ಡಾ.ಬಿ.ವ್ಹಿ.ಶಿರೂರರಿಗೆ ಸೇಡಿಯಾಪು ಪ್ರಶಸ್ತಿ ಪ್ರದಾನ

ಉಡುಪಿ: ಕನ್ನಡ ಸಾಹಿತ್ಯದಲ್ಲಿ ಸಂಶೋಧನಾ ವ್ಯಾಕರಣ ಹಾಗೂ ಛಂದಸ್ಸಿನಂಥ ಶಾಸ್ತ್ರೀಯ ಪಾಂಡಿತ್ಯವುಳ್ಳ ಪಠ್ಯವನ್ನು ಕಡಿತಗೊಳಿಸುವ ಮೂಲಕ ವಿಶ್ವವಿದ್ಯಾನಿಲಯಗಳು ಕನ್ನಡ ಭಾಷಾ ಗಟ್ಟಿತನವನ್ನು ಹಾಳುಮಾಡುತ್ತಿರುವುದು ವಿಷಾಧ ನೀಯ ಎಂದು ಸಂಶೋಧಕ ಹಾಗೂ ಕನ್ನಡ ವಿದ್ವಾಂಸ ಹುಬ್ಬಳ್ಳಿಯ ಡಾ.ಬಿ.ವ್ಹಿ. ಶಿರೂರ ಹೇಳಿದ್ದಾರೆ.
ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಹಾಗೂ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್(ಮಾಹೆ) ಇವರ ಸಂಯುಕ್ತ ಆಶ್ರಯದಲ್ಲಿ ಹುಬ್ಬಳ್ಳಿಯ ಮಂಜುನಾಥ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸೇಡಿಯಾಪು ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡುತಿದ್ದರು.
ವರ್ತಮಾನದಲ್ಲಿ ಯುವಕರಿಗೆ ಗೋವಿಂದ ಪೈ ಮತ್ತು ಸೇಡಿಯಾಪು ಕೃಷ್ಣ ಭಟ್ಟರ ಶಾಸ್ತ್ರೀಯ ಪಾಂಡಿತ್ಯವನ್ನು ಪರಿಚಯಿ ಸುವ ಕೆಲಸ ನಡೆಯಬೇಕು ಎಂದು ಸಲಹೆ ನೀಡಿದರು.
ಹುಬ್ಬಳ್ಳಿ ಕಾಡಸಿದ್ಧೇಶ್ವರ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಉಮಾ ನೆರ್ಲೆ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಡಾ.ವೀರಣ್ಣ ರಾಜೂರ ಮಾತನಾಡಿ, ಡಾ.ಬಿ.ವ್ಹಿ.ಶಿರೂರ ಅವರು ದೊಡ್ಡ ವಿದ್ವಾಂಸರಾಗಿದ್ದರೂ ಎಲ್ಲಿಯೂ ತಮ್ಮನ್ನು ಗುರುತಿಸಿಕೊಂಡವರಲ್ಲ. ಕರಾವಳಿಯ ಮಂದಿ ಇಂಥ ಮಹಾನ್ ಸಂಶೋಧಕರನ್ನು ಗುರುತಿಸಿ ಸನ್ಮಾನಿಸಿರುವುದು ನಮ್ಮನ್ನೇ ನಾವು ಗೌರವಿಸಿಕೊಂಡಂತೆ ಎಂದರು.
ನಿವೃತ್ತ ಪ್ರಾಂಶುಪಾಲ ಹಾಗೂ ವಿದ್ವಾಂಸ ಡಾ.ಪಾದೇಕಲ್ಲು ವಿಷ್ಣು ಭಟ್ಟ ಪುರಸ್ಕೃತರನ್ನು ಪರಿಚಯಿಸಿದರು. ನಾಡಿನ ಸಾಕ್ಷಿಪ್ರಜ್ಞೆಯಂತಿರುವ, ಸಂಶೋಧನಾ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡಿದ ಡಾ.ಬಿ.ವ್ಹಿ.ಶಿರೂರ ಅವರಿಗೆ ಈ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ಸಂಗತಿ. ಶಾಸನ, ಗ್ರಂಥ ಸಂಪಾದನೆ, ಜೈನಸಾಹಿತ್ಯ, ವೀರಶೈವ ಸಾಹಿತ್ಯ, ವಚನ ಮುಂತಾದ ಕ್ಷೇತ್ರಗಳಲ್ಲಿ ಕೆಲಸ ಮಾಡಿ ಅವರು ಪ್ರಸಿದ್ಧರಾಗಿದ್ದಾರೆ ಎಂದರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಡಾ. ಸಣ್ಣವೀರಣ್ಣ ದೊಡ್ಡಮನಿ, ಡಾ. ಹನು ಮಾಕ್ಷಿ ಗೋಗಿ, ಡಾ. ಧನವಂತ ಹಾಜವಗೋಳ, ಸುರೇಶ್ ಹೊರಕೇರಿ, ಎಸ್.ಎಂ. ಪಾಟೀಲ್, ಮಂಜುನಾಥ, ಡಾ. ಜಯಶ್ರೀ ಹಿರೇಮಠ, ಡಾ.ಪ್ರಭಾತಿ, ಕೃತಿಕಾ ಶಿರೂರು, ಗೋವಿಂದ ಪೈ ಸಂಶೋಧನ ಕೇಂದ್ರದ ವೆಂಕಟೇಶ್ ನಾಯ್ಕ್, ವಿನೇಶ್ ಮುಂತಾದವರು ಉಪಸ್ಥಿತರಿದ್ದರು.







