ರಾಹುಲ್ ಗಾಂಧಿ ಕುರಿತ ಶಾಸಕ ಭರತ್ ಶೆಟ್ಟಿ ಹೇಳಿಕೆಗೆ ವ್ಯಾಪಕ ಆಕ್ರೋಶ
ಭರತ್ ಶೆಟ್ಟಿ
ಉಡುಪಿ, ಜು.9: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತಿ ಗೌರವಯುತ ವಿಪಕ್ಷ ನಾಯಕನ ಸ್ಥಾನಮಾನವನ್ನು ಅಲಂಕರಿಸಿರುವ ರಾಹುಲ್ ಗಾಂಧಿಗೆ ಸಂಸತ್ತಿನ ಒಳಗೆ ನುಗ್ಗಿ ಕೆನ್ನೆ ಬಾರಿಸಬೇಕೆಂದು ಹೇಳಿಕೆ ನೀಡುವ ಮೂಲಕ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವುದಕ್ಕೆ ಪುರಾವೆ ದೊರೆತಂತಾಗಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಟೀಕಿಸಿದ್ದಾರೆ.
ಶಾಸಕ ಭರತ್ ಶೆಟ್ಟಿ ತಮ್ಮ ಬಾಲಿಶ ವರ್ತನೆ ಮತ್ತು ನೀಡುವಂತಹ ಬೇಜವಾಬ್ದಾರಿ ಹೇಳಿಕೆಗಳ ಮೂಲಕ ತಾನು ಶಾಸಕನಾಗಿರಲು ಯೋಗ್ಯನಲ್ಲ ವೆಂದು ರುಜುವಾತು ಪಡಿಸಿದ್ದಾರೆ. ಇದೇ ರೀತಿಯ ಬೇಜವಾಬ್ದಾರಿ ಹೇಳಿಕೆ ಮತ್ತು ಹಿಂಸಾಪ್ರವೃತ್ತಿಯ ವರ್ತನೆಯನ್ನು ಮುಂದುವರಿಸಿದರೆ, ಭರತ್ ಶೆಟ್ಟಿಗೆ ತಕ್ಕ ಪ್ರತ್ಯುತ್ತರ ನೀಡಲು ಕಾಂಗ್ರೆಸ್ ಕಾರ್ಯ ಕರ್ತರು ಸದಾ ಸನ್ನದ್ಧರಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ರಮೇಶ್ ಕಾಂಚನ್: ಭರತ್ ಶೆಟ್ಟಿ, ರಾಹುಲ್ ಗಾಂಧಿಯವರ ಕೆನ್ನೆಗೆ ಬಾರಿಸಲು ಪ್ರಯತ್ನಿಸುವಾಗ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕೈಗೆ ಬಳೆ ತೊಟ್ಟುಕೊಂಡು ಕೂತಿರುವುದಿಲ್ಲ. ನಿಮಗೆ ದಮ್ಮು ತಾಕತ್ತು ಇದ್ದರೆ ಅವರ ಮೈ ಮುಟ್ಟುವ ಪ್ರಯತ್ನವನ್ನು ಒಮ್ಮೆ ಮಾಡಿ ನೋಡಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಸವಾಲು ಹಾಕಿದ್ದಾರೆ.
ಒರ್ವ ಜವಾಬ್ದಾರಿಯುತ ಶಾಸಕರಾಗಿ ಸಂವಿಧಾನದ ಆಶಯದಂತೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಇವರು ರಸ್ತೆಯಲ್ಲಿ ಅಡ್ಡಾಡುವ ಪುಡಿ ರೌಡಿಗಳಂತೆ ವರ್ತಿಸುತ್ತಿರುವುದು ಶಾಸಕ ಭರತ್ ಶೆಟ್ಟಿಯವರ ವ್ಯಕ್ತಿತ್ವಕ್ಕೆ ಶೋಭೆ ತರುವು ದಿಲ್ಲ. ರಾಹುಲ್ ಗಾಂಧಿ ಕುರಿತು ಭರತ್ ಶೆಟ್ಟಿಯವರು ಆಡಿರುವ ಮಾತಿಗೆ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅವರ ವಿರುದ್ದ ಉಗ್ರವಾದ ಹೋರಾಟ ಮಾಡಲಾಗುವುದು ಎಂದರು.
ವಿಕಾಸ್ ಹೆಗ್ಡೆ: ಶಾಸಕ ಭರತ್ ಶೆಟ್ಟಿ, ರಾಹುಲ್ ಗಾಂಧಿ ಕೆನ್ನೆಗೆ ಹೊಡೆಯ ಬೇಕು ಎಂದು ಹೇಳಿರುವುದು ಅವರ ಹಿಂಸಾ ಮನಸ್ಥಿತಿಯನ್ನು ಏತ್ತಿ ತೋರಿಸುತ್ತದೆ. ಕಾಂಗ್ರೆಸ್ನವರು ಮಹಾತ್ಮಾ ಗಾಂಧೀಜಿ ಅನುಯಾಯಿಗಳು ನಮ್ಮದು ಅಹಿಂಸೆಯೇ ಪರಮೋ ಧರ್ಮ, ಶಾಸಕ ಭರತ್ ಶೆಟ್ಟಿ ಮಾತು ಅವರ ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ತೋರಿಸುತ್ತದೆ. ಶಾಸಕ ಭರತ್ ಶೆಟ್ಟಿಗೆ ಮಾನಸಿಕ ಸ್ಥಿಮಿತ ಇದ್ದಂತೆ ಇಲ್ಲ. ಇದಕ್ಕೆ ಅವರು ಸೂಕ್ತ ವೈದ್ಯಕೀಯ ನೆರವು ಪಡೆದುಕೊ ಳ್ಳುವುದು ಉತ್ತಮ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಟೀಕಿಸಿದ್ದಾರೆ.