ಜಾನಪದ ಹಳ್ಳಿ ಬದುಕಿನ ಪ್ರತಿಬಿಂಬ: ಡಾ.ವಿಜಯ ಬಲ್ಲಾಳ್
ಉಡುಪಿಯಲ್ಲಿ ಜಾನಪದ ಹಬ್ಬ ಸಮಾರೋಪ: ಪ್ರಶಸ್ತಿ ಪ್ರದಾನ

ಉಡುಪಿ, ಅ.28: ನಮ್ಮ ನಾಡಿನ ಜಾನಪದ ಕಲೆಗಳು ಹಳ್ಳಿಯ ಬದುಕನ್ನು ಬಿಂಬಿಸುವ ಪ್ರತಿಬಿಂಬಗಳಾಗಿವೆ ಎಂದು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಹೇಳಿದ್ದಾರೆ.
ಉಡುಪಿ ಪರ್ಯಾಯ ಪುತ್ತಿಗೆ ಮಠ ಹಾಗೂ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಉಡುಪಿ ಜಿಲ್ಲಾ ಘಟಕ, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಉಡುಪಿ ಹಾಗೂ ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ರವಿವಾರ ಹಮ್ಮಿಕೊಂಡ ’ಜಾನಪದ ಹಬ್ಬ’ದ ಸಮಾರೋಪದಲ್ಲಿ ಅವರು ಮಾತನಾಡುತಿದ್ದರು.
ಕೃಷಿಕರು ತಮ್ಮ ಕೃಷಿ ಬದುಕಿನ ಆಯಾಸದ ಮಧ್ಯೆ ಮನೋರಂಜನೆಗಾಗಿ ಹಾಡು, ನೃತ್ಯಗಳನ್ನು ಕಟ್ಟಿಕೊಂಡರು. ಇದು ನಮ್ಮ ಗ್ರಾಮೀಣ ಭಾರತದ ಸಂಪತ್ತಾಗಿದೆ. ಜಾನಪದ ಕಲೆ, ಸಂಗೀತಕ್ಕೆ ಅದರದ್ದೇ ಆದ ಶಕ್ತಿಯಿದೆ. ಅದನ್ನು ಕಂಡಾಗ ರೋಮಾಂಚನವಾಗುತ್ತದೆ. ಇಂತಹ ಕಲೆಗಳನ್ನು ಉಳಿಸಿ ಬೆಳೆಸುವುದು ಅಗತ್ಯ ಎಂದು ಅಭಿಪ್ರಾಯ ಪಟ್ಟರು.
ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ ಜನಪದ ಕಲೆಗಳನ್ನು ಉಳಿಸಿ ಬೆಳೆಸುವ ಇಂತಹ ಕಾರ್ಯ ಕ್ರಮಗಳು ನಿತ್ಯ ನಿರಂತರವಾಗಿರಲಿ ಎಂದು ಹಾರೈಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ದೈವಾರಾ ಧನೆ, ನಾಗಾರಾಧನೆ ಸೇರಿದಂತೆ ಹಲವಾರು ಜಾನಪದ ಪ್ರಕಾರಗಳಿದ್ದು, ನಿರಂತರ ಚಟುವಟಿಕೆಯಲ್ಲಿವೆ. ಜಾನಪದ ಕಲಾವಿದರು ಆರ್ಥಿಕವಾಗಿ ತುಂಬಾ ಹಿಂದುಳಿದಿರುವುದರಿಂದ ಅವರಿಗೆ ಸಂಘಸಟಸ್ಥೆಗಳ ಪ್ರೋತ್ಸಾಹದ ಅಗತ್ಯವಿದೆ ಎಂದು ತಿಳಿಸಿದರು.
ಮಾಹೆಯ ಸಾಂಸ್ಕೃತಿಕ ಸಂಸ್ಥೆಗಳ ಮುಖ್ಯಸ್ಥ ಡಾ.ಜಗದೀಶ್ ಶೆಟ್ಟಿ ಮಾತನಾಡಿದರು. ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ.ತಲ್ಲೂರು ಶಿವರಾಮ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಐಯ್ಯಂಗಾರ್ ಯೋಗ ಶಿಕ್ಷಕಿ ಶೋಭಾ ಶೆಟ್ಟಿ ಅವರನ್ನು ಪತಿ ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಸುರೇಶ್ ಶೆಟ್ಟಿ ಸಮೇತ ಸನ್ಮಾನಿಸಿ, ’ಜಾನಪದ ಸಾಂಸ್ಕೃತಿಕ ಯೋಗ ಸಾಧಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜಾನಪದ ಹಬ್ಬದಲ್ಲಿ ಪ್ರದರ್ಶನ ನೀಡಿದ ವಿವಿಧ ಜಾನಪದ ತಂಡದ ಸದಸ್ಯರುಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಟ್ರಸ್ಟ್‌ನ ನಿರ್ದೇಶಕಿ ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ, ಪರಿಷತ್ತಿನ ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಅರುಣ್ ಕುಮಾರ್ ಹೆಗ್ಡೆ, ಖಜಾಂಚಿ ಪ್ರಶಾಂತ ಭಂಡಾರಿ, ಎಂ.ಕೃಷ್ಣ ಆಳ್ವ, ಗೌರವಾಧ್ಯಕ್ಷ ಶ್ರೀಧರ ಶೇಣವ, ಅಂಬಲಪಾಡಿ ರೋಟರಿ ಕ್ಲಬ್ ಅಧ್ಯಕ್ಷ ರಾಜು ಪೂಜಾರಿ, ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಶಿವಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಕರ್ನಾಟಕ ಜಾನಪದ ಪರಿಷತ್ತಿನ ಕಾರ್ಯದರ್ಶಿ ರವಿರಾಜ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಅನುಷಾ ಆಚಾರ್ಯ ವಂದಿಸಿದರು.
ಜಾನಪದ ಹಬ್ಬದಲ್ಲಿ ವಿವಿಧ ಕಲಾತಂಡಗಳಿಟದ ಕುಣಿತ ಭಜನೆ, ಹೋಳಿ ಕುಣಿತ, ಗೋಂದೋಳು, ಜಾನಪದ ವಾದ್ಯ ಗೋಷ್ಠಿ, ಕಲಾಮಯಂ ತಂಡದಿಟದ ಜಾನಪದ ವೈಭವ ಮೊದಲಾದ ಕಾರ್ಯಕ್ರಮಗಳು ಜನಮನ ಸೂರೆಗೊಂಡವು.







