ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ: ಪೌರಾಯುಕ್ತ ರಾಯಪ್ಪ
ಉಡುಪಿ, ಜು.10: ಅಂಗವೈಕಲ್ಯತೆಯನ್ನು ದುರ್ಬಲತೆ ಎಂದು ಭಾವಿಸದೇ ಸರಕಾರದಿಂದ ದೊರಕುವ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು, ಪ್ರತಿಯೊಬ್ಬ ಫಲಾನುಭವಿಗಳು ತಮ್ಮ ಕೆಲಸಗಳಿಗಾಗಿ ಯಾರ ಮೇಲೂ ಅವಲಂಭಿತ ವಾಗದೇ ತಾವೇ ಕಾರ್ಯಗಳನ್ನು ನಿಭಾಯಿಸಲು ಶಕ್ತರಾಗಿ ಸಮಾಜಕ್ಕೆ ಮಾದರಿಯಾಗಬೇಕಿದೆ ಎಂದು ಉಡುಪಿ ನಗರಸಭೆ ಪೌರಾಯುಕ್ತ ರಾಯಪ್ಪ ಹೇಳಿದ್ದಾರೆ.
ಬುಧವಾರ ಉಡುಪಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಉಡುಪಿ ಹಾಗೂ ಕೃತಕ ಅಂಗಾಂಗ ತಯಾರಿಕ ಕಾರ್ಪೊರೇಷನ್ ಆಫ್ ಇಂಡಿಯಾ (ಅಲಿಂಕೋ) ಇವರ ಸಂಯುಕ್ತ ಆಶ್ರಯದಲ್ಲಿ ಭಾರತ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದ ಎಡಿಐಪಿ ಮತ್ತು ಆರ್ವಿವೈ ಯೋಜನೆಯಡಿಯಲ್ಲಿ ವಿಕಲಚೇತನ ವ್ಯಕ್ತಿಗಳಿಗೆ ಮತ್ತು ಹಿರಿಯ ನಾಗರಿಕರಿಗೆ ಸಾಧನ ಸಲಕರಣೆಗಳ ವಿತರಣೆಗಾಗಿ ನಡೆದ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಭಾರತ ಸರಕಾರ ವಿಕಲಚೇತನ ವ್ಯಕ್ತಿಗಳಿಗೆ ಹಾಗೂ ಹಿರಿಯ ನಾಗರಿಕರಿಗೆ ಅವಶ್ಯವಿರುವ ಕೃತಕ ಸಲಕರಣೆಗಳನ್ನು ತಯಾರಿಸಿ ನೀಡುವ ಉದ್ದೇಶದಿಂದ ಜಿಲ್ಲೆಯ ವಿವಿದೆಡೆ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದ್ದು, ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸೌಲಭ್ಯ ವನ್ನು ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ, ವಿಶೇಷ ಚೇತನರಿಗೆ ಹಾಗೂ ವಿಕಲಚೇತನರಿಗೆ ಅನುಕಂಪದ ಅವಶ್ಯಕತೆ ಇರುವುದಿಲ್ಲ. ಅದರ ಬದಲು ಅವರಿಗೆ ಉತ್ತಮ ಜೀವನ ನಡೆಸಲು ಬೇಕಾಗಿರುವ ಸೌಲಭ್ಯವನ್ನು ಕಲ್ಪಿಸುವ ಜವಾಬ್ದಾರಿ ಸಮಾಜದ ಮೇಲಿದ್ದು, ಸೌಲಭ್ಯಗಳ ಕುರಿತ ಮಾಹಿತಿಗಳು ಪ್ರತಿಯೊಬ್ಬ ಫಲಾನುಭವಿಗೂ ತಲುಪುವಂತಾಗಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಾತ್ವಿಕ್, ಅಲಿಂಕೋದ ಜಿಗಿಶಾ, ಕೆಎಂಸಿಯ ವೈದ್ಯಾಧಿಕಾರಿ ಡಾ.ಪಾರ್ಥ್, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ರೆಡ್ಕ್ರಾಸ್ ಸಂಸ್ಥೆಯ ಸಿಬ್ಬಂದಿಗಳು ಈ ಸಂದರ್ಭ ದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರೆಡ್ಕ್ರಾಸ್ನ ಸದಸ್ಯ ಕಾರ್ಯದರ್ಶಿ ಡಾ.ಗಣನಾಥ ಶೆಟ್ಟಿ ಎಕ್ಕಾರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರೆ, ಎಂ. ಮಧುಸೂದನ್ ವಂದಿಸಿದರು.