ಉಡುಪಿ| ಮಗಳಿಗೆ ನೀಡಿದ ದಾನಪತ್ರವನ್ನು ಅಸಿಂಧುಗೊಳಿಸಿದ ನ್ಯಾಯಮಂಡಳಿ
ಹಿರಿಯ ನಾಗರಿಕರಿಗೆ ನೆಮ್ಮದಿ ತಂದ ತೀರ್ಪು

ಉಡುಪಿ: ಕುಂದಾಪುರದ ಹಿರಿಯ ನಾಗರಿಕರ ನ್ಯಾಯ ಮಂಡಳಿ ಬ್ರಹ್ಮಾವರದ ಹಿರಿಯ ನಾಗರಿಕರೊಬ್ಬರು ತಮ್ಮ ಮಗಳ ಹೆಸರಿಗೆ ಬರೆದುಕೊಟ್ಟ ದಾನಪತ್ರವನ್ನು ಅಸಿಂಧು ಎಂದು ಘೋಷಿಸಿ ನೀಡಿದ ತೀರ್ಪು ಮನೆಯವರಿಂದ, ಆತ್ಮೀಯರಿಂದ ಶೋಷಣೆಗೊಳಗಾಗುವ ಹಿರಿಯರ ಪಾಲಿಗೆ ನೆಮ್ಮದಿಯನ್ನು ತಂದುಕೊಡುವಂತಿದೆ.
ಬ್ರಹ್ಮಾವರ ತಾಲೂಕಿನ ಬೈಕಾಡಿಯ ನಿವಾಸಿಗಳಾದ 80 ಹರೆಯದ ಲಾರೆನ್ಸ್ ಡಿಸೋಜ ಅವರು ತನ್ನ ಮಗಳ ಹೆಸರಿಗೆ ತಾನೇ ದುಡಿದು ಕಟ್ಟಿಸಿದ ಹೆಂಚಿನ ಮನೆ, ಬಾವಿ ಸಹಿತದ ಐದು ಸೆನ್ಸ್ ಜಾಗವನ್ನು ದಾನಪತ್ರದ ಮೂಲಕ ನೀಡಿದ್ದು, ಬಳಿಕ ಆಕೆಯಿಂದ ತೀವ್ರ ಮಾನಸಿಕ ಕಿರುಕುಳ ಅನುಭವಿಸಿದ ಬಳಿಕ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ನೆರವಿನಿಂದ ನ್ಯಾಯಮಂಡಳಿಯಲ್ಲಿ ದಾವೆ ಹೂಡಿದ್ದರು.
ದಾವೆಯ ವಿಚಾರಣೆ ನಡೆಸಿದ ಕುಂದಾಪುರದ ಹಿರಿಯ ನಾಗರಿಕರ ನ್ಯಾಯ ಮಂಡಳಿಯ ಅಧ್ಯಕ್ಷ, ಕುಂದಾಪುರ ಉಪ ವಿಭಾಗಾಧಿಕಾರಿ ಕೆ.ಮಹೇಶ್ಚಂದ್ರ ಅವರು ದೂರುದಾರರು ಬರೆದುಕೊಟ್ಟ ದಾನಪತ್ರವನ್ನು ಅಸಿಂಧು ಎಂದು ಘೋಷಿಸಿದ್ದು, ಪಂಚಾಯತ್ ದಾಖಲೆಗಳಲ್ಲಿ ಮನೆಯನ್ನು ಲಾರೆನ್ಸ್ ಡಿಸೋಜರ ಹೆಸರಿನಲ್ಲಿ ಮರುಸ್ಥಾಪಿಸಲು ಸೂಕ್ತ ದಾಖಲೆಗಳನ್ನು ಒದಗಿಸುವಂತೆ ಬ್ರಹ್ಮಾವರ ಉಪನೋಂದಣಾಧಿಕಾರಿ ಅವರಿಗೆ ನಿರ್ದೇಶಿಸಿದೆ ಎಂದು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ ಶಾನುಭಾಗ್ ಇಂದಿಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ದಾವೆ ಹೂಡುವುದರಿಂದ ಆರಂಭಿಸಿ ಡಿಸೋಜರಿಗೆ ಪ್ರಾರಂಭದಿಂದಲೇ ಮಾರ್ಗದರ್ಶನ ಹಾಗೂ ಕಾನೂನು ನೆರವು ನೀಡಿದ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಡಿಸೋಜ ದಂಪತಿಗಳಿಗೆ ಸಂಪೂರ್ಣ ನ್ಯಾಯ ಸಿಗುವವರೆಗೂ ಮಾರ್ಗದರ್ಶನ ನೀಡಿಲಿದೆ ಎಂದು ತಿಳಿಸಿದರು.
ಬಡತನದಲ್ಲೇ ಬೆಳೆದು ಓದು, ಬರಹ ತಿಳಿಯದ ಲಾರೆನ್ಸ್ ಡಿಸೋಜ ಅವರು ಕಳೆದ ಐದು ದಶಕಗಳಿಂದ ಲಾರಿ ಹಾಗೂ ಬಸ್ ಚಾಲಕರಾಗಿ, ಬಳಿಕ ರಿಕ್ಷಾ ಚಾಲಕರಾಗಿ ತನ್ನ ನಾಲ್ವರು ಮಕ್ಕಳಿಗೂ ಉತ್ತಮ ವಿದ್ಯಾಭ್ಯಾಸ ನೀಡುವಲ್ಲಿ ಯಶಸ್ವಿ ಯಾಗಿದ್ದರು. ಅವರ ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳು ಮದುವೆಯಾಗಿ ಸ್ವತಂತ್ರ ಬದುಕು ಕಟ್ಟಿಕೊಂಡಿದ್ದಾರೆ ಎಂದು ಶಾನುಭಾಗ್ ತಿಳಿಸಿದರು.
ಬೈಕಾಡಿಯಲ್ಲಿ ತಾನು 1986ರಲ್ಲೇ ಮನೆಕಟ್ಟಿ ವಾಸವಾಗಿದ್ದ ಐದು ಸೆನ್ಸ್ ಜಾಗವನ್ನು ಅಕ್ರಮ ಸಕ್ರಮದ ಮೂಲಕ ಡಿಸೋಜ ಅವರು 1998ರಲ್ಲಿ ಗ್ರಾಪಂನಿಂದ ತನ್ನ ಹೆಸರಿಗೆ ಹಕ್ಕುಪತ್ರ ಪಡೆದಿದ್ದರು. ಲಾರೆನ್ಸ್ ಹಾಗೂ ಮೋಂತಿನ್ ಡಿಸೋಜ ದಂಪತಿ ಅವರು 2020ರ ಬಳಿಕ ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿದ್ದು, ಈ ಸಂದರ್ಭದಲ್ಲಿ ಎರಡನೇ ಮಗಳು ಪ್ರೆಸಿಲ್ಲಾ ಹೆತ್ತವರ ಆರೈಕೆ ಮಾಡಿದ್ದರು.
2023ರಲ್ಲಿ ಲಾರೆನ್ಸ್‌ಗೆ ಹೃದಯಾಘಾತವಾಗಿದ್ದು, ಪತ್ನಿಯೂ ಅನಾರೋಗ್ಯಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾ ದಾಗ ಅವರನ್ನು ನೋಡಿಕೊಂಡ ಪ್ರೆಸಿಲ್ಲಾ, ಇಬ್ಬರ ಮೇಲೆ ತನ್ನ ಹೆಸರಿಗೆ ಜಾಗ-ಮನೆಯನ್ನು ದಾನಪತ್ರದ ಮೂಲಕ ವರ್ಗಾಯಿಸುವಂತೆ ಒತ್ತಾಯಿಸಿದ್ದು, ಒತ್ತಡ ತಾಳದೇ ಲಾರೆನ್ಸ್ ಅವರು ಕೊನೆಗೆ ವೀಲುನಾಮೆ ಮಾಡಿಕೊಡಲು ಒಪ್ಪಿಕೊಂಡಿದ್ದರು.
ಸರಕಾರ ನೀಡಿದ ಸ್ಥಿರಾಸ್ಥಿಯನ್ನು 25 ವರ್ಷದವರೆಗೆ ಯಾರಿಗೂ ಪರಭಾರೆ ಮಾಡುವಂತಿಲ್ಲ ಎಂಬ ನಿಯಮವಿದ್ದು, ಕೊನೆಗೆ ನಾವು ಜೀವಂತವಿರುವವರೆಗೆ ಇಬ್ಬರನ್ನೂ ಚೆನ್ನಾಗಿ ನೋಡಿಕೊಳ್ಳುವ ಶರತ್ತಿನೊಂದಿಗೆ ವೀಲುನಾಮೆಯ ಮೂಲಕ ಮನೆಯನ್ನು ಮಗಳಿಗೆ ನೀಡಲು ಒಪ್ಪಿಕೊಂಡರು.
ಆದರೆ 2023ರ ಎ.19ರಂದು ಹೆತ್ತವರನ್ನು ಬ್ರಹ್ಮಾವರದ ಉಪನೋಂದಾವಣಾಧಿಕಾರಿ ಕಚೇರಿಗೆ ಕರೆದೊಯ್ದ ಮಗಳು ಪ್ರೆಸಿಲ್ಲಾ, ವೀಲುನಾಮೆ ನೋಂದಣಿಗೆ ಬದಲು ಅವಿದ್ಯಾವಂತರಾದ ತಂದೆಗೆ ತಿಳಿಯದಂತೆ ದಾನ ಪತ್ರ ತಯಾರಿಸಿ ಇಬ್ಬರ ಸಹಿ ಪಡೆದ ಮನೆ-ಜಾಗವನ್ನು ತನ್ನ ಹೆಸರಿಗೆ ಮಾಡಿಕೊಂಡಿದ್ದರು. ಆದರೆ ಸಂಶಯ ಬಂದ ಲಾರೆನ್ಸ್ ಡಿಸೋಜ ತನ್ನ ಪರಿಚಯದ ನ್ಯಾಯವಾದಿಯೊಬ್ಬರಿಗೆ ದಾಖಲೆಯನ್ನು ತೋರಿಸಿದಾಗ ದಾನಪತ್ರ ಮಾಡಿಸಿಕೊಂಡಿದ್ದು ಗೊತ್ತಾಗಿತ್ತು. ಕೊನೆಗೆ ಕರಾರುಪತ್ರವೊಂದನ್ನು ಪ್ರೆಸಿಲ್ಲಾರೊಂದಿಗೆ ಮಾಡಿಕೊಂಡಿದ್ದರು.
ಮನೆ ತನ್ನ ಹೆಸರಿಗಾದ ಬಳಿಕ ತನ್ನ ವರ್ತನೆಯನ್ನು ಬದಲಿಸಿದ ಪ್ರೆಸಿಲ್ಲಾ, ಪೋಷಕರ ಪೋಷಣೆಗೆ ಯಾವುದೇ ಹಣ ನೀಡದೇ ತಂದೆ-ತಾಯಿಗೆ ತಿಳಿಯದಂತೆ ಜಾಗ-ಮನೆಯನ್ನು ಮಾರಲು ಮುಂದಾದಾಗ ಬೇರೆ ದಾರಿ ಕಾಣದೇ ಲಾರೆನ್ಸ್ ಅವರು ಪ್ರತಿಷ್ಠಾನದ ಮೊರೆ ಹೋದರು. ಪ್ರತಿಷ್ಠಾನ ನ್ಯಾಯಕ್ಕಾಗಿ ಹಿರಿಯ ನಾಗರಿಕರ ನಿರ್ವಹಣಾ ನ್ಯಾಯಮಂಡಳಿಗೆ ದೂರು ನೀಡಿತು.
ಬಳಿಕ ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಮಂಡಳಿ, ದೂರುದಾರರ ಬರೆದುಕೊಟ್ಟ ದಾನಪತ್ರ ಹಾಗೂ ಅದಕ್ಕೆ ಪೂರಕವಾಗಿ ಮಾಡಿಕೊಂಡ ಕರಾರುಪತ್ರದಂತೆ ಹೆತ್ತವರನ್ನು ನೋಡಿಕೊಳ್ಳದೇ ಅದರ ಷರತ್ತುಗಳನ್ನು ಉಲ್ಲಂಘಿಸಿದ್ದು ಹಾಗೂ ಇತರ ಕಾರಣಗಳಿಗಾಗಿ ದೂರುದಾರರು ಬರೆದುಕೊಟ್ಟ ದಾನಪತ್ರವನ್ನು ರದ್ದುಗೊಳಿಸಿದ್ದಾರೆ. ಇದರೊಂದಿಗೆ ಡಿಸೋಜ ದಂಪತಿಗಳು ಬದುಕಿರುವವರೆಗೆ ಅವರ ದೈನಂದಿನ ಖರ್ಚುವೆಚ್ಚಕ್ಕಾಗಿ ನಾಲ್ವರು ಮಕ್ಕಳು ಪ್ರತಿ ತಿಂಗಳು ತಲಾ ಒಂದು ಸಾವಿರ ರೂ. ನೀಡುವಂತೆ ಆದೇಶಿಸಿದ್ದಾರೆ ಎಂದು ಡಾ. ಶಾನುಭಾಗ್ ತಿಳಿಸಿದರು.
ಜೀವನ ಸಾಗಿಸುವುದೇ ಕಷ್ಟವಾಗಿರುವುದರಿಂದ 80 ವರ್ಷ ಪ್ರಾಯದಲ್ಲಿ ತಾನು ಮತ್ತೆ ರಿಕ್ಷಾ ಓಡಿಸುತಿದ್ದೇನೆ. ತಮ್ಮಿಬ್ಬರ ಔಷಧಿಗೆ ತಿಂಗಳಿಗೆ 8ರಿಂದ 10 ಸಾವಿರ ರೂ.ಬೇಕಾಗಿದೆ. ಹೀಗಾಗಿ ಮಕ್ಕಳು ನೀಡುವ ಹಣವನ್ನು ಹೆಚ್ಚಿಸಬೇಕೆಂಬುದು ತಮ್ಮ ಒತ್ತಾಯವಾಗಿದೆ ಎಂದು ಮೋಂತಿನ್ ಡಿಸೋಜ ತಿಳಿಸಿದರು.







