ವಿದ್ಯಾರ್ಥಿಗಳಲ್ಲಿ ಸೇವಾ ಪ್ರಜ್ಞೆ ಬೆಳೆಸುವುದು ಅಗತ್ಯ: ಡಾ.ಬಿಎಚ್‌ವಿ ಪೈ

ಮಣಿಪಾಲ: ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವಾ ಮನೋಭಾವನೆ ವ್ಯಾಸಂಗದ ಸಮಯದಲ್ಲಿ ಮೂಡಿಸಿದಾಗ ಅವರು ಭವಿಷ್ಯದಲ್ಲಿ ದೇಶದ ಪ್ರಬುದ್ಧ ನಾಗರಿಕರಾಗಲು ಸಹಾಯವಾಗುತ್ತದೆ. ರಕ್ತದಾನ ಶಿಬಿರಗಳನ್ನು ಕಾಲೇಜುಗಳಲ್ಲಿ ಆಯೋಜನೆ ಮಾಡಿದಾಗ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ ಮೂಡುವುದಲ್ಲದೆ ಸೇವಾ ಪ್ರಜ್ಞೆಯೂ ಕೂಡ ಬೆಳೆಯುತ್ತದೆ ಎಂದು ಮಣಿಪಾಲ ಡಾ.ಟಿ.ಎಂ.ಎ.ಪೈ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಹೆಚ್.ವಿ ಪೈ ಹೇಳಿದ್ದಾರೆ.
ಮಣಿಪಾಲ ಡಾ.ಟಿ.ಎಂ.ಎ.ಪೈ ಪಾಲಿಟೆಕ್ನಿಕ್ ಕಾಲೇಜು, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಮತ್ತು ಮಣಿಪಾಲ ಕೆಎಂಸಿ ಆಸ್ಪತ್ರೆಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಲಾದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಉಡುಪಿ ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ್, ಕಾಲೇಜಿನ ಉಪ ಪ್ರಾಂಶುಪಾಲ ಗಣೇಶನ್ ಶೆಣೈ, ಪ್ರಬಂಧಕ ರಾಧಾಕೃಷ್ಣ ಸಾಮಂತ್, ರಕ್ತ ನಿಧಿ ಕೇಂದ್ರದ ಮುಖ್ಯಸ್ಥ ಡಾ.ಶಿವಾನಂದ ಮತ್ತಿತರರು ಉಪಸ್ಥಿತರಿದ್ದರು. ಅಭಯ ಹಸ್ತದ ಅಧ್ಯಕ್ಷ ಸತೀಶ್ ಸಾಲಿಯಾನ್ ಅಧ್ಯಕ್ಷತೆ ವಹಿಸಿದ್ದರು. ದೀಕ್ಷಾ ಡಿ.ಪೂಜಾರಿ ಸ್ವಾಗತಿಸಿದರು. ಪೃಥ್ವಿ ನಾಯಕ್ ಕಾರ್ಯಕ್ರಮ ನಿರೂಪಿಸಿದರು.





