ಕಾರ್ಕಳ | ಎಸ್‌ವಿಟಿ ಮಹಿಳಾ ಪದವಿ ಕಾಲೇಜಿನ ಸಾಹಿತ್ಯ ಸಂಘ ಉದ್ಘಾಟನೆ
ಸಾಹಿತ್ಯದ ಓದಿನಿಂದ ವಿಕಸನದ ಸಿದ್ಧಿ : ರಾಜೇಂದ್ರ ಭಟ್ ಕೆ.

ಕಾರ್ಕಳ : ಸಾಹಿತ್ಯದ ಓದಿನಿಂದ ನಮ್ಮ ಭಾಷೆ ಶುದ್ಧವಾಗುವುದರಿಂದ ಸಂವಹನ ಸುಲಭವಾಗುತ್ತದೆ. ಅಕಾಡೆಮಿಕ್ ಕಲಿಕೆಯು ವೇಗ ಪಡೆಯುತ್ತದೆ. ಮೌಲ್ಯಗಳು ಅಂತರ್ಗತ ಆಗುತ್ತವೆ ಮತ್ತು ವ್ಯಕ್ತಿತ್ವದ ವಿಕಸನವೂ ಖಾತರಿ ಆಗುತ್ತದೆ. ಅದುದರಿಂದ ವಿದ್ಯಾರ್ಥಿಗಳು ತುಂಬಾ ಓದುವುದು ಮತ್ತು ಬರೆಯುವುದು ಅಗತ್ಯ ಎಂದು ವಿಕಸನದ ರಾಷ್ಟ್ರಮಟ್ಟದ ತರಬೇತುದಾರಾದ ರಾಜೇಂದ್ರ ಭಟ್ ಕೆ. ಅವರು ಅಭಿಪ್ರಾಯಪಟ್ಟರು.
ಕಾರ್ಕಳದ ಎಸ್‌ವಿಟಿ ಮಹಿಳಾ ಪದವಿ ಕಾಲೇಜಿನ ಸಾಹಿತ್ಯ ಸಂಘವನ್ನು ದೀಪ ಬೆಳಗಿಸುವ ಮೂಲಕ ರಾಜೇಂದ್ರ ಭಟ್ ಕೆ ಉದ್ಘಾಟನೆ ಮಾಡಿದರು. ಬಳಿಕ ಅವರು ವಿದ್ಯಾರ್ಥಿನಿಯರ ಜೊತೆಗೆ 'ಸಾಹಿತ್ಯದ ವಿವಿಧ ಆಯಾಮಗಳು' ಎಂಬ ವಿಷಯದ ಮೇಲೆ ಸಂವಾದ ಮಾಡಿದರು. ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಉಷಾ ನಾಯಕ್ ಅವರು ಅಧ್ಯಕ್ಷತೆ ವಹಿಸಿದ್ದರು.
ಸಾಹಿತ್ಯ ಸಂಘದ ನಿರ್ದೇಶಕಿ ವಿನುತ ಕಾಮತ್ ಅತಿಥಿಗಳನ್ನು ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. ವಿದ್ಯಾರ್ಥಿ ನಾಯಕ ಶ್ರೇಯಾ ಮತ್ತು ರಕ್ಷಾ ವೇದಿಕೆಯಲ್ಲಿದ್ದರು. ಮಂಜುಳಾ ಕಾರ್ಯಕ್ರಮ ನಿರೂಪಣೆ ಮಾಡಿದರು.





