ಉಡುಪಿ ಜಿಲ್ಲೆಯಲ್ಲಿ ಮಳೆಯೊಂದಿಗೆ ಮುಂದುವರಿದ ಗಾಳಿಯ ಪ್ರತಾಪ: ಮನೆ ಹಾನಿ, ಬೆಳೆ ಹಾನಿಯ ಪ್ರಕರಣದಲ್ಲಿ ಹೆಚ್ಚಳ

ಉಡುಪಿ, ಜು.26: ಕಳೆದ ಒಂದು ವಾರದಿಂದ ಮಳೆಯೊಂದಿಗೆ ಆಗಾಗ ಗಾಳಿಯೂ ತನ್ನ ಪ್ರತಾಪವನ್ನು ತೋರುತ್ತಿರು ವುದರಿಂದ ಮನೆ ಹಾನಿ, ತೋಟಗಾರಿಕಾ ಬೆಳೆ ಹಾನಿ ಹಾಗೂ ಜಾನುವಾರು ಕೊಟ್ಟಿಗೆ ಹಾನಿಯೂ ಸೇರಿದಂತೆ ವಿವಿಧ ಹಾನಿಗಳ ಪ್ರಕರಣದಲ್ಲಿ ಗಣನೀಯ ಹೆಚ್ಚಳ ಕಂಡುಬರುತ್ತಿದೆ.
ಒಂದೊಂದು ದಿನದಲ್ಲಿ ಒಂದೊಂದು ಕಡೆಯಲ್ಲಿ ಬಿರುಗಾಳಿ, ಸುಂಟರಗಾಳಿ ಹೆಚ್ಚಾಗಿ ಬೀಸುತ್ತಿದ್ದು, ಆ ಭಾಗದಲ್ಲಿ ಹೆಚ್ಚಿನ ಹಾನಿ ಕಂಡುಬರುತ್ತಿದೆ. ಶುಕ್ರವಾರ ಸಂಜೆಯ ಬಳಿಕ ಕುಂದಾಪುರ ಹಾಗೂ ಬ್ರಹ್ಮಾವರ ತಾಲೂಕುಗಳು ವೇಗದ ಗಾಳಿ ಬೀಸಿ ಸಾಕಷ್ಟು ಪ್ರಮಾಣದಲ್ಲಿ ನಷ್ಟ ಉಂಟು ಮಾಡಿದೆ. ಇದಕ್ಕೆ ಮೊದಲು ಬೈಂದೂರು, ಕುಂದಾಪುರ, ಕಾರ್ಕಳ ಭಾಗದಲ್ಲಿ ಗಾಳಿಗೆ ಹೆಚ್ಚಿನ ನಷ್ಟ ಕಂಡುಬಂದಿತ್ತು.
ಇಂದು ಅಪರಾಹ್ನದವರೆಗೆ ಜಿಲ್ಲಾಧಿಕಾರಿ ಕಚೇರಿಯ ವಿಕೋಪ ನಿರ್ವಹಣಾ ಘಟಕದಲ್ಲಿ 70ಕ್ಕೂ ಅಧಿಕ ಮನೆಹಾನಿ ಪ್ರಕರಣ ಹಾಗೂ 20ಕ್ಕೂ ಅಧಿಕ ತೋಟಗಾರಿಕಾ ಬೆಳೆ, ಕೃಷಿ ಬೆಳೆ ಹಾಗೂ ಕೊಟ್ಟಿಗೆ ಹಾನಿಯ ಪ್ರಕರಣಗಳು ದಾಖಲಾಗಿವೆ.
ಶನಿವಾರ ಎಲ್ಲಾ ಪ್ರಕರಣಗಳಿಂದ ಒಟ್ಟಾರೆಯಾಗಿ 22 ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ. ಮನೆಗಳಿಗಾದ ಹಾನಿಗಳಿಂದಲೇ 17 ಲಕ್ಷ ರೂ.ಗಳಿಗೂ ಅಧಿಕ ನಷ್ಟವಾಗಿದ್ದರೆ, ಕುಂದಾಪುರದಲ್ಲಿ 9 ಬೆಳೆ ಹಾನಿ ಪ್ರಕರಣ ಗಳಿಂದ ಮೂರೂವರೆ ಲಕ್ಷ ರೂ. ಹಾಗೂ ಕುಂದಾಪುರ ಮತ್ತು ಬ್ರಹ್ಮಾವರದಲ್ಲಿ ಒಟ್ಟು 12 ಕೊಟ್ಟಿಗೆಗಳಿಗಾದ ಭಾಗಶ: ಹಾನಿಯಿಂದ ಒಂದೂವರೆ ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.
ಇಂದು ಬ್ರಹ್ಮಾವರ ತಾಲೂಕಿನಲ್ಲಿ 29 ಮನೆ ಹಾನಿಯ ಪ್ರಕರಣದಲ್ಲಿ ಸುಮಾರು ಆರೂವರೆ ಲಕ್ಷರೂ. ಹಾಗೂ ಕುಂದಾಪುರ ದಲ್ಲಿ 23 ಪ್ರಕರಣಗಳಿಂದ ಐದೂವರೆ ಲಕ್ಷ ರೂ.ನಷ್ಟದ ಅಂದಾಜು ಮಾಡಲಾಗಿದೆ. ಇನ್ನುಳಿದಂತೆ ಉಡುಪಿಯಲ್ಲಿ ಎಂಟು ಪ್ರಕರಣ ಒಂದೂವರೆ ಲಕ್ಷ ಹಾಗೂ ಕಾಪುವಿನಲ್ಲಿ ಏಳು ಪ್ರಕರಣಗಳಿಂದ ಸುಮಾರು ನಾಲ್ಕು ಲಕ್ಷ ರೂ.ಗಳಿಗೂ ಅಧಿಕ ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.
ಕಾಪು ತಾಲೂಕು ಶಿರ್ವದ ಪದ್ಮ ಮೂಲ್ಯಾಡಿ ಅವರ ಮನೆ ಮೇಲೆ ಮರ ಬಿದ್ದು ಎರಡು ಲಕ್ಷರೂ.ನಷ್ಟವಾದರೆ, ಬ್ರಹ್ಮಾವರ ತಾಲೂಕು ಹೇರೂರಿನ ಕೃಷ್ಣ ಪೂಜಾರಿ ಮನೆ ಮೇಲೆ ಮರ ಬಿದ್ದು 70ಸಾವಿರ ರೂ., ಕಾವಡಿಯ ವಾಸುದೇವ ಆಚಾರಿ, ಕುಂದಾಪುರ ಮೊಳಹಳ್ಳಿಯ ಗುಲಾಬಿ, ಕೋಣಿಯ ಬಾಬು, ಸೇನಾಪುರದ ಪಣಿಯ ಆಚಾರ್ತಿ, ಕೆಂಚನೂರಿನ ಲಕ್ಷ್ಮೀ ಮನೆಗಳಿಗೆ ತಲಾ 50 ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ.
ಕುಂದಾಪುರ ತಾಲೂಕು ಅಜ್ರಿಯ ಕೆ.ಸುಬ್ಬಣ್ಣ ಶೆಟ್ಟಿ ಅವರ ತೋಟಗಾರಿಕಾ ಬೆಳೆಗೆ 80 ಸಾವಿರ, ಸಿದ್ಧಾಪುರದ ತೇಜಪ್ಪ ಶೆಟ್ಟಿ ಅವರ ಬೆಳೆಗೆ 60ಸಾವಿರ, ಇಡೂರು ಕುಂಜ್ಞಾಡಿಯ ಸದಾಶಿವ ಶೆಟ್ಟಿ ಅವರ ಬೆಳೆಗೆ 40ಸಾವಿರದಷ್ಟು ನಷ್ಟದ ಅಂದಾಜು ಮಾಡಲಾಗಿದೆ.
61.3ಮಿ.ಮೀ.ಮಳೆ: ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 61.3ಮಿಮೀ. ಮಳೆಯಾಗಿದೆ. ಹೆಬ್ರಿಯಲ್ಲಿ 87.2, ಕಾರ್ಕಳದಲ್ಲಿ 68.3, ಕುಂದಾಪುರದಲ್ಲಿ 68.0, ಬ್ರಹ್ಮಾವರ 49.6, ಬೈಂದೂರು 47.2, ಉಡುಪಿ 42.4 ಹಾಗೂ ಕಾಪುವಿನಲ್ಲಿ 41.1ಮಿ.ಮೀ.ಮಳೆಯಾಗಿದೆ.
ಜು28ರ ರವಿವಾರವೂ ಜಿಲ್ಲೆಯಲ್ಲಿ ವೇಗದ ಗಾಳಿಯೊಂದಿಗೆ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದುದರಿಂದ ನಾಳೆಯೂ ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಸಲಾಗಿದೆ.







