ಕರ್ನಾಟಕ ಕ್ರೀಡಾಕೂಟ: ದಾವಣಗೆರೆ ತಂಡಕ್ಕೆ ಟೆನಿಸ್ ಟೀಮ್ ಚಿನ್ನದ ಪದಕ
►ಹಾಕಿ: ಹಾಸನ, ಹಾವೇರಿ ಸೆಮಿಫೈನಲಿಗೆ ►ಕಬಡ್ಡಿ: ಉಡುಪಿ, ದಕ್ಷಿಣ ಕನ್ನಡ ಮಹಿಳಾ ತಂಡಗಳು ಫೈನಲಿಗೆ

ಉಡುಪಿ, ಜ.21: ಮೈಸೂರು ತಂಡವನ್ನು 2-1ರ ಅಂತರದಿಂದ ಪರಾಭವಗೊಳಿಸುವ ಮೂಲಕ ದಾವಣಗೆರೆ ತಂಡ, ಕರ್ನಾಟಕ ಕ್ರೀಡಾಕೂಟದ ಟೆನಿಸ್‌ನ ಟೀಮ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿತು.
ಇಂದು ನಡೆದ ಪೈನಲ್‌ನ ಮೊದಲ ಸಿಂಗಲ್ಸ್‌ನಲ್ಲಿ ದಾವಣಗೆರೆಯ ಅಲೋಕ್ ಆರಾದ್ಯ, ಮೈಸೂರು ಸಾತ್ವಿಕ್ ಪ್ರಸಾದ್ ರನ್ನು ಸೋಲಿಸಿ ತಂಡಕ್ಕೆ 1-0 ಮುನ್ನಡೆ ನೀಡಿದರು. ಆದರೆ ಎರಡನೇ ಸಿಂಗಲ್ಸ್‌ನಲ್ಲಿ ಮೈಸೂರಿನ ಯೋಗಿಣಿ ಎಸ್.ಪ್ರಸಾದ್ ಅವರು ದಾವಣಗೆರೆಯ ಬಸವರಾಜ್ ಕೆ. ಅವರನ್ನು ಸೋಲಿಸಿ 1-1ರ ಸಮ ನೀಡಿದರು.
ಆದರೆ ನಿರ್ಣಾಯಕ ಡಬಲ್ಸ್‌ನಲ್ಲಿ ದಾವಣಗೆರೆಯ ಅಲೋಕ್ ಆರಾದ್ಯ ಹಾಗೂ ಬಸವರಾಜ್ ಅವರು ಮೈಸೂರಿನ ಯೋಗಿಣಿ ಪ್ರಸಾದ್ ಹಾಗೂ ವಿವೇಕ್ ಜೋಡಿಯನ್ನು ಸೋಲಿಸಿ ತಂಡಕ್ಕೆ ಚಿನ್ನದ ಪದಕ ನೀಡಿದರು.
ಪರಾಜಿತ ಮೈಸೂರು ತಂಡ ಬೆಳ್ಳಿ ಪದಕ ಪಡೆದರೆ, ಕಂಚಿನ ಪದಕ ಬೆಂಗಳೂರು ಜಿಲ್ಲಾ ತಂಡಕ್ಕೆ ಗೆದ್ದುಕೊಂಡಿತು. ಬೆಂಗಳೂರಿನ ವೇದಾಂಶ ರೆಡ್ಡಿಗಾರು ಈಗಾಗಲೇ ಸಿಂಗಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಹಾಕಿ: ಹಾಸನ, ಹಾವೇರಿ ಸೆಮಿಫೈನಲಿಗೆ
ಕರ್ನಾಟಕ ಕ್ರೀಡಾಕೂಟದ ಪುರುಷರ ಹಾಕಿ ಸ್ಪರ್ಧೆಗಳಲ್ಲಿ ಹಾವೇರಿ, ಬಳ್ಳಾರಿ, ಹಾಸನ ಹಾಗೂ ಬೆಂಗಳೂರು ನಗರ ತಂಡಗಳು ಗುಂಪಿನಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆಯುವ ಮೂಲಕ ಸೆಮಿಫೈನಲ್ ಹಂತವನ್ನು ಪ್ರವೇಶಿಸಿವೆ.
ಮಣಿಪಾಲ ಎಂಡ್‌ಪಾಯಿಂಟ್‌ನ ಹಾಕಿ ಸ್ಟೇಡಿಯಂನಲ್ಲಿ ನಾಳೆ ನಡೆಯುವ ಸೆಮಿಫೈನಲ್ ಪಂದ್ಯಗಳಲ್ಲಿ ಅಪರಾಹ್ನ 2 ಗಂಟೆ ಬೆಂಗಳೂರು ನಗರ ತಂಡ ಹಾಸನ ಜಿಲ್ಲಾ ತಂಡವನ್ನೂ, ಎರಡನೇ ಪಂದ್ಯದಲ್ಲಿ 3:30ಕ್ಕೆ ಹಾವೇರಿ ಜಿಲ್ಲಾ ತಂಡ, ಬಳ್ಳಾರಿ ತಂಡವನ್ನು ಎದುರಿಸಿ ಆಡಲಿವೆ.
ಇಂದು ನಡೆದ ಅಂತಿಮ ಲೀಗ್ ಪಂದ್ಯಗಳಲ್ಲಿ ಹಾಸನ ತಂಡ, ದಕ್ಷಿಣ ಕನ್ನಡ ತಂಡವನ್ನು 10-1 ಗೋಲುಗಳ ಅಂತರ ದಿಂದ ಸೋಲಿಸಿದರೆ, ಧಾರವಾಡ ಹಾಗೂ ಹಾವೇರಿ ನಡುವಿನ ಪಂದ್ಯ 1-1ಗೋಲುಗಳಿಂದ ಡ್ರಾನಲ್ಲಿ ಮುಕ್ತಾಯಗೊಂಡಿತು. ದಕ್ಷಿಣ ಕನ್ನಡ ವಿರುದ್ಧ ಹಾಸನ ತಂಡದ ರಮೇಶ್ ಎಚ್.ಟಿ. ಮೂರು ಗೋಲು ಬಾರಿಸಿದರೆ, ಅಮೋಘ ಹಾಗೂ ಕುಶಾ ತಲಾ ಎರಡು ಗೋಲು ಬಾರಿಸಿದರು.
ಕಬಡ್ಡಿ: ಉಡುಪಿ, ದಕ್ಷಿಣಕನ್ನಡ ಮಹಿಳಾ ತಂಡಗಳು ಫೈನಲಿಗೆ
ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿರುವ ಕರ್ನಾಟಕ ಕ್ರೀಡಾಕೂಟದ ಮಹಿಳಾ ಕಬಡ್ಡಿ ಸ್ಪರ್ಧೆಯ ಫೈನಲ್‌ನಲ್ಲಿ ನಾಳೆ ಆತಿಥೇಯ ತಂಡಗಳಾದ ಉಡುಪಿ ಹಾಗೂ ದಕ್ಷಿಣ ಕನ್ನಡ ಚಿನ್ನದ ಪದಕಕ್ಕಾಗಿ ಸೆಣಸಾಡಲಿವೆ.
ಇಂದು ನಡೆದ ಮಹಿಳೆಯರ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಉಡುಪಿ ಮಹಿಳಾ ತಂಡ, ಚಿಕ್ಕಮಗಳೂರು ಜಿಲ್ಲಾ ತಂಡವನ್ನು ಅತ್ಯಂತ ರೋಮಾಂಚಕಾರಿಯಾಗಿ 23-22ರಿಂದ ಕೇವಲ ಒಂದೇ ಒಂದು ಅಂಕದಿಂದ ಪರಾಭವಗೊಳಿಸಿತು.
ವಿರಾಮದ ವೇಳೆಗೆ ಉಡುಪಿ ಒಂದೇ ಒಂದು ಅಂಕದಿಂದ ( 10-9) ಮುನ್ನಡೆಯಲ್ಲಿತ್ತು. ವಿರಾಮದ ಬಳಿಕ ಮೇಲುಗೈಗಾಗಿ ಜಿದ್ದಾಜಿದ್ದಿನ ರೋಚಕ ಹೋರಾಟ ಮುಂದುವರಿದಿದ್ದು, ಎರಡು ತಂಡಗಳು ತಲಾ 13 ಅಂಕಗಳನ್ನು ಮಾತ್ರ ಗಳಿಸಲು ಯಶಸ್ವಿಯಾದವು. ಈ ಮೂಲಕ ಉಡುಪಿ ಒಂದೇ ಒಂದು ಅಂಕದ ಅಂತರದ ಜಯ ದಾಖಲಿಸಿತು.
ಮತ್ತೊಂದು ಸಂಪೂರ್ಣ ಏಕಪಕ್ಷೀಯ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಕನ್ನಡದ ಮಹಿಳೆಯರು,ಬೆಂಗಳೂರು ನಗರ ತಂಡವನ್ನು 44-20 ಅಂಕಗಳ ಅಂತರದಿಂದ ಹಿಮ್ಮೆಟ್ಟಿಸಿದರು. ಇಡೀ ಪಂದ್ಯದಲ್ಲಿ ದಕ್ಷಿಣ ಕನ್ನಡದ ಮಹಿಳೆಯರು ಎದುರಾಳಿಗೆ ಚೇತರಿಸುವ ಯಾವುದೇ ಅವಕಾಶ ನೀಡಲಿಲ್ಲ. ವಿರಾಮದ ವೇಳೆಗೆ ದಕ್ಷಿಣ ಕನ್ನಡ 23-11 ಅಂಕಗಳ ಮುನ್ನಡೆಯಲ್ಲಿತ್ತು.
ಇದಕ್ಕೆ ಮುನ್ನ ನಡೆದ ಕೊನೆಯ ಎರಡು ಲೀಗ್ ಪಂದ್ಯಗಳಲ್ಲಿ ಉಡುಪಿ ಮಹಿಳೆಯರು ಬೆಂಗಳೂರು ನಗರ ತಂಡವನ್ನು 23-14ರ ಅಂತರದಿಂದ ಸೋಲಿಸಿದ್ದರೆ, ದಕ್ಷಿಣ ಕನ್ನಡ ಮಹಿಳೆಯರು ಚಿಕ್ಕಮಗಳೂರನ್ನು 45-9 ಅಂಕಗಳಿಂದ ಪರಾಭವಗೊಳಿಸಿದ್ದರು.
ದ.ಕ.ಪುರುಷರೂ ಫೈನಲಿಗೆ: ದಕ್ಷಿಣ ಕನ್ನಡದ ಪುರುಷರ ತಂಡವೂ ಫೈನಲ್ ಪ್ರವೇಶಿಸಿದ್ದು, ನಾಳೆ ಬಾಗಲಕೋಟೆ ತಂಡವನ್ನು ಎದುರಿಸಲಿದ್ದಾರೆ. ಇಂದು ನಡೆದ ಸೆಮಿಫೈನಲ್‌ನಲ್ಲಿ ದಕ್ಷಿಣ ಕನ್ನಡ ತಂಡ, ಮಂಡ್ಯವನ್ನು 45-22 ಅಂಕ ಗಳಿಂದ ಸೋಲಿಸಿದೆ. ವಿರಾಮದ ವೇಳೆಗೆ ಮಂಗಳೂರು 17-12ರ ಮುನ್ನಡೆಯಲ್ಲಿತ್ತು.
ಮತ್ತೊಂದು ಸೆಮಿಫೈನಲ್‌ನಲ್ಲಿ ಬಾಗಲಕೋಟೆ ತಂಡ, ಹಾಸನ ಜಿಲ್ಲಾ ತಂಡವನ್ನು 33-24 ಅಂಕಗಳಿಂದ ಪರಾಭವಗೊ ಳಿಸಿದೆ. ಮದ್ಯಂತರದ ವೇಳೆ ಬಾಗಲಕೋಟೆ 18-13ರ ಮುನ್ನಡೆಯಲ್ಲಿತ್ತು.
ಇದಕ್ಕೆ ಮೊದಲು ನಡೆದ ಕೊನೆಯ ಲೀಗ್ ಪಂದ್ಯಗಳಲ್ಲಿ ದಕ್ಷಿಣ ಕನ್ನಡ, ಬೆಂಗಳೂರು ನಗರ ತಂಡವನ್ನು 28-11 ಹಾಗೂ ಬಾಗಲಕೋಟೆ ತಂಡ ಧಾರವಾಡವನ್ನು 34-9ರಿಂದ ಸೋಲಿಸಿ ಸೆಮಿಫೈನಲ್‌ಗೇರಿದ್ದವು.







