ಚಾಲನೆಯಲ್ಲಿಲ್ಲದ ಹಿರಿಯ ನಾಗರಿಕರ ಸಹಾಯವಾಣಿ ಸಂಖ್ಯೆಗಳು!
ಇಲಾಖೆಯ ಕಾರ್ಯ ವೈಖರಿಗೆ ಆಕ್ರೋಶ: ದೂರವಾಣಿ ಸಂಖ್ಯೆ ಕಲ್ಪಿಸಲು ಆಗ್ರಹ

ಉಡುಪಿ: ಜಿಲ್ಲೆಯಲ್ಲಿ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ನಡೆಸಲ್ಪಡುವ ಹಿರಿಯ ನಾಗರಿಕರ ಸಹಾಯ ವಾಣಿ 1090 ಹಾಗೂ ದೂರವಾಣಿ ಸಂಖ್ಯೆಗಳು ಚಾಲನೆಯಲ್ಲಿಲ್ಲ ಎಂಬ ಸಂದೇಶ ದೊಂದಿಗೆ ಕೈ ಕೊಡುತ್ತಿದ್ದು, ಇದರಿಂದ ಹಿರಿಯ ನಾಗರಿಕರ ಹಿತದೃಷ್ಟಿಯಿಂದ ಹೆಚ್ಚುವರಿ ದೂರವಾಣಿ ಸಂಖ್ಯೆಯನ್ನು ಇಲಾಖೆ ಕಲ್ಪಿಸಬೇಕೆಂಬ ಆಗ್ರಹಗಳು ಕೇಳಿಬರುತ್ತಿವೆ.
ಹಿರಿಯ ನಾಗರಿಕರು ಇಂದು ಬಹಳಷ್ಟು ಕಷ್ಟದಲ್ಲಿದ್ದಾರೆ. ತುರ್ತು ಸಂದರ್ಭದಲ್ಲಿ ಅವರ ನೆರವಿಗೆ ಬರಬೇಕಾದ ಈ ದೂರ ವಾಣಿ ಸಂಖ್ಯೆಗಳಿಗೆ ಪೋನಾಯಿಸಿದರೆ ಈ ನಂಬರೇ ಅಸ್ತಿತ್ವದಲ್ಲಿಲ್ಲ ಎಂಬ ಧ್ವನಿ ಕೇಳುತ್ತದೆ. ಕೆಲವು ಸಂದರ್ಭದಲ್ಲಿ ಈ ಸಹಾಯವಾಣಿ ಮಂಗಳೂರಿಗೆ ಸಂಪರ್ಕಗೊಂಡು ಕೆಲಸಕ್ಕೆ ಬಾರದಂತಾಗುತ್ತಿದೆ. ಹೀಗಾಗಿ ಇಲಾಖೆ ತುರ್ತಾಗಿ ಪ್ರತ್ಯೇಕ ನಂಬರ್‌ನ್ನು ಸಾರ್ವಜನಿಕರಿಗೆ ನೀಡಬೇಕು ಎಂದು ಎಂದು ಸಮಾಜ ಸೇವಕ ವಿಶು ಶೆಟ್ಟಿ ಆಗ್ರಹಿಸಿದ್ದಾರೆ.
ದೂರನ್ನಾಗಿ ಸ್ವೀಕರಿಸಿ: ತುರ್ತು ಸಂದರ್ಭದಲ್ಲಿ ದೂರವಾಣಿ ಕರೆಯನ್ನೇ ‘ದೂರು’ನ್ನಾಗಿ ಸ್ವೀಕರಿಸಬೇಕು. ಹಿರಿಯ ನಾಗರಿ ಕರು ಇಲಾಖಾ ಕಚೇರಿಗೆ ಬಂದು ಲಿಖಿತ ರೂಪದಲ್ಲಿ ದೂರು ಕೊಡುವ ಸ್ಥಿತಿಯಲ್ಲಿರುವುದಿಲ್ಲ. ಹಾಗಾಗಿ ತಮ್ಮ ತೊಂದರೆ ಯನ್ನು ಪೋನ್ ಮೂಲಕ ತಿಳಿದಾಗ, ನಾವು ಪೋನ್ ಮೂಲಕ ದೂರನ್ನು ಸ್ವೀಕರಿಸುವುದಿಲ್ಲ, ಕಚೇರಿಗೆ ಬಂದೇ ಸಲ್ಲಿಸ ಬೇಕು ಎಂಬ ಷರತ್ತು ವಿಧಿಸಿದರೆ ಸಮಸ್ಯೆಯಾಗುತ್ತದೆ.
ಈ ರೀತಿಯಾದರೆ ಯಾರೂ ದೂರು ಕೊಡಲು ಮುಂದೆ ಬಾರದ ಪರಿಸ್ಥಿತಿ ಬರಬಹುದು. ಕೊಲೆ, ದರೋಡೆ ಪ್ರಕರಣಗಳಿಗೆ ಕಚೇರಿಗೆ ಬಂದು ಲಿಖಿತ ದೂರನ್ನು ಸಲ್ಲಿಸಬಹುದು. ಆದರೆ ಇದು ಹಿರಿಯ ನಾಗರಿಕರ ರಕ್ಷಣೆ ವಿಷಯ. ಹೀಗಾಗಿ ಇಲಾಖಾಧಿಕಾರಿಗಳು, ಸಹಾಯವಾಣಿ ಸಿಬಂದಿಗಳು ಸ್ಪಂದನಾ ಮನೋಭಾವವನ್ನು ಬೆಳೆಸಿಕೊಳ್ಳುವುದು ಅತೀ ಮುಖ್ಯ ವಾಗಿದೆ ಎಂದು ಅವರು ಸಲಹೆ ನೀಡಿದ್ದಾರೆ.
ಪ್ರಕರಣವೊಂದರಲ್ಲಿ ಜಿಲ್ಲಾಸ್ಪತ್ರೆಯಿಂದ ಬಿಡುಗಡೆಯಾದ ವೃದ್ಧ ಮಹಿಳೆಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಇಲಾಖೆಯ ಸಹಾಯವಾಣಿಗೆ ಪೋನಾಯಿಸಿದರೆ ಅಲ್ಲಿನ ಎರಡೂ ನಂಬರ್‌ಗಳು ಕೂಡಾ ಚಾಲನೆಯಲ್ಲಿಲ್ಲ ಎಂಬ ಸಂದೇಶ ಬರುತ್ತಿದೆ. ಇದು ಇಲಾಖೆಯ ವೈಫಲ್ಯವೇ ಅಥವಾ ಸಹಾಯ ವಾಣಿಯದ್ದೇ ಎಂಬುದನ್ನು ಅಧಿಕಾರಿಗಳು ಸ್ಪಷ್ಟ ಪಡಿಸಬೇಕು. ಹಿರಿಯ ನಾಗರಿಕರ ಬದುಕಿನಲ್ಲಿ ಚೆಲ್ಲಾಟ ಮಾಡಬಾರದು. ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
‘ಹಿರಿಯ ನಾಗರಿಕರ ಸಹಾಯವಾಣಿ ಸಂಖ್ಯೆಗಳಾದ ದೂ.ಸಂಖ್ಯೆ 2526394 ಹಾಗೂ 1090 ನಂಬರಗಳು ತಪ್ಪು ನಂಬರ್‌ಗಳಲ್ಲ. ಆದರೆ ಅವು ದಿನದ 24ಗಂಟೆ ಬಿಡಿ, ಎಂಟು ತಾಸು ಕೂಡಾ ಸಿಗುವುದೇ ಕಷ್ಟ. ಹಿಂದೆ ಸಹಾಯವಾಣಿಯ ಸಿಬಂದಿಯೊಬ್ಬರು ತಮ್ಮ ವೈಯುಕ್ತಿಕ ನಂಬರನ್ನೇ ನೀಡಿದ್ದರು. ಇದೇ ಮಾದರಿಯನ್ನು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಅನುಸರಿಸುವುದು ಸೂಕ್ತ. ಹೆಚ್ಚುವರಿ ಮೊಬೈಲ್ ನಂಬರನ್ನು ಸಹಾಯವಾಣಿಗೆ ಒದಗಿಸುವುದು ಅತೀ ಅಗತ್ಯ’
-ವಿಶು ಶೆಟ್ಟಿ, ಸಮಾಜ ಸೇವಕರು, ಉಡುಪಿ







