ಕಟ್ಟಡ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ

ಉಡುಪಿ, ಅ.16: ಕರ್ನಾಟಕ ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ(ಸಿಐಟಿಯು) ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಂದು ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಯಿತು.
ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿದ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ನಿರಂತರವಾಗಿ ಕಟ್ಟಡ ಸಾಮಗ್ರಿಗಳು ಕಡಿಮೆ ದರದಲ್ಲಿ ಸಿಗುವಂತೆ ಕ್ರಮ ತೆಗೆದುಕೊಳ್ಳಬೇಕು. ಮರಳು ಸಮಸ್ಯೆಯನ್ನು ಶೀಘ್ರದಲ್ಲಿ ಪರಿಹರಿಸಿ, ಕಾರ್ಮಿಕ ರಿಗೆ ನಿರಂತರವಾಗಿ ಕೆಲಸ ಮಾಡಲು ಮರಳು, ಕೆಂಪು ಕಲ್ಲು, ಶಿಲೆಕಲ್ಲು ಇತರ ಸಾಮಗ್ರಿಗಳು ಸಿಗುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಅಂತಾರಾಜ್ಯ ವಲಸೆ ಕಾರ್ಮಿಕರ ಕಾಯಿದೆ 1979 ಉಳಿಸಿ ಹಾಗೂ ಬಲಪಡಿಸಬೇಕು. ಕಟ್ಟಡ ಕಾರ್ಮಿಕರ ಕೇಂದ್ರ ಸಲಹಾ ಮಂಡಳಿಯನ್ನು ಪುನರುಜ್ಜಿವನಗೊಳಿಸಬೇಕು. ಕಟ್ಟಡ ಕಾರ್ಮಿಕರ ಕಲ್ಯಾಣನಿಧಿಯನ್ನು ಬೇರೆ ಉದ್ದೇಶಗಳಿಗೆ ವಿನಿಯೋಗಿಸಬಾರದು. ನಿರಂತರ ಪಿಂಚಣಿ ಸೌಲಭ್ಯ ಕಲ್ಪಿಸಲು ಕೇಂದ್ರ ಸರಕಾರ ತನ್ನ ಆರ್ಥಿಕ ನೆರವು ನೀಡಬೇಕು ಎಂದರು.
ನೈಜ ಕಾರ್ಮಿಕರ ನೋಂದಣಿ ಮತ್ತು ಮರು ನೋಂದಣಿ ಅರ್ಜಿಗಳನ್ನು ಸಕಾರಣವಿಲ್ಲದೆ ತಿರಸ್ಕರಿಸುವುದು ನಿಲ್ಲಬೇಕು ಹಾಗೂ ವಿಳಂಬ ಮಾಡದೆ ಕಾರ್ಡ್ ವಿತರಣೆ ಮಾಡಬೇಕು. ಕಟ್ಟಡ ಕಾರ್ಮಿಕರಿಗೆ ಪಿ.ಎಫ್, ಸೌಲಭ್ಯ ಜಾರಿ ಮಾಡಬೇಕು. ಸೌಲಭ್ಯಗಳಿಗಾಗಿ ಸಲ್ಲಿಸಿರುವ ಸಾವಿರಾರು ಅರ್ಜಿಗಳನ್ನು ಶೀಘ್ರವೇ ವಿಲೇವಾರಿ ಮಾಡಬೇಕು. ಕಡಿಮೆ ದರದಲ್ಲಿ ಮರಳು ಪೂರೈಕೆ ಯಾಗಬೇಕು. ಅರ್ಹ ಬಿ.ಪಿ.ಎಲ್. ಕಾರ್ಡ್ ರದ್ದುಗೊಳಿಸುವುದನ್ನು ನಿಲ್ಲಿಸ ಬೇಕು ಎಂದು ಅವರು ಒತ್ತಾಯಿಸಿದರು.
ಜಿಲ್ಲಾ ಕಾರ್ಯದರ್ಶಿ ಶಶಿಧರ ಗೊಲ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ಈ ಕುರಿತ ಮನವಿಯನ್ನು ಅಪಾರ ಜಿಲ್ಲಾಧಿಕಾರಿ ಮಮತಾದೇವಿ ಮೂಲಕ ರಾಜ್ಯದ ಮುಖ್ಯಮಂತ್ರಿಯವರಿಗೆ ನೀಡಲಾಯಿತು.
ಜಿಲ್ಲಾ ಮುಖಂಡರಾದ ದಯನಂದ ಕೋಟ್ಯಾನ್, ಸರೋಜ, ಗಣೇಶ ನಾಯಕ್, ಸುಭಾಷ್ ನಾಯಕ್, ರಾಮ ಕಾರ್ಕಡ, ವಾಮನ ಪೂಜಾರಿ ಸೈಯದ್, ರಮೇಶ್, ಸಂಜೀವ ನಾಯಕ್, ಚಂದ್ರ ನಾಯಕ್, ಸಿಐಟಿಯು ಉಡುಪಿ ಜಿಲ್ಲಾ ಕಾರ್ಯ ದರ್ಶಿ ಕವಿರಾಜ್ ಎಸ್.ಕಾಂಚನ್, ಕರ್ನಾಟಕ ಪ್ರಾಂತ ಕೃಷಿಕೂಲಿಕಾರ ಸಂಘದ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ್ ಕೋಣಿ, ಉಡುಪಿ ಬೀಡಿ ಸಂಘದ ಅಧ್ಯಕ್ಷ ನಳಿನಿ ಎಸ್. ಉಪಸ್ಥಿತರಿದ್ದರು.
ಕಾರ್ಕಳ ತಾಲೂಕು ಸಂಘದಿಂದ ಮನವಿ ಸಲ್ಲಿಕೆ
ಕಾರ್ಕಳ ತಾಲೂಕು ಕಟ್ಟಡ ಕಾರ್ಮಿಕರ ಸಂಘ(ಸಿಐಟಿಯು) ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಾರ್ಕಳ ತಾಲೂಕು ಕಚೇರಿಯಲ್ಲಿ ಉಪ ತಾಹಸಿಲ್ದಾರ್ ಮಂಜುನಾಥ ನಾಯಕ್ ಮೂಲಕ ರಾಜ್ಯದ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.
ನಿಯೋಗದಲ್ಲಿ ಕಾರ್ಕಳ ಕಟ್ಟಡ ಸಂಘದ ಮುಖಂಡರಾದ ಶೇಖರ್ ಕುಲಾಲ್, ರತ್ನಕರ್ ಪೂಜಾರಿ, ಸತೀಶ್ ನಾಯಕ್, ಸುರೇಶ್ ಕುಮಾರ್, ಹರೀಶ್ ದೇವಾಡಿಗ, ಸುರೇಂದ್ರ ರಾವ್, ಶ್ರೀನಿವಾಸ್ ನಾಯಕ್, ಸುಧಾಕರ್ ಪೂಜಾರಿ, ಸತೀಶ್ ನಾಯಕ್, ಪ್ರಕಾಶ್ ಪಿ., ನಿತ್ಯಾನಂದ, ಹರೀಶ್, ರತ್ನಾಕರ ಮುಡಾರ್, ಪುಷ್ಪಪಿ. ಹಾಗೂ ಕಾರ್ಕಳ ತಾಲೂಕು ಬೀಡಿ ಕಾರ್ಮಿಕ ಸಂಘದ ಅಧ್ಯಕ್ಷೆ ಸುನೀತಾ ಶೆಟ್ಟಿ ಉಪಸ್ಥಿತರಿದ್ದರು.







