ಹೊಸ ಆವಿಷ್ಕಾರಗಳಿಗೆ ಶಿಕ್ಷಕರು ಸಜ್ಜಾಗುವುದು ಅಗತ್ಯ: ಉಡುಪಿ ಬಿಷಪ್ ಜೆರಾಲ್ಡ್ ಲೋಬೊ

ಉಡುಪಿ, ಸೆ.14: ಪ್ರಸಕ್ತ ಸನ್ನಿವೇಶಕ್ಕ ತಕ್ಕಂತೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾಗಿ ಶಿಕ್ಷಕರು ಬದಲಾಗಬೇಕಾಗಿದ್ದು ಶಿಕ್ಷರು ತಮ್ಮ ವೃತ್ತಿಯನ್ನು ಪ್ರೀತಿಸುವುದರೊಂದಿಗೆ ವೃತ್ತಿ ಬಗ್ಗೆ ಹೆಮ್ಮೆ ಹಾಗೂ ದೃಢವಾದ ಆತ್ಮ ವಿಶ್ವಾಸ ಹೊಂದಿರಬೇಕು ಎಂದು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.
ಉಡುಪಿ ಕನ್ನರ್ಪಾಡಿ ಸೈಂಟ್ ಮೇರಿಸ್ ಇಂಗ್ಲಿಷ್ ಮೀಡಿಯಂ ಶಾಲೆಯ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾದ ಕೆಥೊಲಿಕ್ ಎಜುಕೇಶನಲ್ ಸೊಸೈಟಿ ಆಫ್ ಉಡುಪಿ ಧರ್ಮಪ್ರಾಂತದ ದಶಮಾನೋತ್ಸವ ಮತ್ತು ಶಿಕ್ಷಕರ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಶಿಕ್ಷಣ ವ್ಯವಸ್ಥೆಯಲ್ಲಿ ಪ್ರತಿದಿನವೂ ಹೊಸ ಹೊಸ ಆವಿಷ್ಕಾರಗಳನ್ನು ಕಾಣುತ್ತಿದ್ದು ಅದಕ್ಕೆ ಪೂರವಾಗಿ ಶಿಕ್ಷಕರೂ ಕೂಡ ಸಿದ್ಧರಾಗಬೇಕಾದ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ತರಬೇತಿಗಳ ಮೂಲಕ ಶಿಕ್ಷಕರನ್ನು ಸಜ್ಜುಗೊಳಿಸುವ ಕೆಲಸ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಮಾತನಾಡಿ, ಶಿಕ್ಷಣವೆಂದರ ಕೇವಲ ಮಾಹಿತಿ ತುಂಬುವುದಲ್ಲ, ಜೀವನವನ್ನು ಸಾಮರಸ್ಯದಿಂದ ಕಂಡುಕೊಳ್ಳಬೇಕಾಗಿದೆ. ಶಿಕ್ಷಣದ ಬೇರುಗಳು ಕಹಿ ಇರಬಹುದು ಆದರೆ ಅದರ ಫಲ ಸಿಹಿಯಾಗಿ ರುತ್ತದೆ. ಶಿಕ್ಷಣದಿಂದ ಎಲ್ಲಾ ಜನರನ್ನು ಉತ್ತಮ ನಾಗರಿಕರನ್ನಾಗಿ ಮಾಡುವ ಕೆಲಸ ಮಾಡುವ ಮೂಲಕ ಮಾದರಿ ಶಿಕ್ಷಕರಾಗಿ ಬದಲಾಗಬೇಕು ಎಂದರು.
ಕೆಥೊಲಿಕ್ ಎಜುಕೇಶನಲ್ ಸೊಸೈಟಿಯ ನೂತನ ವೆಬ್ಸೈಟ್ ಉದ್ಘಾಟನೆ, ದಶಮಾನೋತ್ಸವ ಸ್ಮರಣ ಸಂಚಿಕೆ ಬಿಡುಗಡೆ, ನಿವೃತ್ತ ಶಿಕ್ಷಕ-ಶಿಕ್ಷಕೇತರ ಬಂಧುಗಳಿಗೆ, ಪಿಎಚ್ಡಿ ಹಾಗೂ ಪ್ರಶಸ್ತಿ ವಿಜೇತ ಶಿಕ್ಷಕರಿಗೆ, ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ, ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು, ಶೇ.100 ಫಲಿತಾಂಶ ಪಡೆದ ಸಂಸ್ಥೆಗಳನ್ನು, ಹಿಂದಿನ ಹಾಗೂ ಪ್ರಸ್ತುತ ಸೇಸು ಆಡಳಿತ ಮಂಡಳಿಯ ಸದಸ್ಯರಿಗೆ ಸನ್ಮಾನ ನೆರವೇರಿಸಲಾಯಿತು.
ನ್ಯಾಕ್ ಸಂಸ್ಥೆಯಿಂದ ಎ ಪ್ಲಸ್ ಗ್ರೇಡ್ ಪಡೆದ ಮಿಲಾಗ್ರಿಸ್ ಪದವಿ ಕಾಲೇಜಿಗೆ ಅಭಿನಂದನಾ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಪ್ರಾಥಮಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ನಿರ್ದೇಶಕ ಸಿಪ್ರಿಯಾನ್ ಮೊಂತೆರೊ, ಮಂಗಳೂರು ಕೆಥೊಲಿಕ್ ಶಿಕ್ಷಣ ಮಂಡಳಿ ಕಾರ್ಯದರ್ಶಿ ವಂ.ಡಾ.ಲಿಯೋ ಪ್ರವೀಣ್ ಲಸ್ರಾದೊ, ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಾರುತಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಣಪತಿ ಕೆ., ಕೆಥೊಲಿಕ್ ಶಿಕ್ಷಣ ಮಂಡಳಿ ಮಾಜಿ ಕಾರ್ಯದರ್ಶಿ ವಂ.ಆ್ಯಂಟನಿ ಶೆರಾ, ಶಾಲಾ ಪ್ರಾಂಶುಪಾಲ ವಂ.ವಿಜಯ್ ಡಿಸೋಜ ಉಪಸ್ಥಿತರಿದ್ದರು.
ಉಡುಪಿ ಕನ್ನರ್ಪಾಡಿ ಸೈಂಟ್ ಮೇರಿಸ್ ಇಂಗ್ಲಿಷ್ ಮೀಡಿಯಂ ಶಾಲೆಯ ಸಂಚಾಲಕ ವಂ.ಚಾರ್ಲ್ಸ್ ಮಿನೇಜಸ್ ಸ್ವಾಗತಿಸಿದರು. ಕಥೊಲಿಕ್ ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ವಂ.ವಿನ್ಸೆಂಟ್ ಕ್ರಾಸ್ತಾ ವಂದಿಸಿದರು. ಶಿಕ್ಷಕರಾದ ಶ್ರುತಿ, ಅಮೃತಾ ಶೆಟ್ಟಿ, ಗೀತಾ, ಸಿಬಿಲ್ ಸೋನ್ಸ್ ಕಾರ್ಯಕ್ರಮ ನಿರೂಪಿಸಿದರು.







