ಅಂಬಲಪಾಡಿ ಯಕ್ಷಗಾನ ಮಂಡಳಿಯ ವಿವಿಧ ಪ್ರಶಸ್ತಿಗಳಿಗೆ ಆಯ್ಕೆ

ಬೆಲ್ತೂರು ರಮೇಶ, ಶ್ರೀಧರ ಹೆಬ್ಬಾರ್, ವಿಠಲ ಪೂಜಾರಿ
ಉಡುಪಿ, ಜ.21: ಅಂಬಲಪಾಡಿ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾ ಮಂಡಳಿಯ 67ನೇ ರ್ವಾಕೋತ್ಸವ ಫೆ.1ರ ಶನಿವಾರ ಸಂಜೆ 6 ಗಂಟೆಗೆ ಕಂಬ್ಳಕಟ್ಟದ ‘ಶ್ರೀ ಜನಾರ್ದನ ಮಂಟಪ’ದಲ್ಲಿ ನಡೆಯಲಿದ್ದು, ಪ್ರತೀ ವರ್ಷದಂತೆ ಈ ಸಂದರ್ಭ ಯಕ್ಷಗಾನಕ್ಕೆ ವಿಶೇಷ ಕೊಡುಗೆ ನೀಡಿದ ಸಂಸ್ಥೆಗೆ ಮತ್ತು ಮೂವರು ಸಾಧಕ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
ಅಂಬಲಪಾಡಿ ದೇವಳದ ಧರ್ಮದರ್ಶಿಯಾಗಿದ್ದ ನಿ.ಬೀ.ಅಣ್ಣಾಜಿ ಬಲ್ಲಾಳರ ಹೆಸರಿನಲ್ಲಿ ಸ್ಥಾಪಿಸಿದ ‘ನಿಡಂಬೂರುಬೀಡು ಬಲ್ಲಾಳ ಪ್ರಶಸ್ತಿ’ಗೆ ಕಳೆದ 38 ವರ್ಷಗಳಿಂದ ಯಕ್ಷಗಾನ, ಕಲಿಕೆ, ಸ್ಪರ್ಧೆ, ಸಮ್ಮಾನ, ಪ್ರತಿಭಾ ಪುರಸ್ಕಾರಗಳಿಗೆ ಸಂಬಂಧಿ ಸಿದಂತೆ ಕಾರ್ಯನಿರ್ವಹಿಸುತ್ತಿರುವ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಮಂಡಳಿ ಮಾರ್ಪಳ್ಳಿ ಆಯ್ಕೆಯಾಗಿದೆ.
ಕಿದಿಯೂರು ಜನಾರ್ದನ ಆಚಾರ್ಯ ಸ್ಮರಣಾರ್ಥ ಪ್ರಶಸ್ತಿಯನ್ನು ಹಿರಿಯ ಭಾಗವತ, ಸ್ತ್ರೀವೇಷಧಾರಿ ಕರ್ಜೆ ಶ್ರೀಧರ ಹೆಬ್ಬಾರ್, ಕಪ್ಪೆಟ್ಟು ಬಾಬು ಶೆಟ್ಟಿಗಾರ್ ಸ್ಮರಣಾರ್ಥ ಪ್ರಶಸ್ತಿಯನ್ನು ಹಿರಿಯ ಪ್ರಸಾಧನ ತಜ್ಞರಾದ ವಿಠಲ ಕರ್ಕೇರ ಬ್ರಹ್ಮಾವರ ಹಾಗೂ ಕುತ್ಪಾಡಿ ಆನಂದ ಗಾಣಿಗ ಸ್ಮರಣಾರ್ಥ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಕಲಾವಿದ ಬೆಳ್ತೂರು ರಮೇಶ ಅವರಿಗೆ ನೀಡಲಾಗುವುದು.
ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳರು ಪ್ರಶಸ್ತಿ ಪ್ರದಾನ ಮಾಡಲಿ ದ್ದಾರೆ ಎಂದು ಸಂಘದ ಅಧ್ಯಕ್ಷ ಕೆ. ಅಜಿತ್ ಕುಮಾರ್ ಮತ್ತು ಕಾರ್ಯದರ್ಶಿ ಪ್ರಕಾಶ್ ಹೆಬ್ಬಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







