ಅಂಬೇಡ್ಕರ್ ಯುವಸೇನೆ ವತಿಯಿಂದ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ
ಉಡುಪಿ, ಅ.30: ಉಡುಪಿ ಜಿಲ್ಲೆ ಅಂಬೇಡ್ಕರ್ ಯುವಸೇನೆ ವತಿಯಿಂದ ದಲಿತರ ಮೇಲಿನ ದೌರ್ಜನ್ಯ ಹಾಗೂ ವಿವಿಧ ಬೇಡಿಕೆಗಳನ್ನು ರಾಜ್ಯ ಸರಕಾರದ ಗಮನ ಸೆಳೆಯಲು ವಿಫಲರಾಗಿರುವ ಕಾಂಗ್ರೆಸ್ ವಿರುದ್ಧ ಬುಧವಾರ ಉಡುಪಿ ಕಾಂಗ್ರೆಸ್ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ದಲಿತ ಮುಖಂಡ ಜಯನ್ ಮಲ್ಪೆ, ದಲಿತರನ್ನು ಕೇವಲ ಚುನಾವಣಾ ಓಟು ಬ್ಯಾಂಕ್ ಆಗಿ ಬಳಸಿಕೊಂಡು ಬರುತ್ತಿರುವ ಕಾಂಗ್ರೆಸ್ ಮುಖಂಡರು ದಲಿತರಿಗೆ ದ್ರೋಹ ಎಸಗಿದ್ದಾರೆ. ದಲಿತರ ಯಾವುದೇ ಬೇಡಿಕೆಗಳಿಗೆ ಉಡುಪಿಯ ಕಾಂಗ್ರೆಸ್ ಮುಖಂಡರು ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಕೆಲವು ಸ್ವಾರ್ಥ ನಾಯಕರಿಂದ ಕಾಂಗ್ರೆಸ್ ಪಕ್ಷ ಸರ್ವನಾಶ ಆಗುತ್ತಿದೆ. ಅಂತಹ ನಾಯಕರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು. ಇವರಿಗೆ ಪಕ್ಷದಲ್ಲಿರುವ ಯಾವುದೇ ಯೋಗ್ಯತೆ ಇಲ್ಲ. ಉಸ್ತುವಾರಿ ಸಚಿವರು ಕೂಡ ದಲಿತರ ಸಮಸ್ಯೆ ಗಳಿಗೆ ಸ್ಪಂದಿಸುತ್ತಿಲ್ಲ. ದಲಿತ ಸಮಾಜವನ್ನು ಕಡೆಗಣಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಪ್ರತಿಭಟನೆಯಲ್ಲಿ ದಲಿತ ಮುಖಂಡ ಸಂಜೀವ ಬಳ್ಕೂರು, ಅಂಬೇಡ್ಕರ್ ಯುವಸೇನೆ ಜಿಲ್ಲಾ ಸ್ಥಾಪಕಾಧ್ಯಕ್ಷ ಹರೀಶ್ ಸಾಲ್ಯಾನ್, ಮುಖಂಡರಾದ ಸಾಧು ಚಿಟ್ಪಾಡಿ, ಭಗವನ್‌ದಾಸ್ ಮಲ್ಪೆ, ಗುಣ ತೊಟ್ಟಂ, ಕೃಷ್ಣ ಬಂಗೇರ ಪಡುಬಿದ್ರಿ, ದೀಪಕ್ ಕೆರೆಕಾಡು, ರಾಮ ಬೈಂದೂರು, ಸುಕೇಶ್ ನಿಟ್ಟೂರು ಮೊದಲಾದವರು ಉಪಸ್ಥಿತರಿದ್ದರು.