ಮಹಾಲಕ್ಷ್ಮೀ ಬ್ಯಾಂಕಿನಲ್ಲಿ ಕೋಟ್ಯಂತರ ರೂ. ವಂಚನೆ ಆರೋಪ: ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಸಂತ್ರಸ್ತರಿಂದ ಮನವಿ

ಉಡುಪಿ: ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಮಲ್ಪೆ ಶಾಖೆಯಲ್ಲಿ ನಕಲಿ ದಾಖಲೆ ಸೃಷ್ಠಿಸಿ ಬೇನಾಮಿ ಹೆಸರಿನಲ್ಲಿ ಕೋಟ್ಯಾಂತರ ಸಾಲ ಪಡೆದು ಸ್ವಂತಕ್ಕೆ ಬಳಕೆ ಮಾಡಿಕೊಂಡು ನಂಬಿಕೆ ದ್ರೋಹ ಮಾಡಿದ್ದು, ಅನ್ಯಾಯಕ್ಕೆ ಒಳಗಾದ ಗ್ರಾಹಕರಿಗೆ ನ್ಯಾಯ ಒದಗಿಸಿಕೊಡಲು ಬ್ಯಾಂಕಿನ ಆಡಳಿತ ಮಂಡಳಿಯನ್ನು ಬರ್ಖಾಸ್ತುಗೊಳಿಸಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಸಂತ್ರಸ್ತರು ಸೋಮವಾರ ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರಿಗೆ ಮನವಿ ಸಲ್ಲಿಸಿದರು.
ಬ್ಯಾಂಕಿನ ಮಲ್ಪೆ ಶಾಖೆಯಲ್ಲಿ 2014ರ ಜು.1ರಿಂದ 2023ರ ಮಾ.8ರವರೆಗೆ ಒಟ್ಟು 1413 ಮಂದಿ ಗ್ರಾಹಕರಿಗೆ 2ಲಕ್ಷ ರೂ.ನಂತೆ ಒಟ್ಟು 28.86ಕೋಟಿ ರೂ. ಸಾಲ ನೀಡಿರುವುದಾಗಿ ಹೇಳಿ, ಬೇರೆ ಬೇರೆ ಗ್ರಾಹಕರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಠಿಸಿ ಸ್ವಂತಕ್ಕೆ ಬಳಸಿಕೊಂಡು ನಂಬಿಕೆ ದ್ರೋಹ ಮಾಡಲಾಗಿದೆ. ಈ ಕುರಿತು ನೊಂದ ಗ್ರಾಹಕರು ಈಗಾಗಲೇ ಮಲ್ಪೆ, ಉಡುಪಿ ನಗರ ಹಾಗೂ ಬ್ರಹ್ಮಾವರ ಪೊಲೀಸ್ ಠಾಣೆಗಳಿಗೆ ದೂರು ನೀಡಿದ್ದು, ಅದರಂತೆ ಪ್ರಕರಣ ದಾಖಲಾಗಿದೆ.
ಸಾಲದ ವಿಚಾರವಾಗಿ ಗ್ರಾಹಕರ ಮನೆಗೆ ಬಂದು ಸಾಲ ವಸೂಲಾತಿಗೆ ತೊಂದರೆ ನೀಡುತ್ತಿದ್ದು, ಪಡೆಯದ ಸಾಲಕ್ಕಾಗಿ ಮಕ್ಕಳ ವಿದ್ಯಾಭ್ಯಾಸ, ವ್ಯವಹಾರಕ್ಕೆ ಸಿಬಿಲ್‌ನಿಂದ ತೊಂದರೆ ಆಗುತ್ತಿದೆ. ಕೋಟ್ಯಂತರ ರೂ. ಅವ್ಯವಹಾರ ಆಗಿರುವುದು ಬ್ಯಾಂಕ್ ಅಧ್ಯಕ್ಷರಿಗೆ, ಆಡಳಿತ ಮಂಡಳಿಯ ಸದಸ್ಯರಿಗೆ ಗೊತ್ತಿದ್ದರೂ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಅಂದಿನ ಬ್ಯಾಂಕ್ ಮೆನೇಜರ್ ಮೇಲೆ ಹೊರಿಸುವ ಹುನ್ನಾರ ಮಾಡಲಾಗಿದೆ ಎಂದು ಸಂತ್ರಸ್ತರು ಮನವಿಯಲ್ಲಿ ದೂರಿದ್ದಾರೆ.
ಆದುದರಿಂದ ಈ ಪ್ರಕರಣವನ್ನು ಕೂಲಂಕಷವಾಗಿ ಉನ್ನತ ತನಿಖಾ ಸಂಸ್ಥೆಯಿಂದ ತನಿಖೆಗೆ ಒಳಪಡಿಸಬೇಕು. ಅಲ್ಲಿಯ ವರೆಗೆ ಸಾಲ ವಸೂಲಾತಿ ಮಾಡದಂತೆ ಬ್ಯಾಂಕಿಗೆ ನಿರ್ದೇಶನ ನೀಡಬೇಕು. ಇದರಲ್ಲಿ ಭಾಗಿಯಾಗಿರುವ ಬ್ಯಾಂಕಿನ ಅಧ್ಯಕ್ಷರು, ಆಡಳಿತ ಮಂಡಳಿಯವರ ವಿರುದ್ಧ ಪ್ರಕರಣ ದಾಖಲಿಸ ಬೇಕು. ಆಡಳಿತ ಮಂಡಳಿಯನ್ನು ಬರ್ಖಾಸ್ತುಗೊಳಿಸಿ ಪಾರದರ್ಶಕ ತನಿಖೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಉಡುಪಿ ನಗರಸಭೆ ವಿಪಕ್ಷ ನಾಯಕ ರಮೇಶ್ ಕಾಂಚನ್, ಹೋರಾಟಗಾರ ನಾಗೇಂದ್ರ ಪುತ್ರನ್ ಕೋಟ, ಸಂತ್ರಸ್ತರಾದ ಅಫ್ರೀನ್ ಅಂಬಾಗಿಲು, ಪ್ರವೀಣ್ ಮಲ್ಪೆ, ರಮೇಶ್ ಮಲ್ಪೆ, ಶಿವರಾಜ್ ಹೂಡೆ, ನಿತೀನ್, ವಿಶು ಲಕ್ಷೀನಗರ, ಸುಕೇಶ್ ಲಕ್ಷ್ಮೀನಗರ ಮೊದಲಾದವರು ಉಪಸ್ಥಿತರಿದ್ದರು.







