ಅಟಲ್ ವಯೋ ಅಭ್ಯುದಯ ಯೋಜನೆ ಜಾಗೃತಿ ಕಾರ್ಯಕ್ರಮ

ಉಡುಪಿ, ಜ.20: ಭಾರತ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಮತ್ತು ನವದೆಹಲಿ ಕಮ್ಯುನಿಟಿ ರೇಡಿಯೋ ಅಸೋಸಿಯೇಶನ್ ಸಹಯೋಗದಲ್ಲಿ ರೇಡಿಯೋ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದ ವತಿಯಿಂದ ಅಟಲ್ ವಯೋ ಅಭ್ಯುದಯ ಯೋಜನೆ ಕುರಿತು ಜಾಗೃತಿ ಕಾರ್ಯಕ್ರಮ ಇತ್ತೀಚೆಗೆ ಉದ್ಯಾವರದ ಡ್ರೀಮ್ ಹೋಂ ವೃದ್ಧಾಶ್ರಮದಲ್ಲಿ ಏರ್ಪಡಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ರತ್ನ ಮಾತನಾಡಿ, ಸರಕಾರದ ವಿವಿಧ ಯೋಜನೆ ಗಳನ್ನು ಗುರುತಿನ ಚೀಟಿ ಇಲ್ಲದ ಮಂದಿಗೆ ತಲುಪಿಸುವ ನಿಟ್ಟಿನಲ್ಲಿ ಶ್ರಮಿಸ ಲಾಗುವುದು ಎಂದು ಭರವಸೆ ನೀಡಿದರು.
ಅಟಲ್ ವಯೋ ಅಭ್ಯುದಯ ಯೋಜನೆಯ ಸರಣಿ ಕಾರ್ಯಕ್ರಮದ ಪರಿಶೀಲನೆಗಾಗಿ ಕೋಲಾರದ ನಮ್ಮ ಧ್ವನಿ ಸಮು ದಾಯ ಬಾನುಲಿ ಮುಖ್ಯಸ್ಥ ಮತ್ತು ಕಮ್ಯುನಿಟಿ ರೇಡಿಯೋ ಅಸೋಸಿಯೇಶನ್‌ನ ದಕ್ಷಿಣ ವಲಯದ ಜಂಟಿ ಕಾರ್ಯದರ್ಶಿ ಶಿವಶಂಕರ್ ಭಾಗವಹಿಸಿ, ಸಂಧ್ಯಾ ಕಾಲದಲ್ಲಿ ಹಿರಿಯರು ಆರೋಗ್ಯದ ಕಡೆ ಹೆಚ್ಚು ಗಮನ ಕೊಟ್ಟು ಸಂತೋಷದಿಂದ ಜೀವನ ನಿರ್ವಹಿಸುವುದರ ಜೊತೆಗೆ ಸಮುದಾಯ ಬಾನುಲಿ ಕೇಂದ್ರದಿಂದ ಮೂಡಿ ಬರುವ ಕಾರ್ಯಕ್ರಮಗಳನ್ನು ಆಲಿಸಬೇಕು ಎಂದರು.
ರೇಡಿಯೊ ಕೇಳುವ ಸಂಸ್ಕೃತಿ ಹೆಚ್ಚಿಸಲು ಮತ್ತು ಹಿರಿಯ ನಾಗರಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಶ್ರಮಕ್ಕೆ ರೇಡಿಯೊ ಸೆಟ್ ಒದಗಿಸುವ ವ್ಯವಸ್ಥೆ ಮಾಡುವುದಾಗಿ ರೇಡಿಯೊ ಮಣಿಪಾಲ್‌ನ ಸಹಾಯಕ ಪ್ರಾಧ್ಯಾಪಕಿ ಮತ್ತು ಸಂಯೋಜಕಿ ಡಾ.ರಶ್ಮಿ ಅಮ್ಮೆಂಬಳ ಭರವಸೆ ನೀಡಿದರು. ಸಿಬ್ಬಂದಿ ಮಂಜುನಾಥ್ ಜಿ.ಎಚ್. ಸಹಕರಿಸಿದರು.







