ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಕುಂದಾಪುರದ ಹಿರಿಯ ಪತ್ರಕರ್ತ ಯು.ಎಸ್.ಶೆಣೈ

ಯು.ಎಸ್.ಶೆಣೈ
ಉಡುಪಿ, ಸೆ.27: ರಾಜ್ಯ ಸರಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧೀನದಲ್ಲಿ ಬರುವ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಕುಂದಾಪುರದ ಕುಂದಪ್ರಭ ಪತ್ರಿಕೆ ಸಂಪಾದಕ ಯು.ಎಸ್. ಶೆಣೈ (ಯು.ಸುರೇಂದ್ರ ಶೆಣೈ) ಅವರನ್ನು ಆಯ್ಕೆ ಮಾಡಲಾಗಿದೆ.
ಕುಂದಾಪುರ ತಾಲೂಕಿನ ಗಂಗೊಳ್ಳಿಯ ಯು.ಎಸ್.ಶೆಣೈ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸುಮಾರು 40 ವರ್ಷಗಳ ಅನುಭವ ಹೊಂದಿದ್ದಾರೆ. 1980ರಲ್ಲಿ ನವಭಾರತ ಪತ್ರಿಕೆಯ ವರದಿಗಾರರಾಗಿ ಕ್ಷೇತ್ರಕ್ಕೆ ಕಾಲಿರಿಸಿದ ಇವರು ಆ ಬಳಿಕ ಮುಂಗಾರು, ಇಂಡಿಯನ್ ಎಕ್ಸ್ಪ್ರೆಸ್, ಹೊಸದಿಗಂತ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದರು.
1991ರಲ್ಲಿ ಕುಂದಾಪುರ ತಾಲೂಕಿನ ಪ್ರಥಮ ಸಾಪ್ತಾಹಿಕ ‘ಕುಂದಪ್ರಭ’ ವನ್ನು ಪ್ರಾರಂಭಿಸಿ ಈಗಲೂ ಅದರ ಸಂಪಾದಕ ರಾಗಿ ಕಾರ್ಯನಿರ್ವಹಿ ಸುತಿದ್ದಾರೆ. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಕುಂದಪ್ರಭ ಟ್ರಸ್ಟ್ ಹಾಗೂ ಜೈ ಕೊಂಕಣಿ ಸಂಸ್ಥೆಯ ಅಧ್ಯಕ್ಷರಾಗಿರುವ ಇವರು ಅಖಿಲ ಭಾರತ ಕೊಂಕಣಿ ಪರಿಷತ್ ಸಮ್ಮೇಳನ, ರಾಜ್ಯ ಮಟ್ಟದ ಕೊಂಕಣಿ ಸಮ್ಮೇಳನ, ಕುಂದ ಕರಾವಳಿ ಉತ್ಸವ, ಪಂಚಗಂಗಾವಳಿ ಉತ್ಸವ ಸಹಿತ ಹಲವು ಸಮ್ಮೇಳನಗಳ ಸಂಘಟಕರಾಗಿ ಯಶಸ್ವಿಗೊಳಿಸಿದ್ದರು.







