ಯಕ್ಷಗಾನದ ಬೆಳವಣಿಗೆ ಪ್ರೋತ್ಸಾಹಿಸುವ ಸಂಸ್ಥೆಗಳಿಗೆ ಪೂರ್ಣ ಸಹಕಾರ: ಅಧ್ಕಕ್ಷ ಡಾ.ತಲ್ಲೂರು

ಉಡುಪಿ, ಜ.20: ಯಕ್ಷಗಾನದ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ಸಂಸ್ಥೆಗಳಿಗೆ ಯಕ್ಷಗಾನ ಅಕಾಡೆಮಿ ಸಂಪೂರ್ಣ ಸಹಕಾರ ನೀಡಲಿದೆ. ಯಕ್ಷಗಾನದ ಉಳಿವು, ಬೆಳವಣಿಗೆಗೆ ಶ್ರಮಿಸುತ್ತಿರುವ ಸಂಸ್ಥೆಗಳು, ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹಿಸುವ ಕಾರ್ಯಕ್ಕೆ ಅಕಾಡೆಮಿ ಮುಂದಾಗಿದೆ ಎಂದು ಅಕಾಡೆಮಿಯ ಅಧ್ಕಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದ್ದಾರೆ.
ಯಶಸ್ವಿ ಕಲಾವೃಂದ ಸಂಸ್ಥೆ ಸಂಸ್ಥೆಯ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಪ್ರಯುಕ್ತ 100ನೇ ಕಾರ್ಯಕ್ರಮವಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಕಾರದಲ್ಲಿ ರವಿವಾರ ಕುಂದಾಪುರ ಸಮೀಪದ ತೆಕ್ಕಟ್ಟೆಯ ಹಯಗ್ರೀವ ಸಭಾಂಗಣದಲ್ಲಿ ಹಮ್ಮಿ ಕೊಳ್ಳಲಾದ ವಿಶ್ರಾಂತ ಕಲಾವಿದರಿಂದ ಗಾನ ವೈಭವ, ದೊಂದಿ ಹಾಗೂ ಮಂದ ಬೆಳಕಿನ ಯಕ್ಷಗಾನ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಕಾರ್ಯಕ್ರಮವನ್ನು ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ ಉದ್ಘಾಟಿಸಿದರು. ಇತಿಹಾಸ ತಜ್ಞ ಡಾ.ಬಿ.ಜಗದೀಶ್ ಶೆಟ್ಟಿ, ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಮಾತನಾಡಿದರು. ಕೇಂದ್ರದ ಯಕ್ಷಗಾನ ಗುರು ಲಂಬೋದರ ಹೆಗಡೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿಶ್ರಾಂತ ಕಲಾವಿದರಿಂದ ನಡೆದ ಗಾನ ವೈಭವ ಕಾರ್ಯಕ್ರಮದಲ್ಲಿ ಹಿರಿಯ ಭಾಗವತರಾದ ಪ್ರಭಾಕರ ಆಚಾರ್ಯ ಹೆಮ್ಮಾಡಿ, ಕೃಷ್ಣಯ್ಯ ಆಚಾರ್ಯ ಬಿದ್ಕಲ್ಕಟ್ಟೆ ಹಾಗೂ ಬಸ್ರೂರು ವಿಠಲ ಆಚಾರ್ಯ ಗಾನಸುಧೆಯನ್ನು ಹರಿಸಿ ದರು. ಮದ್ದಳೆಯಲ್ಲಿ ಕೇಂದ್ರದ ಪ್ರಾಚಾರ್ಯ ದೇವದಾಸ ರಾವ್ ಸಹಕರಿಸಿದರು. ನಂತರ ವಾಲಿವಧೆ ಯಕ್ಷಗಾನ ಪ್ರಸ್ತುತಿಗೊಂಡಿತು.







