ಕೇಂದ್ರದ್ದು ತಾರತಮ್ಯ ಬಜೆಟ್, ರಾಜ್ಯದ ಪಾಲಿಗೆ ನಿರಾಸೆ: ಲಕ್ಷ್ಮೀ ಹೆಬ್ಬಾಳ್ಕರ್
ಬಜೆಟ್ಗೆ ಗಣ್ಯರ ಪ್ರತಿಕ್ರಿಯೆಗಳು

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (PTI)
ಉಡುಪಿ : ಕರ್ನಾಟಕದ ರಾಜ್ಯಸಭಾ ಸದಸ್ಯೆಯೂ ಆದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ರಾಜ್ಯದ ನಿರೀಕ್ಷೆಯನ್ನು ಹುಸಿಗೊಳಿಸಿದ್ದು, ಇದೊಂದು ತಾರತಮ್ಯ ಬಜೆಟ್ ಆಗಿದೆ. ಕೇಂದ್ರ ಬಜೆಟ್ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎನ್ನುವಂತೆ ಬಜೆಟ್ನಲ್ಲಿ ಕೆಲ ಅಂಶಗಳು ಬಿಂಬಿತವಾಗಿವೆ.
ಎನ್ಡಿಎ ಸರಕಾರದ ಭಾಗವಾಗಿರುವ ಆಂಧ್ರ ಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ಭರಪೂರ ಯೋಜನೆಗಳನ್ನು ಘೋಷಿಸಲಾಗಿದೆ. ಆದರೆ, ಕರ್ನಾಟಕ ಸೇರಿದಂತೆ ಕಾಂಗ್ರೆಸ್ ಸರ್ಕಾರವಿರುವ ರಾಜ್ಯಗಳ ನಿರೀಕ್ಷೆ ಹುಸಿಯಾಗಿದೆ. ಕರ್ನಾಟಕದ ಬಾಕಿ ಇರುವ ಯೋಜನೆಗಳಿಗೂ ಅನುದಾನ ನೀಡಿಲ್ಲ. ಕಳೆದ ೧೦ ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಆಡಳಿತ ನಡೆಸುತ್ತಿದೆ. ಆದರೂ, ಮತ್ತೆ ಮತ್ತೆ, ನಿರುದ್ಯೋಗ ಸಮಸ್ಯೆ ನಿವಾರಿಸುವ ಘೋಷಣೆಗಳು ಮರುಕಳಿಸುತ್ತಲೇ ಇವೆ.
ಉನ್ನತ ಶಿಕ್ಷಣಕ್ಕೆ ಸರಕಾರದಿಂದ 10 ಲಕ್ಷದವರೆಗೆ ಸಾಲ ಸೌಲಭ್ಯ ಘೋಷಿಸ ಲಾಗಿದೆ. ಆದರೆ, ಇಲ್ಲಿ ಬರೀ ಸಾಲದ ಮೊತ್ತ ಹೆಚ್ಚಳ ಮಾಡಲಾಗಿದೆ ಅಷ್ಟೇ. ರೈತರಿಗೆ ಘೋಷಿಸಲಾಗಿರುವ ಕಿಸಾನ್ ಕ್ರೆಡಿರ್ಟ್ ಕಾರ್ಡ್ ನಿಂದ ಯಾವುದೇ ಉಪಯೋಗ ವಿಲ್ಲ ಎಂದು ಸಚಿವರೇ ಹೇಳಿದ್ದಾರೆ. ಪ್ರಮುಖವಾಗಿ ಕೇಂದ್ರ ಬಜೆಟ್ನಲ್ಲಿ ಲೋಕಸಭಾ ಚುನಾವಣೆ ವೇಳೆ ನಮ್ಮ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಚುನಾವಣಾ ಪ್ರಣಾಳಿಕೆಯ ಅಂಶಗಳೇ ಹೆಚ್ಚಿವೆ. ನಮ್ಮ ಪ್ರಣಾಳಿಕೆಯನ್ನು ಅಂಶಗಳನ್ನು ಕೇಂದ್ರದ ಎನ್ಡಿಎ ಸರ್ಕಾರ ಕಳವು ಮಾಡಿದೆ. ನಿರುದ್ಯೋಗ, ಬೆಲೆ ಏರಿಕೆ, ಹಣದುಬ್ಬರದಂತಹ ತುರ್ತು ಸಮಸ್ಯೆಗಳಿಗೆ ಸ್ಪಂದನೆ ಇಲ್ಲ. -ಲಕ್ಷ್ಮೀ ಹೆಬ್ಬಾಳ್ಕರ್, ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ.
ವಿಕಸಿತ ಭಾರತ ನಿರ್ಮಾಣಕ್ಕೆ ಶಕ್ತಿ ತುಂಬಿದ ಬಜೆಟ್
"ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಿರ್ಮಲ ಸೀತಾರಾಮನ್ ಮಂಡಿಸಿರುವ ಕೇಂದ್ರ ಬಜೆಟ್ ದೇಶದ ಆರ್ಥಿಕ ವ್ಯವಸ್ಥೆಗೆ ಹೊಸಚೈತನ್ಯ ತುಂಬುವ ಮೂಲಕ ವಿಕಸಿತ ಭಾರತ ನಿರ್ಮಾಣಕ್ಕೆ ಶಕ್ತಿ ತುಂಬಿದೆ. ಮಹಿಳಾ ಸಬಲೀಕರಣಕ್ಕೆ 3 ಲಕ್ಷ ಕೋಟಿ ಅನುದಾನ ಮೀಸಲಿರಿಸಿದ್ದು, ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಸಹಕಾರ ಕ್ಷೇತ್ರವನ್ನು ಸಧೃಡಗೊಳಿಸುವ ನಿಟ್ಟಿನಲ್ಲಿ ರಾಷ್ಟೀಯ ಸಹಕಾರ ನೀತಿಯನ್ನು ಜಾರಿಗೊಳಿಸಲು ಮುಂದಾಗಿದೆ.
ಆದಾಯ ತೆರಿಗೆ ಮಿತಿ ಹೆಚ್ಚಳ, ಕೃಷಿ ಅಭಿವೃದ್ದಿಗೆ ಪೂರಕ ಕಾರ್ಯಕ್ರಮ, ಗ್ರಾಮ ಸಡಕ್ ಯೋಜನೆಯಡಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿ, 12 ಹೊಸ ಇಂಡಸ್ಟ್ರಿಯಲ್ ಪಾರ್ಕ್ ನಿರ್ಮಾಣದ ಮೂಲಕ ಕೈಗಾರಿಕೆಗಳಿಗೆ ಪ್ರೋತ್ಸಾಹ, ಮುದ್ರಾ ಯೋಜನೆಯ ಸಾಲದ ಮಿತಿಯನ್ನು 20 ಲಕ್ಷಕ್ಕೆ ಏರಿಕೆ ಮಾಡುವ ಮೂಲಕ ದೇಶದ ಆರ್ಥಿಕತೆಯ ಸಮಗ್ರ ಪ್ರಗತಿಗೆ ಹೊಸ ಭಾಷ್ಯ ಬರೆಯಲಾಗಿದೆ. ಭಾರತ ಆರ್ಥಿಕತೆಯಲ್ಲಿ ವಿಶ್ವದ ಪ್ರಬಲ ಆರ್ಥಿಕ ವ್ಯವಸ್ಥೆಗೆ ಮುಂದಡಿಯಿಡುವ ಸಂಕಲ್ಪಕ್ಕೆ ಈ ಬಾರಿಯ ಬಜೆಟ್ ಪೂರಕವಾಗಲಿದೆ". - ಯಶ್ಪಾಲ್ ಎ.ಸುವರ್ಣ, ಉಡುಪಿ ಶಾಸಕ.
ಅನ್ನದಾತ, ಮಹಿಳೆ, ಯುವಶಕ್ತಿಗೆ ಆದ್ಯತೆ
ವಿಕಸಿತ ಭಾರತದ ಸಂಕಲ್ಪದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ತನ್ನ ಮೂರನೇ ಅವಧಿಯ ಮೊದಲ ಬಜೆಟ್ ಮಂಡಿಸಿದೆ. ಅನ್ನದಾತರು, ಮಹಿಳೆಯರು, ಯುವಶಕ್ತಿ ಮತ್ತು ಮಕ್ಕಳನ್ನು ಆದ್ಯತೆಯಾಗಿರಿಸಿ ಕೊಂಡು ಮಂಡನೆಯಾದ ಈ ಬಾರಿಯ ಬಜೆಟ್ ಸರ್ವವ್ಯಾಪಿ ಸರ್ವಸ್ಪರ್ಶಿಯಾಗಿದೆ. ಹೆದ್ದಾರಿ, ಮೀನುಗಾರಿಕೆ, ಪ್ರವಾಸೋ ದ್ಯಮ ಸೇರಿದಂತೆ ಎಲ್ಲಾ ವಲಯಗಳಿಗೂ ಆದ್ಯತೆ ನೀಡಿ ಬಜೆಟ್ ಮಂಡಿಸಲಾಗಿದೆ. -ಗುರ್ಮೆ ಸುರೇಶ್ ಶೆಟ್ಟಿ, ಕಾಪು ಶಾಸಕ.
ಸರ್ವ ಸ್ಪರ್ಶಿ, ದೂರದೃಷ್ಟಿಯ ಅಭಿವೃದ್ಧಿ ಪರ ಬಜೆಟ್
ದೇಶದ ಅರ್ಥ ಮಂತ್ರಿಗಳು ಇಂದು ಮಂಡಿಸಿದ 2024-25ನೇ ಸಾಲಿನ ಬಜೆಟ್ ದೇಶವನ್ನು 2047ನೇ ಇಸವಿಗೆ ಅಭಿವೃದ್ಧಿ ಹೊಂದಿದ ದೇಶ ಮಾಡುವಲ್ಲಿ ಇಟ್ಟಂತಹ ಒಂದು ರಸ್ತೆ ನಕ್ಷೆ ಎಂದು ಹೇಳಬಹುದು. ದೇಶದ ಆದ್ಯತೆಗಳನ್ನು ೯ ಕ್ಷೇತ್ರಗಳಾಗಿ ವಿಂಗಡಿಸಿ ಅದರಲ್ಲಿ ಸಂಶೋಧನೆ, ವಿಕಾಸ ಮಾಡಿ, ಉದ್ಯೋಗ ಸೃಷ್ಟಿಸಿ, ಉದ್ಯೋಗಿಗಳಿಗೂ ಬೇಕಾದ ತಂತ್ರಜ್ಞಾನ ಮತ್ತು ಪ್ರೋತ್ಸಾಹಧನ ಕೊಟ್ಟು ಸರ್ವಾಂಗೀಣ ಅಭಿವೃದ್ಧಿ ಮಾಡುವ ಬಜೆಟ್ ಇದಾಗಿದೆ.
ಮಧ್ಯಮ ವರ್ಗದವರಿಗೂ ಆದಾಯ ತೆರಿಗೆಯಲ್ಲಿ 18200ರೂ. ವಾರ್ಷಿಕ ಉಳಿತಾಯವಾಗುವಂತೆ ಮಾಡಿ ಕೃಷಿ, ಉದ್ಯಮ, ನಗರ, ಹಳ್ಳಿ, ಉದ್ಯೋಗ, ಕೌಶಲ್ಯ ಎಲ್ಲವನ್ನೂ ಒಳಗೊಂಡ ಸರ್ವ ಸ್ಪರ್ಶಿ ಬಜೆಟ್.
-ಕಿಶೋರ್ ಕುಮಾರ್ ಕುಂದಾಪುರ, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ.
ಮಿತ್ರ ಪಕ್ಷಗಳಿಗೆ ಬರಪೂರ ಕೊಡುಗೆ
ಲೋಕಸಭೆಯಲ್ಲಿ ಸಂಪೂರ್ಣ ಬಹುಮತ ಪಡೆಯಲು ವಿಫಲವಾದ ಬಿಜೆಪಿ, ಹಲವಾರು ವಸ್ತುಗಳ ತೆರಿಗೆಯಲ್ಲಿ ರಿಯಾಯಿತಿ ಯನ್ನು ಘೋಷಿಸಿ ಜನರನ್ನು ತೃಪ್ತಿಗೊಳಿಸುವ ಹೆಜ್ಜೆ ಇರಿಸಿದೆ. ಮಿತ್ರ ಪಕ್ಷಗಳು ಅಧಿಕಾರದಲ್ಲಿರುವ ಬಿಹಾರ ಹಾಗೂ ಆಂಧ್ರಪ್ರದೇಶಕ್ಕೆ ಬಹುಪೂರ ಕೊಡುಗೆಗಳನ್ನು ನೀಡಿ ಅವರನ್ನು ಸಂತೃಪ್ತಿಗೊಳಿಸುವ ಕೆಲಸ ಬಜೆಟ್ನಲ್ಲಿ ನಡೆದಿದೆ. ಕರ್ನಾಟಕಕ್ಕೆ ಮಲತಾಯಿ ಧೋರಣೆಯಿಂದಾಗಿ ಮೇಕೆದಾಟು ಹಾಗು ಮಹದಾಯಿ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಮಧ್ಯಮ ವರ್ಗಕ್ಕೆ ಯಾವುದೆ ಪೂರಕವಾದ ಯೋಜನೆಗಳಿಲ್ಲದೆ ನಿರಾಶೆಯನ್ನು ಹುಟ್ಟಿಸಿದೆ.
-ಅಶೋಕ ಕುಮಾರ್ ಕೊಡವೂರು, ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ
ಸಮಗ್ರ ಅಭಿವೃದ್ಧಿಗೆ ಪೂರಕ ಬಜೆಟ್
ಉದ್ಯೋಗ ಸೃಷ್ಟಿ ಹಾಗೂ ಸ್ವ ಉದ್ಯೋಗಕ್ಕೆ ಪೂರಕವಾಗಿದೆ. ಉನ್ನತ ಶಿಕ್ಷಣ ಮಾಡುವ ವಿದ್ಯಾರ್ಥಿಗಳಿಗೆ ೧೦ಲಕ್ಷ ರೂಪಾಯಿಗಳ ಬಡ್ಡಿ ರಹಿತ ಸಾಲ ಇದು ಒಳ್ಳೆಯ ಬೆಳವಣಿಗೆ. ಸ್ಟ್ಯಾಂಪ್ ಡ್ಯೂಟಿಯನ್ನು ಕಡಿಮೆ ಮಾಡಲು ರಾಜ್ಯಗಳಿಗೆ ಮನವಿ ಮಾಡಿದ್ದು ಉತ್ತಮ ಬೆಳವಣಿಗೆ. ಕೃಷಿಕರಿಗೆ ಸವಲತ್ತು ಪ್ರೋತ್ಸಾಹ ಹಾಗೂ ದೇಶದ ಮಹಿಳೆಯರು, ಯುವಕರರಿಗೆ ಪ್ರೋತ್ಸಾಹ ಇದೆ. ಒಟ್ಟಾರೆ ಹೇಳಬೇಕಾದರೆ ದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಬಜೆಟ್.
-ಯೋಗೀಶ್ ವಿ ಶೆಟ್ಟಿ, ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ.
ಅನುದಾನ ನೀಡುವಲ್ಲಿ ತಾರತಮ್ಯ
ಅಭಿವೃದ್ಧಿ ಯೋಜನೆಗಳಿಗೆ ಅನುದಾನ ನೀಡುವಲ್ಲಿ ತಾರತಮ್ಯ. ಹೆಚ್ಚಿನ ತೆರಿಗೆ ಕಟ್ಟಿದ ಕರ್ನಾಟಕಕ್ಕೆ ಯಾವುದೇ ಯೋಜನೆಗಳ ಘೋಷಣೆ ಇಲ್ಲ. ಬಿಹಾರ ಹಾಗೂ ಆಂಧ್ರಗಳಿಗೆ ವಿಶೇಷ ಅನುದಾನ ಬಿಡುಗಡೆಗೊಳಿಸಿ ಮಿತ್ರಕೂಟದ ಓಲೈಕೆಗೆ ಬಜೆಟನ್ನು ಸೀಮಿತಗೊಳಿಸಿದೆ. ಮಧ್ಯಮ ವರ್ಗಕ್ಕೆ ಯಾವುದೇ ಯೋಜನೆಗಳಿಲ್ಲದೆ ನಿರಾಶೆ ಮೂಡಿಸಿದೆ. ವಿವಿಧ ವಲಯಗಳಿಗೆ ಹಣ ಬಿಡುಗಡೆ ಮಾಡುವುದೇ ಬಜೆಟ್ ಘೋಷಣೆ ಎನ್ನುವಂತಾಗಿದೆ. ಕರ್ನಾಟಕ ಹೆಚ್ಚಿನ ಬಿಜೆಪಿ - ಜೆಡಿಎಸ್ ಸಂಸದರನ್ನು ಹೊಂದಿಯೂ ಅನುದಾನ ತರುವಲ್ಲಿ ಸಂಸದರು ವಿಫಲರಾಗಿದ್ದಾರೆ. -ಭಾಸ್ಕರ ರಾವ್ ಕಿದಿಯೂರು, ಕಾಂಗ್ರೆಸ್ ಪಕ್ಷದ ಜಿಲ್ಲಾ ವಕ್ತಾರ ಉಡುಪಿ.
ಕಾರ್ಯಗತಗೊಳ್ಳುವಲ್ಲಿ ಬಜೆಟ್ನ ಯಶಸ್ಸು
ಕೇಂದ್ರ ಸರಕಾರ ಇಂದು ಮಂಡಿಸಿದ ಬಜೆಟ್ ಚೆನ್ನಾಗಿದೆ. ಆದರೆ ಇದನ್ನು ಕಾರ್ಯಗತ ಮಾಡುವುದರ ಮೇಲೆ ಇದರ ಯಶಸ್ವಿ ನಿಂತಿದೆ ಅನ್ನುವುದು ಅಷ್ಟೇ ಸತ್ಯ. ಹಿಂದೆ ಸ್ಮಾರ್ಟ್ ಸಿಟಿ ಪ್ಲ್ಯಾನ್ ಬಂತು. ಅದು ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಅನ್ನುವುದು ಇಂದಿಗೂ ನಮ್ಮನ್ನು ಕಾಡುತ್ತಿರುವ ಮೊದಲ ಪ್ರಶ್ನೆ. ಈ ಬಜೆಟ್ನಲ್ಲಿ ಸಮ್ಮಿಶ್ರ ಸರಕಾರದ ಛಾಯೇ ಎದ್ದು ಕಾಣುವಂತಿದೆ. ನಮ್ಮಲ್ಲಿ 28 ರಾಜ್ಯಗಳಿವೆ 8 ಕೇಂದ್ರಾಡಳಿತ ಪ್ರದೇಶಗಳು ಇವೆ. ಆದರೆ ಬಜೆಟ್ ಉದ್ದಕ್ಕೂ ಧ್ವನಿಸಿದ ಮಾತು ಬಿಹಾರ ಮತ್ತು ಆಂದ್ರಪ್ರದೇಶ. ಇವುಗಳಿಗೆ ಈ ಬಜೆಟ್ ಹೆಚ್ಚಿನ ಅನುದಾನ ನೀಡಿದೆ.
ತೆರಿಗೆ ಸರಳೀಕೃತಗೊಳಿಸಿರುವುದು ಉತ್ತಮ ನಿರ್ಣಯ. ಉದ್ಯೋಗ ಸೃಷ್ಟಿ ಮಾಡಲು ಅನುಕೂಲಕರ ಬಜೆಟ್ ಎಂದು ವ್ಯಾಖ್ಯಾನಿಸಲಾಗಿದೆ. ಈ ಬಾರಿಯಾದರೂ ಕನಸು ನನಸಾಗ ಬಹುದಾ ಕಾದು ನೇೂಡಬೇಕು. ಒಂದಂತು ಸತ್ಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಉತ್ತಮ ಹೊಂದಾಣಿಕೆ ಸೃಷ್ಟಿಯಾದಾಗ ಮಾತ್ರ ಈ ಬಜೆಟ್ನ ಪ್ರತಿಫಲ ಜನರಿಗೆ ಸಮರ್ಪಕವಾಗಿ ತಲುಪಲು ಸಾಧ್ಯ. -ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ನಿವೃತ್ತ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಎಂಜಿಎಂ ಕಾಲೇಜು ಉಡುಪಿ.
‘ಕೇಂದ್ರ ಸರಕಾರದ ಮಂಡಿಸಿರುವ ಬಜೆಟ್ ಕುರ್ಚಿ ಬಚಾವೋ ಬಜೆಟ್. ಆಂಧ್ರಪ್ರದೇಶ ಹಾಗೂ ಬಿಹಾರಕ್ಕೆ ಕೋಟಿಗೂ ಮಿಕ್ಕಿದ ಬಂಪರ್ ಅನುದಾನ ಘೋಷಿಸಿ ಕುರ್ಚಿ ಬಚಾವೋ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ. ಹೇಳಿಕೊಳ್ಳುವಂತಹ ಯಾವುದೇ ಬದಲಾವಣೆ ಇಲ್ಲ. ಇವೆಲ್ಲವೂ ಸದ್ಯದ ಭವಿಷ್ಯದಲ್ಲಿ ಅನುಷ್ಠಾನಗೊಳ್ಳುವುದ ರಲ್ಲಿ ಸಂಶಯ ಇದೆ. -ಶಬ್ಬೀರ್ ಅಹ್ಮದ್, ಜಿಲ್ಲಾ ಉಪಾಧ್ಯಕ್ಷರು, ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ.
ಪ್ರತಿಗಾಮಿ ಸಂಕುಚಿತ ಬಜೆಟ್
ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದ ಒಕ್ಕೂಟದ ಬಜೆಟ್ ಒಂದು ಪ್ರತಿಗಾಮಿ ಸಂಕುಚಿತಕಾರಿ ಬಜೆಟ್. ಶ್ರೀಮಂತ ರನ್ನು ಇನ್ನಷ್ಟು ಶ್ರೀಮಂತ ಗೊಳಿಸಿ, ಬಡವರನ್ನು ಬಡವರನ್ನಾಗಿಸುವ ಗುರಿಯನ್ನು ಇದು ಹೊಂದಿದೆ. ಭಾರತದ ಅತಿ ಶ್ರೀಮಂತರ ಮೇಲೆ ಸಂಪತ್ತು ಅಥವಾ ಪ್ರಿತಾರ್ಜಿತ ತೆರಿಗೆಯ ಯಾವುದೇ ಪ್ರಸ್ತಾಪವನ್ನು ಪರಿಗಣಿಸಲು ನಿರಾಕರಿಸಿದ್ದಾರೆ.
-ಕವಿರಾಜ್ ಎಸ್.ಕಾಂಚನ್, ಸಿಪಿಐಎಂನ ಉಡುಪಿ ವಲಯ ಮುಖಂಡ.







