ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪಾರಿತೋಷಕ ಪ್ರದಾನ

ಉಡುಪಿ: ರಾಜ್ಯದ ಗೃಹ ಸಚಿವರಾಗಿದ್ದ ಡಾ! ವಿ.ಎಸ್. ಆಚಾರ್ಯ ಅವರ ಕಾರ್ಯತತ್ಪರತೆ, ಜವಾಬ್ದಾರಿ, ಹೊಣೆಗಾರಿಕೆ, ಕರ್ತವ್ಯ ನಿಷ್ಠೆ ಎಲ್ಲರಿಗೂ ಪ್ರೇರಣಾದಾಯಕ. ಅವರ ಜೀವನಾದರ್ಶ ಎಂದಿಗೂ ಅನುಕರಣೀಯ. ರಾಜಕೀಯವನ್ನು ವೃತ್ತಿಯಾಗಿಸದೇ ವೃತವಾಗಿ ಸ್ವೀಕರಿಸಿ ಜನ ಸೇವೆಗೈದವರು ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ದೀನದಯಾಳ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶನಿವಾರ ಉಡುಪಿ ಬಿಜೆಪಿ ಕಚೇರಿಯಲ್ಲಿ ನಡೆದ ನಗರಸಭಾ ವ್ಯಾಪ್ತಿಯ ಪ್ರೌಢಶಾಲೆಗಳಲ್ಲಿ ಎಸೆಸೆಲ್ಸಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ’ಪಂಡಿತ್ ದೀನದಯಾಳ್ ಉಪಾಧ್ಯಾಯ ಸ್ಮರಣ ಪಾರಿತೋಷಕ’ ಹಾಗೂ ’ಡಾ.ವಿ.ಎಸ್. ಆಚಾರ್ಯ ಸ್ಮರಣ ಪಾರಿತೋಷಕ’ ಮತ್ತು ಅತಿ ಹೆಚ್ಚು ಅಂಕ ಗಳಿಸಿದ ಓರ್ವ ವಿದ್ಯಾರ್ಥಿನಿಗೆ ’ಕುಮಾರಿ ಗಾಯತ್ರಿ ಸ್ಮರಣ ಪಾರಿತೋಷಕ’ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿ, ವಿದ್ಯಾರ್ಥಿ ಗಳು ಜೀವನದ ಪ್ರಗತಿಗೆ ದೊಡ್ಡ ಕನಸು ಕಾಣಬೇಕು. ಕನಸು ದೊಡ್ಡದಾದಂತೆ ಶ್ರಮವೂ ಹೆಚ್ಚಿರಬೇಕು ಎಂದು ಕಿವಿಮಾತು ಹೇಳಿದರು.
ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿದರು. ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ ನಾಯಕ್, ಶ್ಯಾಮ ಪ್ರಸಾದ್ ಮುಖರ್ಜಿ, ದೀನದಯಾಳ್ ಉಪಾಧ್ಯಾಯ ಹಾಗೂ ವಿ.ಎಸ್.ಆಚಾರ್ಯರ ಜೀವನ ತತ್ವ ಮತ್ತು ಸಾಧನೆಯನ್ನು ವಿವರಿಸಿದರು.
ಟ್ರಸ್ಟ್‌ನ ಉಪಾಧ್ಯಕ್ಷೆ ರಶ್ಮಿ ಆರ್.ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ನಗರಸಭೆ ವ್ಯಾಪ್ತಿಯ ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಒಟ್ಟು 36 ಪ್ರೌಢಶಾಲೆಗಳ ಅತಿ ಹೆಚ್ಚು ಅಂಕ ಪಡೆದ 38 ವಿದ್ಯಾರ್ಥಿಗಳಿಗೆ ಪಾರಿತೋಷಕಗಳನ್ನು ನೀಡಲಾಯಿತು.
ಟ್ರಸ್ಟಿನ ನಿಕಟಪೂರ್ವ ಅಧ್ಯಕ್ಷ ಮೋಹನ ಉಪಾಧ್ಯಾಯ ಸ್ವಾಗತಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಟ್ರಸ್ಟಿಗಳಾದ ವಿಶ್ವನಾಥ್ ಭಟ್, ನಯನಾ ಗಣೇಶ್, ಕೆ.ಟಿ.ಪ್ರಸಾದ್ ಉಪಸ್ಥಿತರಿದ್ದರು. ಟ್ರಸ್ಟಿ ದಿನಕರ ಶೆಟ್ಟಿ ಹೆರ್ಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.







