ಜಾತಿ ಪ್ರಮಾಣ ಪತ್ರ ನಿರಾಕರಣೆ| ಅಲೆಮಾರಿ ಜನಾಂಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಡಕು: ರವೀಂದ್ರ ಶೆಟ್ಟಿ

ಉಡುಪಿ: ರಾಜ್ಯದಲ್ಲಿ ಅತ್ಯಂತ ಶೋಚನೀಯ ರೀತಿಯಲ್ಲಿ ಜೀವನ ಸಾಗಿರುತ್ತಿರುವ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರು ವಸತಿ, ನಿವೇಶನ, ಮಕ್ಕಳ ಶಿಕ್ಷಣ ಸಹಿತ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳಿಂದ ವಂಚಿತರಾ ಗಿದ್ದು, ಜಾತಿ ಪ್ರಮಾಣ ಪತ್ರ ನಿರಾಕರಣೆಯಿಂದ ಜನಾಂಗದ ಮಕ್ಕಳ ಶೈಕ್ಷಣಿಕ ಜೀವನ ಅಡಕತ್ತರಿಯಲ್ಲಿ ಸಿಲುಕಿದಂತಾ ಗಿದೆ ಎಂದು ಕರ್ನಾಟಕ ರಾಜ್ಯ ಅಲೆವೂರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದ ಗೌರವಾಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಆರೋಪಿಸಿದ್ದಾರೆ.
ಉಡುಪಿಯ ಪ್ರವಾಸಿ ಮಂದಿರದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಜನಾಂಗದ ಮಕ್ಕಳು ಶೈಕ್ಷಣಿಕ ವ್ಯವಸ್ಥೆಯಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಒಂದು ಕಡೆ ರಾಜ್ಯದ ಕೆಲವು ತಾಲೂಕಿನ ತಹಶೀಲ್ದಾರರು ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದ ವರಿಗೆ ಜಾತಿ ಪ್ರಮಾಣ ಪತ್ರ ನೀಡಲು ನಿರಾಕರಿಸು ತ್ತಿದ್ದಾರೆ. ಇನ್ನೊಂದು ಕಡೆ ಈ ಜನಾಂಗದ ವಿದ್ಯಾರ್ಥಿಗಳ ಪ್ರವೇಶಾತಿ ಸಂದರ್ಭದಲ್ಲಿ ಜಾತಿ ಪ್ರಮಾಣ ಪತ್ರವನ್ನೇ ತರುವಂತೆ ಹೇಳಿ ಮೊರಾರ್ಜಿ ವಸತಿ ಶಾಲೆಯಲ್ಲಿ ದಾಖಲಾತಿ ಮಾಡುತ್ತಿಲ್ಲ ಎಂದು ದೂರಿದರು.
ರಾಜ್ಯದಲ್ಲಿರುವ ಎಲ್ಲಾ ಹಿಂದುಳಿದ ವರ್ಗಗಳ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಎಲ್ಲಾ ಅಲೆಮಾರಿ ಹಾಗೂ ಅರೆ ಅಲೆ ಮಾರಿ ಜನಾಂಗದವರಿಗೆ ನ್ಯಾಯ ದೊರಕಿಸುವ ಕೆಲಸವನ್ನು ಸರಕಾರ ಮಾಡಬೇಕಾಗಿದೆ. ಸಿಇಟಿ ಮತ್ತು ನೀಟ್ ಪರೀಕ್ಷೆ ಯಲ್ಲಿ ಎಸ್ಸಿ ಮತ್ತು ಎಸ್ಟಿ ಜನಾಂಗದ ವಿದ್ಯಾರ್ಥಿಗಳಿಗೆ ನೀಡುವ ಮಾನದಂಡವನ್ನು ಅಲೆಮಾರಿ ಓಬಿಸಿ, ಎಸ್.ಎಸಿ ಮತ್ತು ಎಸ್ಟಿ ವಿದ್ಯಾರ್ಥಿ ಗಳಿಗೂ ನೀಡಬೇಕು. ರಾಜ್ಯದ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ನಮ್ಮ ಪ್ರತಿಭಾನ್ವಿತ ಅಲೆಮಾರಿ ವಿದ್ಯಾರ್ಥಿ ಗಳಿಗೆ ಸರಕಾರವೇ ಶುಲ್ಕವನ್ನು ಭರಿಸಿ ಪ್ರವೇಶಾತಿಗೆ ಅನುವು ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದರು.
ಸರಕಾರಿ ಜಾಗದಲ್ಲಿ ಕಳೆದ 10 ವರ್ಷಗಳಿಗಿಂತ ಹೆಚ್ಚು ಕಾಲ ಡೇರೆ, ಗುಡಿಸಲು, ಟೆಂಟ್ ಹಾಕಿ ಜೀವನ ನಡೆಸುತ್ತಿರು ವವರಿಗೆ ಆ ಜಾಗವನ್ನು ಅವರ ಹೆಸರಿನಲ್ಲಿಯೇ ಪಹಣಿ ಪತ್ರ ನೀಡಬೇಕು. ಪ್ರತಿ ಜಿಲ್ಲೆ ತಾಲೂಕಿಗೆ ಸಂಬಂಧಿಸಿ ದಂತೆ ಅಲೆಮಾರಿ ಸಮುದಾಯ ಭವನ ನಿರ್ಮಿಸಬೇಕು. ಅಲೆಮಾರಿ ಜನರ ಅಂತಿಮ ಸಂಸ್ಕಾರಕ್ಕೆ ಅಲೆಮಾರಿ ರುದ್ರಭೂಮಿ ಯನ್ನು ನಿರ್ಮಿಸಿಕೊಡಬೇಕು. ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡುವುದರ ಮೂಲಕ ನೇರಸಾಲ, ಗಂಗಾ ಕಲ್ಯಾಣ, ಭೂಖರೀದಿ ಯೋಜನೆ, ಸ್ವಸಹಾಯ ಗುಂಪುಗಳಿಗೆ ಆರ್ಥಿಕ ನೆರವು ಉನ್ನತ ವ್ಯಾಸಂಗಕ್ಕೆ ಶೈಕ್ಷಣಿಕ ಸಾಲ ಯೋಜನೆ, ಸ್ವ ಉದ್ಯೋಗ, ಉದ್ಯಮಶೀಲತಾ ತರಬೇತಿ ಮುಂತಾದವುಗಳ ಬಗ್ಗೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಒಕ್ಕೂಟದ ರಾಜ್ಯಾಧ್ಯಕ್ಷ ಪ್ರಕಾಶ್ ಎಂ.ಬೆಂಗಳೂರು, ಉಪಾಧ್ಯಕ್ಷರುಗಳಾದ ಅನಂತ ಕೃಷ್ಣ ಯಾದವ್, ಶಿವರಾಮ ರಘು ಬಳೇಗಾರ್, ಎಚ್.ಇ.ತೋಟಪ್ಪ ಶಿವಮೊಗ್ಗ, ಯುವ ಘಟಕದ ರಾಜ್ಯಾಧ್ಯಕ್ಷ ವೈ.ಕುಮಾರ್ ಮೈಸೂರು, ಉಡುಪಿ ಜಿಲ್ಲಾಧ್ಯಕ್ಷ ಕೃಷ್ಣಯ್ಯ ಜೋಗಿ, ಮಹಿಳಾ ಘಟಕದ ಅಧ್ಯಕ್ಷೆ ಅನುಪಮಾ ಜೋಗಿ, ಯುವ ಘಟಕದ ಜಿಲ್ಲಾಧ್ಯಕ್ಷ ರಾಜೇಶ್, ಜಿಲ್ಲಾ ಪ್ರಧಾನ ಸಂಚಾಲಕ ಕೇಶವ ಕೋಟೇಶ್ವರ, ಗೌರವಾಧ್ಯಕ್ಷ ಪುಟ್ಟಣ್ಣ ಯಾದವ್ ಉಪಸ್ಥಿತರಿದ್ದರು.







