ಪತ್ರಿಕೆಯೊಂದಿಗಿನ ಭಾವನಾತ್ಮಕ ಸಂಬಂಧದಲ್ಲಿ ಬದಲಾವಣೆ: ಓಂ ಗಣೇಶ್

ಕುಂದಾಪುರ: ತಂತ್ರಜ್ಞಾನದ ಬೆಳವಣಿಗೆಯ ಜೊತೆ ಪತ್ರಿಕೆ ಯೊಂದಿಗಿನ ಜನರ ಭಾವನಾತ್ಮಕವಾದ ಸಂಬಂಧಗಳು ಬದಲಾಗುತ್ತಿವೆ ಎಂದು ಸಾಮಾಜಿಕ ಚಿಂತಕ, ಜಾದುಗಾರ ಓಂ ಗಣೇಶ್ ಉಪ್ಪುಂದ ಹೇಳಿದ್ದಾರೆ.
ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಕುಂದಾಪುರ ಜೆಸಿ ಭವನದಲ್ಲಿ ಶನಿವಾರ ಆಯೋಜಿಸಲಾದ ಪತ್ರಿಕಾ ದಿನಾಚರಣೆಯನ್ನು ಟೈಪ್ ರೈಟರ್‌ನಲ್ಲಿ ಅಕ್ಷರದ ಪಡಿಯಚ್ಚು ಮೂಡಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಪತ್ರಗಳ ಬರವಣಿಗೆಗಳ ಮೂಲಕ ಆರಂಭವಾಗುವ ಪತ್ರಕರ್ತರ ದೈನಂದಿನ ಬದುಕು ಸಹನೆ, ಬದ್ದತೆ ಮತ್ತು ಜವಾಬ್ದಾ ರಿಯ ಮೂಲಕ ಸಾಗಬೇಕಾಗಿದೆ. ಸಂವಿಧಾನದ ನಾಲ್ಕನೇ ಅಂಗ ಎನ್ನುವ ವ್ಯಾಖ್ಯಾನಕ್ಕೆ ಒಳಗಾಗಿರುವ ಮಾಧ್ಯಮಗಳು ಸಮಾಜದ ಜನರ ಮನಸ್ಥಿತಿಯನ್ನು ತೆರೆದಿಡುವ ಪ್ರಾಮಾಣಿಕ ಕರ್ತವ್ಯವನ್ನು ನಿರ್ವಹಿಸುತ್ತದೆ. ಆದರೆ ಈ ವೃತ್ತಿಪರರಿಗೆ ಕನಿಷ್ಠ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ದೊರಕುವ ಸೌಲಭ್ಯಗಳಾದರೂ ದೊರಕುತ್ತಿದೆಯೇ ಎಂದು ಪ್ರಶ್ನಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ಅವರು ತಿಳಿಸಿದರು.
ಚಿಂತನೆಯ ಪ್ರಬುದ್ದತೆಗಳನ್ನೇ ಬಂಡವಾಳವಾಗಿಸಿಕೊಂಡಿರುವ ಮಾಧ್ಯಮ ಮಿತ್ರರು ಸ್ವಂತಕ್ಕೆ ಸತ್ತು ಜಗತ್ತಿಗೆ ಬದುಕು ಎನ್ನುವ ಸ್ವಯಂ ವಾತಾವರಣವನ್ನು ನಿರ್ಮಿಸಿಕೊಂಡಿದ್ದಾರೆ. ಮರ್ಯಾದೆ ಎನ್ನುವ ಅಂಜಿಕೆಯ ಕಾಲಘಟ್ಟದಲ್ಲಿ ಪತ್ರಕರ್ತರ ಲೇಖನಿಗೆ ಇದ್ದ ಪ್ರಭಾವ ಪ್ರಸ್ತುತ ಇಲ್ಲ ಎನ್ನುವುದೇ ನೋವಿನ ಸಂಗತಿ. ಬದಲಾವಣೆಯಾಗಿರುವ ಮಾಧ್ಯಮ ಜಗತ್ತು ಪ್ರಸರಣ ವಿಭಾಗದ ಅಡಿಯಲ್ಲಿ ಕಾರ್ಯನಿರ್ವಹಿಸುವ ಅನಿವಾರ್ಯತೆ ಸೃಷ್ಠಿಯಾಗಿರುವುದರಿಂದ, ಬದಲಾವಣೆಯ ಕಾಲಘಟ್ಟಕ್ಕೆ ಹೊಂದಿಕೊಂಡಿರುವ ಪತ್ರಕರ್ತರು ಸಂವೇದನಾ ಶೀಲರಾಗಿ ವೃತ್ತಿ ಬದ್ದತೆಯನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಹೆಚ್ಚಾಗಿದೆ ಎಂದರು.
ರೋಟರಿ ಜಿಲ್ಲಾ ಮಾಜಿ ಸಹಾಯಕ ಗವರ್ನರ್ ಕೆ.ಆರ್.ನಾಯ್ಕ್ ಮಾತ ನಾಡಿದರು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಶ್ರೀಪತಿ ಹೆಗಡೆ ಹಕ್ಲಾಡಿ ಅವರಿಗೆ ಪತ್ರಿಕಾ ದಿನದ ಗೌರವದೊಂದಿಗೆ ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ ವಹಿಸಿದ್ದರು. ಕುಂದಾಪುರ ಅಂಚೆ ಇಲಾಖೆಯ ಸಹಾಯಕ ಅಧೀಕ್ಷಕ ಸತೀಶ್ ಇಲಾಖೆಯ ಗ್ರಾಹಕ ಸ್ನೇಹಿ ಯೋಜನೆಗಳ ಕುರಿತು ಹಾಗೂ ವಿಮಾ ಯೋಜನೆಗಳ ಕುರಿತು ಮಾಹಿತಿ ನೀಡಿದರು. ತಾಲೂಕು ಸಂಘದ ಉಪಾಧ್ಯಕ್ಷ ಚಂದ್ರಮ ತಲ್ಲೂರು, ಕೋಶಾಧಿಕಾರಿ ಟಿ.ಲೋಕೇಶ್ ಆಚಾರ್ಯ ವೇದಿಕೆಯಲ್ಲಿದ್ದರು.
ಆಕಾಶ್ ನಿತ್ಯಾನಂದ ಗಾಣಿಗ ತೆಕ್ಕಟ್ಟೆ ಹಾಗೂ ಶ್ರೀದೇವಿ ಇನ್ಸಿಟಿಟ್ಯೂಟ್‌ನ ನಿಖಿಲ್ ಅವರನ್ನು ಗೌರವಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಐಶ್ವರ್ಯ ಬೀಜಾಡಿ ಸ್ವಾಗತಿಸಿದರು. ಪ್ರಶಾಂತ ಪಾದೆ ಸನ್ಮಾನ ಪತ್ರ ವಾಚಿಸಿದರು. ಕಾರ್ಯಕಾರಿ ಮಂಡಳಿಯ ಸದಸ್ಯ ಶ್ರೀಕಾಂತ ಹೆಮ್ಮಾಡಿ ನಿರೂಪಿಸಿದರು.







