಾಡುತ್ತಿದೆ.
ಪೋಟೊ ಇದೆ-ಯುಡಿ.ಜೆ27 ಮಳೆ ನೀರೆ,1,2,3, ಮಳೆ ಆದಿಉಡುಪಿ,1, ಮಳೆ ರಕ್ಷೆ, ಮಳೆ ಹೆರ್ಗ,1, ಮಳೆ ಪೆರಂಪಳ್ಳಿ-







