ಸಂವಿಧಾನ ಉಳಿಸುವುದಲ್ಲ, ಬಲಪಡಿಸಬೇಕು: ಅಣ್ಣಾಮಲೈ

ಉಡುಪಿ, ಜ.11: ಸಂವಿಧಾನದ ಪ್ರಕಾರ ನಮ್ಮ ಜೀವನ ಸಾಗುತ್ತಿದೆ. ಸಂವಿಧಾನ ಬಿಟ್ಟು ನಮ್ಮ ಬದುಕು, ಭವಿಷ್ಯ ಇಲ್ಲ. ಆದುದರಿಂದ ಸಂವಿಧಾನ ವನ್ನು ಉಳಿಸುವುದಲ್ಲ, ಬಲಪಡಿಸಬೇಕು. ದೇಶದ ಯುವಜನತೆ ನಮ್ಮ ಸಂವಿಧಾನವನ್ನು ಹೆಚ್ಚು ಹೆಚ್ಚು ತಿಳಿದುಕೊಳ್ಳಬೇಕು ಎಂದು ಬಿಜೆಪಿ ತಮಿಳು ನಾಡು ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ.
ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟಿಸ್ ವತಿಯಿಂದ ಶನಿವಾರ ಉಡುಪಿ ಪುರಭವನದಲ್ಲಿ ಆಯೋಜಿಸಲಾದ ಸಂವಿಧಾನ ಸಮ್ಮಾನ್ ಅಭಿಯಾನ ಮತ್ತು ಸಂವಿಧಾನ ಬದಲಾಯಿಸಿದ್ದು ಯಾರು..? ಎಂಬ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಸಂವಿಧಾನದ 106 ತಿದ್ದುಪಡಿಗಳಲ್ಲಿ ನರೇಂದ್ರ ಮೋದಿ ಮಾಡಿದ 8 ಸಂವಿಧಾನ ತಿದ್ದುಪಡಿಗಳು ಅಂಬೇಡ್ಕರ್ ಹಾಗೂ ಸಂವಿಧಾನದ ಆಶಯಕ್ಕೆ ವಿರೋಧವಾಗಿಲ್ಲ. ಉಳಿದ ತಿದ್ದುಪಡಿಗಳನ್ನು ಕಾಂಗ್ರೆಸ್ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಮಾಡಿದೆ. ಆದರೆ ಕಾಂಗ್ರೆಸ್ ಬಿಜೆಪಿಯವರೇ ಸಂವಿಧಾನವನ್ನು ಬದಲಾಯಿಸುತ್ತಿದ್ದಾರೆಂದು ಅಪಪ್ರಚಾರ ಮಾಡುತ್ತಿದೆ ಎಂದರು.
ಕಾಂಗ್ರೆಸ್ ಅಂಬೇಡ್ಕರ್ ಅವರ ಹೆಸರನ್ನು ಓಟು ಬ್ಯಾಂಕ್ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಅವರಿಗೆ ಅನ್ಯಾಯ ಮಾಡಿದವರೇ ಇವತ್ತು ಇನ್ನೊಂದು ಪಕ್ಷಕ್ಕೆ ಕೈ ತೋರಿಸಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ಗೋಕುಲ್‌ದಾಸ್ ಬಾರೂಕೂರು ವಹಿಸಿದ್ದರು. ಸಂವಿಧಾನ ಸಮ್ಮಾನ್ ಅಭಿಯಾನದ ವಿಭಾಗ ಸಂಚಾಲಕ ಕಿದಿಯೂರು ಉದಯ್ ಕುಮಾರ್ ಶೆಟ್ಟಿ, ಚಿಂತಕಿ ಪ್ರಪುಲ್ಲಾ ಮಲ್ಲಾಡಿ ಉಪಸ್ಥಿತರಿದ್ದರು. ಅಭಿಯಾನದ ಜಿಲ್ಲಾ ಸಂಚಾಲಕಿ ರೇಷ್ಮಾ ಉದಯ್ ಶೆಟ್ಟಿ ಸ್ವಾಗತಿಸಿದರು. ರತ್ನಾಕರ್ ಇಂದ್ರಾಳಿ ಕಾರ್ಯಕ್ರಮ ನಿರೂಪಿಸಿದರು.







