ಕರ್ನಾಟಕ ಕ್ರೀಡಾಕೂಟ| ಕಯಾಕಿಂಗ್ ಎಸ್‌ಯುಪಿ: ಉಡುಪಿಗೆ ಎರಡು ಚಿನ್ನದ ಪದಕ
► ಟೇಬಲ್ ಟೆನಿಸ್: ಉಡುಪಿಯ ಪುರುಷರಿಗೆ ಬೆಳ್ಳಿ ಪದಕ ►ಬಿಲ್ಲುಗಾರಿಕೆ: ಚಾಮರಾಜನಗರಕ್ಕೆ ಚಿನ್ನ

ಉಡುಪಿ, ಜ.19: ಬ್ರಹ್ಮಾವರ ತಾಲೂಕು ಹೇರೂರು ಮಡಿಸಾಲು ಹೊಳೆಯಲ್ಲಿ ಕರ್ನಾಟಕ ಕ್ರೀಡಾಕೂಟದ ಕಯಾಕಿಂಗ್‌ನ ಸ್ಟಾಂಡ್‌ಅಪ್ ಪೆಡಲ್‌ನ (ಎಸ್‌ಯುಪಿ) ಪುರುಷರ ಹಾಗೂ ಮಹಿಳೆಯರ 500ಮೀ. ಸ್ಪರ್ಧೆಯಲ್ಲಿ ಆತಿಥೇಯ ಉಡುಪಿ ತಂಡ ಚಿನ್ನದ ಪದಕವನ್ನು ಗೆದ್ದುಕೊಂಡವು.
ಮಹಿಳೆಯರ ವಿಭಾಗದಲ್ಲಿ ಉಡುಪಿ ತಂಡ 4.32ಸೆ.ಗಳಲ್ಲಿ ಮೊದಲಿಗರಾಗಿ ದೂರ ಕ್ರಮಿಸುವ ಮೂಲಕ ಚಿನ್ನದ ಪದಕ ಪಡೆದರೆ, ದಕ್ಷಿಣ ಕನ್ನಡ 5.24ಸೆ. ಗಳೊಂದಿಗೆ ಬೆಳ್ಳಿ ಪದಕ ಹಾಗೂ ಉತ್ತರ ಕನ್ನಡ ಜಿಲ್ಲಾ ತಂಡ 6.02ಸೆ. ಗಳೊಂದಿಗೆ ಕಂಚಿನ ಪದಕವನ್ನು ಗೆದ್ದುಕೊಂಡಿತು.
500ಮೀ. ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಉಡುಪಿ 3.53ಸೆ. ಸಾಧನೆಯೊಂದಿಗೆ ಚಿನ್ನದ ಪದಕ ಪಡೆದರೆ, ಬೆಂಗಳೂರು ನಗರ ತಂಡ 3.59ಸೆ.ಗಳೊಂದಿಗೆ ಬೆಳ್ಳಿ ಹಾಗೂ ದಾವಣಗೆರೆ ಕಂಚಿನ ಪದಕಗಳನ್ನು ಗೆದ್ದು ಕೊಂಡವು.
ಚಿತ್ರದುರ್ಗಕ್ಕೆ ಎರಡು ಚಿನ್ನ: ಚಿತ್ರದುರ್ಗದ ತಂಡಗಳು ಡ್ರ್ಯಾಗನ್ ಬೋಟ್ ರೇಸ್‌ನ ಮಿಕ್ಸೆಡ್ 500ಮೀ. ಹಾಗೂ 200ಮೀ. ರೇಸ್ ಎರಡರಲ್ಲೂ ಮೊದಲಿಗರಾಗಿ ಗುರಿಮುಟ್ಟುವ ಮೂಲಕ ಎರಡರಲ್ಲೂ ಚಿನ್ನದ ಪದಕ ಗೆದ್ದುಕೊಂಡವು.
ಪುರುಷರು ಹಾಗೂ ಮಹಿಳೆಯರು ಸೇರಿ 10+2 ಮಂದಿ ಹುಟ್ಟುಹಾಕಿದ ಈ ಸ್ಪರ್ಧೆಯ 200ಮೀ. ರೇಸ್‌ನಲ್ಲಿ ಚಿತ್ರದುರ್ಗ ಚಿನ್ನ, ಬೆಂಗಳೂರು ನಗರ ಬೆಳ್ಳಿ ಹಾಗೂ ಬೆಂಗಳೂರು ಗ್ರಾಮಾಂತರ ಕಂಚಿನ ಪದಕ ಪಡೆದರೆ, 500ಮೀ. ರೇಸ್‌ನಲ್ಲೂ ಚಿತ್ರದುರ್ಗ ಚಿನ್ನ, ಬೆಂಗಳೂರು ನಗರ ಬೆಳ್ಳಿ ಹಾಗೂ ಬೆಂಗಳೂರು ಗ್ರಾಮಾಂತರ ಕಂಚಿನ ಪದಕ ಗೆದ್ದುಕೊಂಡವು.
ಟೇಬಲ್ ಟೆನಿಸ್: ಉಡುಪಿ ಪುರುಷರಿಗೆ ಬೆಳ್ಳಿ ಪದಕ
ಕರ್ನಾಟಕ ಕ್ರೀಡಾಕೂಟದ ಪುರುಷರ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಉಡುಪಿಯ ಪುರುಷರ ತಂಡ ಫೈನಲ್‌ನಲ್ಲಿ ಬೆಂಗಳೂರು ತಂಡದ ಕೈಯಲ್ಲಿ ಸೋತು ಬೆಳ್ಳಿ ಪದಕಕ್ಕೆ ತೃಪ್ತಿ ಪಡಬೇಕಾಯಿತು.
ಅಶ್ವಿನ್ ಹನಗೋಡು, ಸುದರ್ಶನ್ ಕುಮಾರ್, ಪ್ರೇಮಚಂದರ್ ಜಿ. ಹಾಗೂ ಪ್ರೇಮ್ ಸಾಗರ್ ಅವರನ್ನೊಳಗೊಂಡ ತಂಡ ಚಿನ್ನದ ಪದಕ ಪಡೆದರೆ, ಸನ್ಮಾನ್ ಶಶಿಧರ್ ಮಲ್ಪೆ, ಪರಿತೋಷ್ ಹಾಗೂ ಆದಿತ್ಯ ಕೋಟ್ಯಾನ್ ಅವರ ಉಡುಪಿ ತಂಡ ಬೆಳ್ಳಿ ಪದಕ ಪಡೆಯಿತು.
ಸೆಮಿಫೈನಲ್‌ನಲ್ಲಿ ಸೋತ ತಂಡಗಳಾದ ಮಂಗಳೂರು ಹಾಗೂ ಮೈಸೂರು ತಂಡಗಳು ಕಂಚಿನ ಪದಕಗಳನ್ನು ಪಡೆದವು.
ಸಿಂಗಲ್ಸ್ ಫಲಿತಾಂಶ: ಟೇಬಲ್‌ಟೆನಿಸ್ ಸ್ಪರ್ಧೆಯ ಪುರುಷರ ಸಿಂಗಲ್ಸ್‌ನಲ್ಲಿ ಚಿನ್ನದ ಪದಕ ಬೆಂಗಳೂರಿನ ಅಶ್ವಿನ್ ಹನಗೋಡು ಅವರ ಪಾಲಾದರೆ, ಸುದರ್ಶನ ಕುಮಾರ್ ಬೆಳ್ಳಿ ಪದಕ ಪಡೆದರು. ಧಾರವಾಡದ ಚೇತನ್ ಸಿ. ಅರಳಿಕಟ್ಟೆ ಹಾಗೂ ಬೆಂಗಳೂರಿನ ಪ್ರೇಮಚಂದರ್ ಜಿ. ಕಂಚಿನ ಪದಕ ಪಡೆದರು.
ಮಹಿಳೆಯರ ಸಿಂಗಲ್ಸ್‌ನಲ್ಲಿ ಬೆಂಗಳೂರಿನ ಅನನ್ಯ ಎಚ್.ಪಿ. ಚಿನ್ನದ ಪದಕ ಗೆದ್ದುಕೊಂಡರೆ, ಧಾರವಾಡದ ಸಹನಾ ಕುಲಕರ್ಣಿ ಬೆಳ್ಳಿ ಪದಕ ಪಡೆದರು. ಮಂಗಳೂರಿನ ಅರ್ನಾ ಸದೋತ್ರಾ ಹಾಗೂ ಬೆಂಗಳೂರಿನ ದೃಷ್ಟಿ ಎಸ್.ಮೊರೆ ಕಂಚಿನ ಪದಕಗಳನ್ನು ಹಂಚಿಕೊಂಡರು.
ಬಿಲ್ಲುಗಾರಿಕೆ: ಚಾಮರಾಜನಗರಕ್ಕೆ ಚಿನ್ನ
ಮಣಿಪಾಲ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಬಿಲ್ಲುಗಾರಿಕೆ (ಆರ್ಚರಿ)ಯ ಪುರುಷರ ವಿಭಾಗದ ಇಂಡಿಯನ್ ಎಲಿಮಿನೇಷನ್ ರೌಂಡ್‌ನಲ್ಲಿ ಚಾಮರಾಜ ನಗರದ ಮಲ್ಲಿಕಾರ್ಜುನ ಚಿನ್ನದ ಪದಕ ಪಡೆದರು. ಯಾದಗಿರಿಯ ರಘು ಬೆಳ್ಳಿ ಹಾಗೂ ಉತ್ತರ ಕನ್ನಡದ ಅಮಿತ್ ಕಂಚಿನ ಪದಕ ಗೆದ್ದುಕೊಂಡರು.
ಅದೇ ರೀತಿ ಮಹಿಳೆಯರ ವಿಭಾಗದ ಎಲಿಮಿನೇಷನ್ ರೌಂಡ್‌ನಲ್ಲಿ ಬೆಂಗಳೂರಿನ ಶೋಭಾ ಚಿನ್ನದ ಪದಕ ಜಯಿಸಿದರೆ, ಯಾದಗಿರಿಯ ದೇವಮ್ಮ ಬೆಳ್ಳಿ ಪದಕ ಪಡೆದರು. ಸ್ಪರ್ಧೆಯ ಕಂಚಿನ ಪದಕ ಬೆಂಗಳೂರಿನ ಪ್ರೇಮ ಅವರ ಪಾಲಾಯಿತು.







