ಸಮುದ್ರ, ಬೀಚ್ ಸ್ವಚ್ಚತೆ ಜಾಗೃತಿಗಾಗಿ ಕಾಲ್ನಡಿಗೆ ಜಾಥಾ

ಮಲ್ಪೆ: ಇಂಡಿಯನ್ ಕೋಸ್ಟ್‌ಗಾರ್ಡ್ ಮಂಗಳೂರು ಇವರ 49ನೇ ಸ್ಥಾಪನ ದಿನ ಮತ್ತು 2025ರ ಗಣರಾಜ್ಯೋತ್ಸವದ ಅಂಗವಾಗಿ ಕೋಸ್ಟ್‌ಗಾರ್ಡ್ ಮತ್ತು ಕರಾವಳಿ ಕಾವಲು ಪೊಲೀಸ್ ಕರ್ನಾಟಕ ಇವರ ಜಂಟಿ ಆಶ್ರಯದಲ್ಲಿ ಸಮುದ್ರ ಮತ್ತು ಬೀಚ್ ಸ್ವಚ್ಚತೆ ಬಗ್ಗೆ ಜನ ಜಾಗೃತಿಗಾಗಿ ಕಾಲ್ನಡಿಗೆ ಜಾಥಾವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ಕಾಲ್ನಡಿಗೆ ಜಾಥಾವನ್ನು ಕರಾವಳಿ ಕಾವಲು ಪೋಲೀಸ್ ಘಟಕದ ಪೊಲೀಸ್ ಅಧೀಕ್ಷಕ ಮಿಥುನ್ ಎಚ್.ಎನ್. ಉದ್ಘಾಟಿಸಿ ದರು. ಮಲ್ಪೆ ಕರಾವಳಿ ಕಾವಲು ಪೊಲೀಸ್ ಕೇಂದ್ರ ಕಛೇರಿಯಿಂದ ಹೊರಟು ಸೀವಾಕ್, ಮಲ್ಪೆಬೀಚ್, ವಡಬಾಂಡೇಶ್ವರ, ಸಿಟಿಜನ್ ಸರ್ಕಲ್, ಮಲ್ಪೆ ಬಸ್ಸು ನಿಲ್ದಾಣ ಮಾರ್ಗವಾಗಿ ವಾಪಾಸು ಕೇಂದ್ರ ಕಛೇರಿಗೆ ಬಂದು ಜಾಥಾವನ್ನು ಸಮಾಪ್ತಿಗೊಳಿಸಲಾಯಿತು.
ಇಂಡಿಯನ್ ಕೋಸ್ಟ್ ಗಾರ್ಡ್ ಡೆಪ್ಯೂಟಿ ಕಮಾಂಡೆಂಟ್ ಸುರೇಂದ್ರ ಲಾಕ್ರಾ, ಮಲ್ಪೆ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕಿ ಸವಿತಾ ಖಾದ್ರಿ. ಸಹಾಯಕ ನಿರ್ದೇಶಕಿ ರೆನಿಟಾ ಡಿಸೋಜ, ಮಲ್ಪೆಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ ಹಾಗೂ ಮೀನುಗಾರರ ಮುಖಂಡರಾದ ರವಿರಾಜ್, ಸುಭಾಷ್ ಮೆಂಡನ್, ಸಾಧು ಸಾಲ್ಯಾನ್, ನಾಗರಾಜ ಸುವರ್ಣ ಮತ್ತು ಪಾಜಕ ಆನಂದತೀರ್ಥ ಪದವಿ ಪೂರ್ವ ಕಾಲೇಜಿನ ಎನ್‌ಸಿಸಿ ಅಧಿಕಾರಿ ಗೀತಾ ಪ್ರವೀಣ್ ಭಟ್, ಮಲ್ಪೆ ನೇಷನ್ ಫಸ್ಟ್‌ನ ಸೂರಜ್ ಕಿದಿಯೂರು, ಕರಾವಳಿ ಕಾವಲು ಪೊಲೀಸ್ ಘಟಕದ ಪೊಲೀಸ್ ನಿರೀಕ್ಷಕರಾದ ಪ್ರಮೋದ್ ಕುಮಾರ್, ಲೋಕೇಶ್, ಶ್ರೀಮೂರ್ತಿ ಎಸ್.ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಇಂಡಿಯನ್ ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪೊಲೀಸ್ ಕೇಂದ್ರ ಕಛೇರಿ, ಸಿಎಸ್‌ಪಿ ಹೆಜಮಾಡಿ, ಮಲ್ಪೆಮತ್ತು ಗಂಗೊಳ್ಳಿ ಠಾಣೆಯ ಅಧಿಕಾರಿ ಮತ್ತು ಕೆಎನ್‌ಡಿ ಸಿಬ್ಬಂದಿ, ಪಾಜಕ ಆನಂದತೀರ್ಥ ಪದವಿ ಪೂರ್ವ ಕಾಲೇಜಿನ ಎನ್‌ಸಿಸಿ ವಿದ್ಯಾರ್ಥಿಗಳು, ಮಲ್ಪೆ ನೇಷನ್ ಫಸ್ಟ್‌ನ ಪದಾಧಿಕಾರಿಗಳು ಹಾಗೂ ಮಲ್ಪೆಮೀನುಗಾರರ ಸಂಘದ ಪದಾಧಿಕಾರಿಗಳು ಸೇರಿ ಸುಮಾರು 200 ಮಂದಿ ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಂಡಿದ್ದರು.







