‘ಸಂವಿಧಾನ ಬದಲಿಸಬೇಕು ಎನ್ನುವ ಮಾತನ್ನು ನಾನು ಹೇಳಿಯೇ ಇಲ್ಲ’ : ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
“ಆಡದೇ ಇರುವ ಮಾತಿಗೆ ಜನ ದಂಗೆ ಎದ್ದ ರೀತಿ ವರ್ತಿಸುತ್ತಿದ್ದಾರೆ”

ಉಡುಪಿ : ಸಂವಿಧಾನ ಬದಲಿಸಬೇಕೆನ್ನುವ ಮಾತನ್ನು ನಾನು ಹೇಳಿಯೇ ಇಲ್ಲ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸ್ಪಷ್ಟೀಕರಣ ನೀಡಿದ್ದಾರೆ.
ದೊಡ್ಡ ವಿವಾದದ ರೂಪ ಪಡೆದಿರುವ ತಮ್ಮ ಸಂವಿಧಾನ ಕುರಿತ ಹೇಳಿಕೆಯ ಕುರಿತು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಸಂತ ಸಮಾವೇಶದಲ್ಲಿ ಸಂತರೆಲ್ಲಾ ಸೇರಿ ಲಿಖಿತ ರೂಪದ ನಿರ್ಣಯ ಕೈಗೊಂಡಿದ್ದೆವು. ಬಳಿಕ ರಾಜ್ಯಪಾಲರಿಗೆ ಕೊಟ್ಟ ಪ್ರತಿಯಲ್ಲೂ ಸಂವಿಧಾನ ಕುರಿತ ಯಾವುದೇ ಮಾತು ಉಲ್ಲೇಖ ಇಲ್ಲ”, ಎಂದು ಪ್ರತಿಪಾದಿಸಿದರು.
ಆಡದೇ ಇರುವ ಮಾತಿಗೆ ಸಮಾಜದಲ್ಲಿ ಜನ ದಂಗೆ ಎದ್ದ ರೀತಿ ವರ್ತಿಸುತ್ತಿದ್ದಾರೆ. ಸುಳ್ಳು ಆರೋಪ ಹೊರಿಸಿ ಹೇಳಿಕೆ ನೀಡುತ್ತಿದ್ದಾರೆ. ನಮ್ಮನ್ನು ಪ್ರತಿಭಟಿಸುವ ಮತ್ತು ಖಂಡಿಸುವ ಕೆಲಸವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳ ಹೇಳಿಕೆಯಿಂದ ಇಷ್ಟೆಲ್ಲ ವಿವಾದ ಆಗಿದೆ ಎಂದ ಪೇಜಾವರಶ್ರೀ, ನಿರಾಧಾರ ಆರೋಪ ಸರಿಯಲ್ಲ. ಈ ಕುರಿತ ವಿಡಿಯೋ ಕ್ಲಿಪ್ಪಿಂಗ್ ಹಾಗೂ ಲಿಖಿತ ರೂಪದ ಪತ್ರವನ್ನು ಪರಿಶೀಲಿಸಿ ಸಿಎಂ ಸಿದ್ದರಾಮಯ್ಯ ಮಾತನಾಡಬೇಕಿತ್ತು. ಪತ್ರಿಕೆಯ ವರದಿಗಾರರಿಗೆ ನಾನು ಆಡದೆ ಇರುವ ಮಾತು ಎಲ್ಲಿ ಸಿಕ್ಕಿತೋ ಗೊತ್ತಿಲ್ಲ. ಸಮಾಜ ಒಡೆಯುವ ಮತ್ತು ಕಲಹ ಸೃಷ್ಟಿಸುವ ಕೆಲಸ ಯಾರು ಮಾಡಬಾರದು ಎಂದರು.
‘ನಾನು ಪ್ರತಿ ಚುನಾವಣೆಯಲ್ಲೂ ಮತದಾನ ಮಾಡುತ್ತೇನೆ. ಈವರೆಗೆ ಯಾವುದೇ ಸಂವಿಧಾನ ವಿರೋಧಿ ಕೃತ್ಯ ಮಾಡಿಲ್ಲ. ಸಮಾಜದ ಎಲ್ಲಾ ವರ್ಗದ ಜೊತೆ ಪ್ರೀತಿ ಸಹಬಾಳ್ವೆಯಿಂದ ಇದ್ದೇನೆ. ಸಮಾಜದಲ್ಲಿ ದುರ್ಬಲರ ಸೇವೆಯನ್ನು ನಿರಂತರ ಮಾಡುತ್ತಿದ್ದೇನೆ. ದಲಿತ ಕೇರಿ ಭೇಟಿ, ದುರ್ಬಲರಿಗೆ ಮನೆ ಕಟ್ಟಿಸಿ ಕೊಡುವುದು ಮಾಡುತ್ತಿದ್ದೇನೆ” ಎಂದು ಅವರು ವಿವರಿಸಿದರು.
ಪೇಜಾವರ ಮಠ ಮತ್ತು ಸಂಘ ಸಂಸ್ಥೆಗಳು, ದಾನಿಗಳ ಮೂಲಕ ನಿರಂತರ ವಾಗಿ ಸಮಜ ಕಾರ್ಯಗಳನ್ನು ಮಾಡಿ ಕೊಂಡು ಬಂದಿದೆ. ನಮ್ಮ ಮಾತಿನಿಂದ ಪ್ರೇರಣೆಗೊಂಡು ಅನೇಕ ಮಂದಿ ದುರ್ಬಲರಿಗೆ ಸೂರು ಕಟ್ಟಿಸಿ ಕೊಡುತ್ತಿದ್ದಾರೆ. ಇತ್ತೀಚಿಗೆ 16ಲಕ್ಷ ರೂ. ವೆಚ್ಚದ 14 ಮನೆಗಳನ್ನು ಉದ್ಯಮಿಯೊಬ್ಬರ (ಎಚ್.ಎಸ್.ಶೆಟ್ಟಿ) ಮೂಲಕ ಕೊರಗರಿಗೆ ನೀಡಲಾಗಿದೆ. ಒಟ್ಟು ನೂರು ಮನೆಗಳನ್ನು ಕಟ್ಟಿಸಿ ಕೊಡುವುದಾಗಿ ಅವರು ಹೇಳಿದ್ದಾರೆ ಎಂದರು.
ಆಡಿದ ಮಾತಿಗೆ ವಿರೋಧಿಸಿ, ಆದರೆ ಆಡದೇ ಇರುವ ಮಾತಿಗೆ ವಿರೋಧ ಯಾಕೆ? ಎಂದು ಪ್ರಶ್ನಿಸಿದ ಸ್ವಾಮೀಜಿ, ನಾನು ಕಾನೂನು ಹೋರಾಟ ಮಾಡಬಹುದು. ಇದರ ಹೊರತಾಗಿಯೂ ನನಗೆ ಮಾಡಲು ಬೇರೆ ಬೇಕಷ್ಟು ಕೆಲಸಗಳಿವೆ. ದೇವರೇ ಎಲ್ಲರಿಗೂ ಒಳ್ಳೆಯ ಬುದ್ಧಿ ಕೊಡಲಿ ಎಂದರು.
►ಇದು ಬಹುಸಂಖ್ಯಾತ ಹಿಂದೂಗಳ ರಾಷ್ಟ್ರ
ಭಾರತ ಬಹುಸಂಖ್ಯಾತ ಹಿಂದೂಗಳ ರಾಷ್ಟ್ರ. ಜನಗಣತಿ ಹೇಳುವ ಪ್ರಕಾರ ಇದು ಹಿಂದೂಸ್ತಾನ. ಇಲ್ಲಿ ಹಿಂದುಗಳ ಭಾವನೆಗೆ ಬೆಲೆ ಕೊಡುವ ಸರಕಾರವನ್ನು ಅಧಿಕಾರಕ್ಕೆ ತರಬೇಕು ಎಂದು ಹೇಳಿದ್ದು ಹೌದು. ಸಂವಿಧಾನವನ್ನು ಬದಲಿಸಿ ಅಥವಾ ತಿದ್ದುಪಡಿ ಮಾಡಿ ಎಂದು ನಾನು ಯಾವತ್ತೂ ಹೇಳಿಲ್ಲ ಎಂದು ಪೇಜಾವರ ಶ್ರೀಗಳು ಪುನರುಚ್ಛರಿಸಿದರು.
ಸಂವಿಧಾನ ಎಂಬ ಶಬ್ದವನ್ನೇ ನಾನು ಬಳಸಿಲ್ಲ. ಚುನಾಯಿತ ಸರಕಾರ ಸರ್ವರ ಸರಕಾರ ಆಗಬೇಕು. ಎಲ್ಲಾ ಪ್ರಜೆಗಳನ್ನು ಏಕರೂಪವಾಗಿ ಕಾಣಬೇಕು. ಏಕಮತೀಯರನ್ನು ಓಲೈಸುವ ಪ್ರವೃತ್ತಿಯನ್ನು ನೋಡುತಿದ್ದೇವೆ. ಇದು ನಿಲ್ಲಬೇಕು ಎಂದು ವಿಶ್ವಪ್ರಸನ್ನ ತೀರ್ಥರು ಅಭಿಪ್ರಾಯಪಟ್ಟರು.







