ಕರ್ನಾಟಕ ಕ್ರೀಡಾಕೂಟದ ಟೆನಿಸ್ ಸ್ಪರ್ಧೆ: ಸ್ಕಂದ ಪ್ರಸನ್ನ, ವೇದಾಂಶ ರೆಡ್ಡಿಯಾರ್ ಫೈನಲಿಗೆ
ಬಾಕ್ಸಿಂಗ್: ಮಂಗಳೂರಿನ ಪಂಚಮಿಗೆ ಜಯ

ಮಣಿಪಾಲ, ಜ.19: ಮಣಿಪಾಲದ ಮರೀನಾ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ನಡೆದಿರುವ ಕರ್ನಾಟಕ ಕ್ರೀಡಾಕೂಟದ ಟೆನಿಸ್ ಸ್ಪರ್ಧೆಗಳಲ್ಲಿ ಬೆಂಗಳೂರಿನ ವೇದಾಂಶ ರೆಡ್ಡಿಯಾರ್ ಹಾಗೂ ಸ್ಕಂದ ಪ್ರಸನ್ನ ರಾವ್ ಅವರು ಪುರುಷರ ಸಿಂಗಲ್ಸ್ ಫೈನಲ್ ಪ್ರವೇಶಿಸಿದ್ದಾರೆ.
ಇಂದು ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ವೇದಾಂಶ ಅವರು ಮಂಡ್ಯದ ಅರ್ಜುನ್ ಸೂರಿ ಅವರನ್ನು ಸೋಲಿಸಿದರೆ, ಸ್ಕಂದ ಪ್ರಸನ್ನ ರಾವ್ ಅವರು ಬೆಂಗಳೂರಿನವರೇ ಆದ ಮಂದೀಪ್ ರೆಡ್ಡಿ ಅವರನ್ನು ಹಿಮ್ಮೆಟ್ಟಿಸಿದರು.
ಪುರುಷರ ಡಬಲ್ಸ್‌ನಲ್ಲೂ ವೇದಾಂಶ ರೆಡ್ಡಿಯಾರ್ ಹಾಗೂ ಸ್ಕಂದ ಪ್ರಸನ್ನ ರಾವ್ ಪೈನಲ್‌ಗೇರಿದ್ದಾರೆ. ಫೈನಲ್‌ನಲ್ಲಿ ಅವರು ದಾವಣಗೆರೆಯ ಅಲೋಕ್ ಆರಾಧ್ಯ ಹಾಗೂ ಬಸವರಾಜ್ ಕೆ. ಜೋಡಿಯನ್ನು ಎದುರಿಸಲಿದ್ದಾರೆ.
ಪುರುಷರ ತಂಡ ಸ್ಪರ್ಧೆಯಲ್ಲಿ ದಾವಣಗೆರೆ ಜಿಲ್ಲಾ ತಂಡವು ಬೆಂಗಳೂರು ಜಿಲ್ಲಾ ತಂಡವನ್ನು 2-0 ಅಂತರದಿಂದ ಪರಾಭವಗೊಳಿಸಿ ಫೈನಲ್ ಪ್ರವೇಶಿಸಿದೆ.
ಬಾಕ್ಸಿಂಗ್: ಮಂಗಳೂರಿನ ಪಂಚಮಿಗೆ ಜಯ
ಉಡುಪಿ ಜಿಲ್ಲಾ ಕ್ರೀಡಾಂಗಣದ ಬಾಕ್ಸಿಂಗ್ ರಿಂಗ್‌ನಲ್ಲಿ ಇಂದು ನಡೆದ ಮಹಿಳೆಯರ 45-48 ಕೆ.ಜಿ. ಬಾಕ್ಸಿಂಗ್ ಸ್ಪರ್ಧೆಯಲ್ಲಿ ಮಂಗಳೂರಿನ ಪಂಚಮಿ ಬಿ.ಬಿ. ಅವರ ತುಮಕೂರಿನ ಅಮೂಲ್ಯ ಅವರನ್ನು ಸೋಲಿಸಿ ಮುಂದಿನ ಸುತ್ತಿಗೇರಿದರು.
ಇದೇ ವಿಭಾಗದ ಇನ್ನೊಂದು ಸ್ಪರ್ಧೆಯಲ್ಲಿ ಬೆಂಗಳೂರು ನಗರದ ಸಂಭ್ರಮ ಎಂ.ಪಿ. ಅವರು ಮಂಗಳೂರಿನ ಗಗನಾ ಜೆ.ರಾವ್ ಅವರನ್ನು ಸೋಲಿಸಿದರು. 51-54 ಕೆ.ಜಿ.ವಿಭಾಗದಲ್ಲಿ ಬೆಂಗಳೂರಿನ ಸಮಂತಾ ಸಾವೇರ್ ಸಿದ್ಧಿ ಅವರು ಮಂಗಳೂರಿನ ರಿದನ್ಯ ಅವರನ್ನು ಹಿಮ್ಮೆಟ್ಟಿಸಿದರೆ, ಬೆಂಗಳೂರಿನ ಶೀತಲ್ ಅವರು ರಾಮನಗರದ ಐಶ್ವರ್ಯ ಅವರನ್ನು ಸೋಲಿಸಿದರು.
54-57 ಕೆ.ಜಿ.ವಿಭಾಗದಲ್ಲಿ ಕಾರವಾರದ ನೇಹಾ ಸಿದ್ಧಿ ಅವರು ತನ್ನ ಎದುರಾಳಿ ರಾಮನಗರದ ಐಶ್ವರ್ಯ ಅವರನ್ನೂ, ಬೆಳಗಾವಿಯ ಗ್ಯಾನೇಶ್ವರಿ ಪಿ.ಡಿ. ಅವರು ಬೆಂಗಳೂರು ನಗರದ ನಿಶ್ಚಿತಾ ಕುಮಾರ್ ಅವರನ್ನು ಹಿಮ್ಮೆಟ್ಟಿಸಿದರು.
57-60ಕೆ.ಜಿ. ವಿಭಾಗದಲ್ಲಿ ಕಾರವಾರದ ಸಮಿಯಾಬಾನು ಅವರು ಬೆಂಗಳೂರಿನ ಕನಕಲಕ್ಷ್ಮೀ ಅವರನ್ನೂ, ಬೆಂಗಳೂರಿನ ದೀಕ್ಷಾ ಅವರು ರಾಮನಗರದ ಭೂಮಿಕಾ ಎಚ್.ಎ. ಅವರನ್ನು ಸೋಲಿಸಿ ಮುನ್ನಡೆ ಸಾಧಿಸಿದರು.







