ಉಡುಪಿ ಜಿಲ್ಲಾ ಮಟ್ಟದ ಸಿರಿಧಾನ್ಯ ರೋಡ್ ಶೋಗೆ ಚಾಲನೆ

ಉಡುಪಿ, ಜ.22: ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಸಿರಿಧಾನ್ಯ ನಡಿಗೆ ಕಾರ್ಯಕ್ರಮಕ್ಕೆ ಉಡುಪಿ ಜಿಪಂ ಯೋಜನಾ ನಿರ್ದೇಶಕ ಶ್ರೀನಿವಾಸ್ ರಾವ್ ಮಂಗಳವಾರ ಮಲ್ಪೆಪೊಲೀಸ್ ಠಾಣೆಯ ಬಳಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಸಿರಿಧಾನ್ಯದ ಬಳಕೆಯಿಂದ ಯಾವ ರೀತಿಯ ಉತ್ತಮ ಆರೋಗ್ಯವನ್ನು ಹೊಂದಬಹುದು ಎಂಬುದನ್ನು ಅರಿತು ಅವುಗಳನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳಬೇಕು. ಸಿರಿಧಾನ್ಯಗಳು ಉತ್ತಮ ಪೋಷಕಾಂಶವುಳ್ಳ ಆಹಾರವಾಗಿರುವುದರಿಂದ ಇದರ ಸೇವನೆಯ ಜೊತೆಗೆ ಸಿರಿಧಾನ್ಯಗಳನ್ನು ಬೆಳೆಯಲು ರೈತರು ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ವಿಜಯ್ ಕೊಡವೂರು, ಅಪರ ಜಿಲ್ಲಾಧಿಕಾರಿ ನಾಗರಾಜ ವಿ.ನಾಯಕ್, ಜಂಟಿ ಕೃಷಿ ನಿರ್ದೇಶಕಿ ಪೂರ್ಣಿಮಾ ಜಿ.ಸಿ., ಉಪ ಕೃಷಿ ನಿರ್ದೇಶಕ ಚಂದ್ರಶೇಖರ ನಾಯಕ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಅಶೋಕ್ ಕುಮಾರ್ ಕೊಡ್ಗಿ, ಮಲ್ಪೆ ಪೊಲೀಸ್ ಠಾಣೆಯ ಎಸ್ಸೈ ರವಿ, ಕೆ.ವಿ.ಕೆ. ಮುಖ್ಯಸ್ಥ ಧನಂಜಯ, ಕೃಷಿಕ ಸಂಘದ ರಾಜ್ಯ ಪ್ರತಿನಿಧಿ ಪ್ರದೀಪ್ ಹೆಬ್ಬಾರ, ಬೈಂದೂರು ತಾಲೂಕು ಕೃಷಿಕ ಸಮಾಜ ವೆಂಕಟೇಶ ಹೆಬ್ಬಾರ ಮೊದಲಾದವರು ಉಪಸ್ಥಿತರಿದ್ದರು.





